AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ರಿಂದ 10 ಕ್ಲಾಸ್ ವಿದ್ಯಾರ್ಥಿಗಳ ಸ್ಕೂಲ್​ ಬ್ಯಾಗ್​ ಭಾರ ತಗ್ಗಿಸುವಂತೆ ಆದೇಶ: ಬ್ಯಾಗ್ ತೂಕ ಎಷ್ಟಿರಬೇಕು? ಇಲ್ಲಿದೆ ವಿವರ

ಶಾಲಾ ಮಕ್ಕಳ ಬ್ಯಾಗ್​ನ ಭಾರ ತಗ್ಗಿಸುವ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಶಿಕ್ಷಣ ಇಲಾಖೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.

1 ರಿಂದ 10 ಕ್ಲಾಸ್ ವಿದ್ಯಾರ್ಥಿಗಳ ಸ್ಕೂಲ್​ ಬ್ಯಾಗ್​ ಭಾರ ತಗ್ಗಿಸುವಂತೆ ಆದೇಶ: ಬ್ಯಾಗ್ ತೂಕ ಎಷ್ಟಿರಬೇಕು? ಇಲ್ಲಿದೆ ವಿವರ
ರಮೇಶ್ ಬಿ. ಜವಳಗೇರಾ
|

Updated on: Jun 22, 2023 | 7:55 AM

Share

ಬೆಂಗಳೂರು: 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸ್ಕೂಲ್ ಬ್ಯಾಗ್ (Students School Bag) ಹೊರೆ ತಗ್ಗಿಸುವಂತೆ  ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸರ್ಕಾರವು 2019ರಲ್ಲಿಯೇ ಬ್ಯಾಗ್ ತೂಕವನ್ನು ವೈಜ್ಞಾನಿಕವಾಗಿ ನಿಗದಿ ಮಾಡಿತ್ತು. ಆದರೂ ಬಹುತೇಕ ಶಾಲೆಗಳು ವೇಳಾಪಟ್ಟಿಯನ್ನು ನಿಗದಿ ಮಾಡದ ಪರಿಣಾಮ ಮಕ್ಕಳು ಬೆನ್ನುಮೂಳೆ ಮುರಿಯುವಂತೆ ಪುಸ್ತಕಗಳನ್ನು ಹೊರುವಂತಾಗಿತ್ತು. ಇದೀಗ ಶೈಕ್ಷಣಿಕ ವರ್ಷಾರಂಭ ಹಿನ್ನೆಲೆ ಕಡ್ಡಾಯವಾಗಿ ‘ಶಾಲಾ ಬ್ಯಾಗ್ ಹೊರೆ ತಗ್ಗಿಸುವಂತೆ’ ಶಾಲಾ ಶಿಕ್ಷಣ ಇಲಾಖೆ(School Education Department) ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಇದನ್ನೂ ಓದಿ: ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆ ಹಣ್ಣು ವಿತರಿಸಲು ರಾಜ್ಯ ಸರ್ಕಾರ ಆದೇಶ

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್​ಇಆರ್​ಟಿ) ಅಧ್ಯಯನ ನಡೆಸಿ 1-10ನೇ ಕ್ಲಾಸ್ ಮಕ್ಕಳ ಬ್ಯಾಗ್ ತೂಕ ಎಷ್ಟು ಇರಬೇಕು ಎಂಬುದನ್ನು ಸೂಚಿಸಿದೆ. ವಿದ್ಯಾರ್ಥಿಗಳ ದೇಹದ ತೂಕದ ಶೇ.10ರಿಂದ 15 ರಷ್ಟು ಮಾತ್ರ ಶಾಲಾ ಬ್ಯಾಗ್ ತೂಕವಿರಬೇಕು ಎಂದು ಶಿಫಾರಸು ಮಾಡಿದೆ. ಇದನ್ನು ಮೂಳೆತಜ್ಞರು ಕೂಡ ಅಂಗೀಕರಿಸಿದ್ದಾರೆ. ವರದಿಯಲ್ಲಿ ವಿದ್ಯಾರ್ಥಿಗಳು ಅವರ ದೇಹದ ತೂಕದ ಶೇಕಡ 10 ರಿಂದ 15 ರಷ್ಟು ತೂಕದ ಶಾಲಾ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಬಹುದಾಗಿ ಮೂಳೆ ತಜ್ಞರು ಶಿಫಾರಸು ಮಾಡಿದ್ದಾರೆ. ಈ ಕುರಿತು ಸರ್ಕಾರಿ ಆದೇಶದಲ್ಲಿ ಕ್ರಮವಹಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಎಲ್ಲಾ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡಲು ಶಿಕ್ಷಣ ಇಲಾಖೆ ಸೂಚಿಸಿದೆ.

ವಿದ್ಯಾರ್ಥಿಯ ಶಾಲಾ ಬ್ಯಾಗ್‌ ತೂಕ ಈ ಕೆಳಕಂಡಂತೆ ನಿಗದಿಪಡಿಸಲಾಗಿದ್ದು, ಕಡ್ಡಾಯವಾಗಿ ಪಾಲಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

  • 1 -2 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 1.5 ರಿಂದ 2 ಕೆಜಿ
  • 3 -5 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 2 ರಿಂದ 3 ಕೆಜಿ
  • 6 -8 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 3 ರಿಂದ 5 ಕೆಜಿ
  • 9 -10 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 4 ರಿಂದ 5 ಕೆಜಿ

ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೊರೆಯಿಲ್ಲದೇ ಸಂತಸದಾಯಕವಾಗಿ ಕಲಿಯುವ ವಾತಾವರಣವನ್ನು ರೂಪಿಸುವ ಸಲುವಾಗಿ ಶಿಕ್ಷಣ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ.

ಶಾಲಾ ಎಸ್.ಎಂ.ಸಿ./ ಎಸ್.ಡಿ.ಎಂ.ಸಿ ಹಾಗೂ ಶಾಲಾ ಮುಖ್ಯಸ್ಥರು ಮೇಲ್ಕಂಡ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು. ಹಾಗೂ 1 ರಿಂದ 5ನೇ ತರಗತಿವರೆಗೆ ಎನ್.ಸಿ.ಇ.ಆರ್.ಟಿ ನಿಗದಿಪಡಿಸಿರುವ ಪಠ್ಯಕ್ರಮವನ್ನು ಹೊರತುಪಪಡಿಸಿ ಇನ್ಯಾವುದೇ ಪಠ್ಯಕ್ರಮವನ್ನು ನಿಗದಿಪಡಿಸಿ ಬೋಧಿಸಿದರೆ ಅಂತಹ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸತಕ್ಕದ್ದು ಮತ್ತು ಈ ಬಗ್ಗೆ ನಿಗಾವಹಿಸಲು ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಲು ವಿಶೇಷ ತಂಡವನ್ನು ರಚಿಸತಕ್ಕದ್ದು ಎಂದು ತಿಳಿಸಿದೆ.

ಇನ್ನು ಅತಿಯಾದ ಹೊರೆ ಇರುವ ಶಾಲಾಬ್ಯಾಗ್‌ನಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕೆಂದು ಶಿಕ್ಷಣ ಇಲಾಖೆ ಸೂಚಿಸಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ