ಬೆಂಗಳೂರು: ಕೊರೊನಾ ಆತಂಕದ ನಡುವಲ್ಲೇ 9 ರಿಂದ 12ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಭೌತಿಕವಾಗಿ ಪಠ್ಯ ಚಟುವಟಿಕೆಗಳು ಆರಂಭವಾಗಿದ್ದು, ಅದರ ಬೆನ್ನಲ್ಲೇ ಇಂದಿನಿಂದ ಎರಡನೇ ಹಂತದಲ್ಲಿ 6,7,8 ನೇ ತರಗತಿಗೆ ಶಾಲೆ ಶುರುವಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ತೆರೆಯಲು ಅವಕಾಶ ನೀಡಲಾಗಿದ್ದು, ವಾರದಲ್ಲಿ 5 ದಿನ ತರಗತಿಗಳು ನಡೆಯಲಿವೆ. 9 ರಿಂದ 12ನೇ ತರಗತಿ ಓದುತ್ತಿರುವ ಮಕ್ಕಳಿಗೆ ಅನ್ವಯವಾಗುವ ಬಹುತೇಕ ಎಲ್ಲಾ ನಿಯಮಗಳು ಈ ಮಕ್ಕಳಿಗೂ ಅನ್ವಯವಾಗಲಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸುವ ಮುನ್ನ ಪೋಷಕರು ತಿಳಿದಿರಲೇಬೇಕಾದ ಮುಖ್ಯ ಅಂಶಗಳನ್ನು ಇಲ್ಲಿ ನೀಡಲಾಗಿದೆ.
ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ 6, 7, 8ನೇ ತರಗತಿ ಮಕ್ಕಳಿಗೆ ಶಾಲೆ ಶುರುವಾಗುತ್ತಿದೆ. ಆದರೆ, ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯ ಇರುವುದಿಲ್ಲ. ಹೀಗಾಗಿ ಮಕ್ಕಳು ಆನ್ಲೈನ್ ವಿಧಾನದಲ್ಲೂ ತರಗತಿಗೆ ಹಾಜರಾಗಬಹುದು. ಜತೆಗೆ, ವಾರದಲ್ಲಿ ಐದು ದಿನಗಳು ಮಾತ್ರ ಶಾಲೆ ನಡೆಯಲಿದ್ದು, ವಾರಾಂತ್ಯದ 2 ದಿನ ಶಾಲೆಗಳನ್ನು ಸ್ವಚ್ಛಗೊಳಿಸುವುದಕ್ಕೆ ಮೀಸಲಿರಿಸಬೇಕು ಎಂದು ಸರ್ಕಾರ ತಿಳಿಸಿದೆ.
ಒಂದು ಬಾರಿಗೆ ಶೇಕಡಾ 50ರಷ್ಟು ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹಾಜರಾಗಬೇಕು. ವಿದ್ಯಾರ್ಥಿಗಳು ದಿನ ಬಿಟ್ಟು ದಿನ ತರಗತಿಗೆ ಹಾಜರಾಗಬೇಕು. ದೈಹಿಕ ಅಂತರ ಕಾಪಾಡುವುದಕ್ಕೆ ಅನುವಾಗುವಂತೆ ಮಕ್ಕಳ ತಂಡ ರಚಿಸಬೇಕು. 15 ರಿಂದ 20 ವಿದ್ಯಾರ್ಥಿಗಳ ತಂಡ ರಚಿಸುವುದು ಅಗತ್ಯ ಎಂದು ಸೂಚನೆ ನೀಡಲಾಗಿದೆ.
ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯುವ ಯೋಚನೆ ಸದ್ಯಕ್ಕಿಲ್ಲ. ಅಂತಹ ಕಡೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದ ಮೇಲೆ ಆ ಬಗ್ಗೆ ನಿರ್ಧಾರ ಪ್ರಕಟಿಸಲಾಗುತ್ತದೆ. ಈಗ ಶಾಲೆ ಆರಂಭವಾಗುತ್ತಿರುವಲ್ಲಿಯೂ ಒಂದೊಮ್ಮೆ ಯಾವುದೇ ಮಗುವಿಗೆ ಕೊರೊನಾ ಲಕ್ಷಣ ಕಂಡುಬಂದರೆ ಅಂತಹ ಮಗು ಶಾಲೆಗೆ ಬರುವಂತಿಲ್ಲ. ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಕೊರೊನಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಶಾಲೆ, ಕಾಲೇಜು ಆವರಣದಲ್ಲಿ ಸಾಮಾಜಿಕ ಆಂತರ ಕಡ್ಡಾಯವಿರಲಿದೆ. ಶಿಕ್ಷಕರು, ಶಾಲಾ ಸಿಬ್ಬಂದಿ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದಿರಬೇಕು. ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ:
ಸದ್ಯ 1 ರಿಂದ 5ರವರೆಗೆ ಪ್ರಾಥಮಿಕ ಶಾಲೆಗಳ ಆರಂಭ ಇಲ್ಲ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಶಾಲೆ ಆರಂಭ ಮಾಡುವುದಕ್ಕೆ ಆತುರ ಬೇಡ; ಮನೆಯಲ್ಲಿ ಗಣೇಶ ಹಬ್ಬ ಆಚರಣೆ ಮಾಡಿ: ಫನಾ ಅಧ್ಯಕ್ಷ ಹೇಳಿಕೆ
(Karnataka School Reopening Classes from 6 to 8 starting from September 6th here is what you need to know)