NEP: ಬೆಂಗಳೂರು ನಗರ ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ; ಎನ್​ಇಪಿ ವಿರೋಧಿಸಿ ಸಿದ್ದರಾಮಯ್ಯ ಪತ್ರ

| Updated By: guruganesh bhat

Updated on: Sep 03, 2021 | 3:20 PM

ಬೆಂಗಳೂರು ನಗರ ವಿವಿ ವ್ಯಾಪ್ತಿಯ ಎಲ್ಲ 250 ಕಾಲೇಜುಗಳಲ್ಲೂ NEP ಅನುಷ್ಠಾನ ತರುವ ದೃಷ್ಠಿಯಿಂದ ಇಂದು ಕಾರ್ಯಕ್ರಮ ಏರ್ಪಡಿಸಲಾಗಿತ್ತು.

NEP: ಬೆಂಗಳೂರು ನಗರ ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ; ಎನ್​ಇಪಿ ವಿರೋಧಿಸಿ ಸಿದ್ದರಾಮಯ್ಯ ಪತ್ರ
ಸಿದ್ದರಾಮಯ್ಯ ಮತ್ತು ಡಾ.ಅಶ್ವತ್ಥ ನಾರಾಯಣ
Follow us on

ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು, ಇಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ, ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ NEP ಅನುಷ್ಠಾನಗೊಳಿಸಿದರು. ಬೆಂಗಳೂರು ನಗರ ವಿವಿ ಮತ್ತು ಮೌಂಟ್ ಕಾರ್ಮೆಲ್ ಕಾಲೇಜಿನ ಸಹಯೋಗದೊಂದಿಗೆ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು. ಬೆಂಗಳೂರು ನಗರ ವಿವಿ ವ್ಯಾಪ್ತಿಯ ಎಲ್ಲ 250 ಕಾಲೇಜುಗಳಲ್ಲೂ NEP ಅನುಷ್ಠಾನ ತರುವ ದೃಷ್ಠಿಯಿಂದ ಇಂದು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಹಲವರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಹೊಸ ಶಿಕ್ಷಣ ನೀರಿ ಪರಿಪೂರ್ಣವಾಗಿದೆ. ಪ್ರಾಧ್ಯಾಪಕರ, ಸಂಸ್ಥೆಗಳನ್ನು ನೋಡಿದರೆ ಸವಾಲು, ಜವಾಬ್ದಾರಿ ಹೆಚ್ಚಿದೆ. ಅದರಲ್ಲೂ ವಿಶ್ವವಿದ್ಯಾಲಯ ಮತ್ತು ಸರ್ಕಾರದ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಕೆಲವರು ವಿದ್ಯಾರ್ಥಿಗಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಎನ್ಇಪಿ ಬಗ್ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದರು. ಅಲ್ಲದೇ ಮುಂದುವರೆದು ಮಾತನಾಡಿದ ಅವರು, ಮೊದಲು ಕೋರ್ಸ್ ಮತ್ತು ಕಾಂಬಿನೇಷನ್ ಇತ್ತು. ಈಗ ಕೋರ್ಸ್ ಮತ್ತು ಸಬ್ಜೆಕ್ಟ್ ಇದೆ ಅಷ್ಟೆ. ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಪೂರಕವಾಗಲಿದೆ. ಭಾರತ ಅಭಿವೃದ್ಧಿ ಶೀಲ ರಾಷ್ಟ್ರ ಅಂತ ಕರೆಯಲಾಗುತ್ತಿದೆ. ಆದರೆ, ಅಭಿವೃದ್ಧಿ ರಾಷ್ಟ್ರ ಅಂತ ಯಾವಾಗ ಕರೆಯುವುದು? ಎಂದು ಪ್ರಶ್ನಿಸಿದರು. ಉತ್ತಮ ಶಿಕ್ಷಣದಿಂದ ಮಾತ್ರ ಭಾರತ ಅಭಿವೃದ್ಧಿ ದೇಶ ಅಂತ‌ ಕರೆಸಿಕೊಳ್ಳಲು ಸಾಧ್ಯ. ಸುಮಾರು ಐದೂವರೆ ವರ್ಷಗಳ ಬಳಿಕ ಹೊಸ ಶಿಕ್ಷಣ ನೀತಿ ಜಾರಿಯಾಗ್ತಿದೆ. ನುರಿತ ತಜ್ಞರ ಜೊತೆ ಚರ್ಚಿಸಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡಲಾಗ್ತಿದೆ. ಪಾಲಿಸಿಯ ಒಂದು ಭಾಗ ಮಾತ್ರ ಈ ವರ್ಷದಿಂದ ಪ್ರಾರಂಭವಾಗುತ್ತಿದ್ದು, ಯಾರೂ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಹೊರಡಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯುವಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರಿಗೆ ಪತ್ರ ಬರೆದಿರುವ ಅವರು, ಹೊಸ ಶಿಕ್ಷಣ ನೀತಿ ಕುರಿತಾದ ಚರ್ಚೆಯಲ್ಲಿ ತಾವು ಭಾಗವಹಿಸುವುದಿಲ್ಲ ಎಂದಿದ್ದಾರೆ.

ಪತ್ರದ ವಿವರ ಹೀಗಿದೆ
ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಅನುಷ್ಠಾನಗೊಳಿಸಲು ಚಾಲನೆ ನೀಡಲಾಗಿದೆಯೆಂದು ಹಾಗೂ ಈ ಕುರಿತು ಚರ್ಚಿಸಲು ದಿನಾಂಕವನ್ನು ನೀಡುವಂತೆ ತಮ್ಮ ಕಛೇರಿಯಿಂದ ಪತ್ರ ಬರೆದು ಕೋರಲಾಗಿದೆ. ಕರ್ನಾಟಕದಲ್ಲಿ ಈಗಾಗಲೆ ತರಾತುರಿಯಲ್ಲಿ ವಿದ್ಯಾರ್ಥಿಗಳು, ತಜ್ಞರು, ಪ್ರಾಧ್ಯಾಪಕರು, ಪೋಷಕರುಗಳ ಜೊತೆ ಚರ್ಚಿಸದೆ, ಸಾಧಕ-ಬಾಧಕಗಳನ್ನು ಪರಿಶೀಲಿಸದೆ ಈ ಶೈಕ್ಷಣಿಕ ವರ್ಷದಿಂದಲೆ ಅನುಷ್ಠಾನ ಮಾಡುವುದಾಗಿ ಹೇಳಿ ಉದ್ಘಾಟನೆಯನ್ನೂ ಮಾಡಲಾಗಿದೆ. ಉದ್ಘಾಟನೆಯನ್ನೂ ಮುಗಿಸಿ ಚರ್ಚೆ ಮಾಡಬೇಕು ಎಂದು ಕರೆಯುವುದು ಸಂಸದೀಯವಾಗಿ ಸರಿಯಲ್ಲ.

ಒಂದು ಶಿಕ್ಷಣ ನೀತಿಯ ಅನುಷ್ಠಾನವೆಂದರೆ ಸಣ್ಣ ಸಂಗತಿಯೆ? ತಾವೂ ಕೂಡ ಬೆವರಿನ ಸಂಸ್ಕೃತಿಯ ಹಿನ್ನೆಲೆಯ ಸಮುದಾಯದಿಂದ ಬಂದಿದ್ದೀರಿ. ರಾಷ್ಟ್ರಕವಿ ಕುವೆಂಪು ಅವರು ಶಿಕ್ಷಣ, ಅದರ ಗುಣಮಟ್ಟವನ್ನು ಸುಧಾರಣೆ, ಕಲಿಕೆಯ ಮಾಧ್ಯಮ ಹಾಗೂ ಸರ್ಕಾರದ ಜವಾಬ್ಧಾರಿಗಳ ಬಗ್ಗೆ ಮಾತನಾಡಿದ್ದಾರೆ. ಶಿಕ್ಷಣದ ಕುರಿತಂತೆ ಕೆಲಸ ಮಾಡುತ್ತಿರುವವರೆಲ್ಲರೂ ಕುವೆಂಪು ಅವರ ವಿಚಾರಗಳನ್ನು ಓದಿ, ಅದರಂತೆ ನಡೆದುಕೊಳ್ಳಬೇಕಾಗಿದೆ.

ಮುಂದುವರೆದ ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಸರ್ಕಾರಗಳೆ ನಿರ್ವಹಿಸುತ್ತವೆ. ಯಾವುದೇ ನಾಡಿನಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ಸಮರ್ಪಕವಾಗಿದ್ದರೆ ಆ ನಾಡಿನ ಸಮಸ್ತ ಆರೋಗ್ಯವೂ ಸರಿಯಾಗಿರುತ್ತದೆ. ಇಂದು ಭಾರತದ ಸಮಾಜಗಳು ತೀವ್ರ ರೂಪದ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಅದಕ್ಕೆ ಕಾರಣಗಳು ಹಲವಿವೆ.

ಮೊದಲನೆಯದಾಗಿ ವಿದ್ಯಾರ್ಥಿ ಶಿಕ್ಷಕ ಪ್ರಮಾಣ ವಿಪರೀತ ಹೆಚ್ಚಾಗಿದೆ, ಅದು ಕಡಿಮೆಯಾಗಬೇಕು. ಶಿಕ್ಷಣ ಕ್ಷೇತ್ರಕ್ಕೆ ಅತಿ ಕಡಿಮೆ ಅನುದಾನ ನೀಡಲಾಗುತ್ತಿದೆ. ಈ ನೀತಿಯ ಶಿಫಾರಸ್ಸುಗಳ ಪ್ರಕಾರ ಜಿಡಿಪಿಯಲ್ಲಿ ಕನಿಷ್ಠ ಶೇ 6 ರಷ್ಟು ಮೀಸಲಿರಿಸಬೇಕು. ಇದಾಗಬೇಕೆಂದರೆ ಕರ್ನಾಟಕದಲ್ಲಿ ಕನಿಷ್ಠ 1.08ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿರಿಸಬೇಕಾಗುತ್ತದೆ. ಹೊಸ ಶಿಕ್ಷಣ ನೀತಿಯ ಹೇರಿಕೆಯು ಹಲವು ಸಮಸ್ಯೆಗಳನ್ನು ಒಳಗೊಂಡಿದೆ ಎಂದು ಹೇಳುತ್ತಿದೆ. ಒಕ್ಕೂಟ ವ್ಯವಸ್ಥೆಯ ಮೂಲ ಸ್ಫೂರ್ತಿಯ ನಿರಾಕರಣೆ, ಖಾಸಗೀಕರಣ, ತರಗತಿಗಳನ್ನು ನಿರಾಕರಿಸಿ ಕಾಲೇಜು, ವಿಶ್ವ ವಿದ್ಯಾಲಯಗಳ ಪಾವಿತ್ರ್ಯದ ನಿರಾಕರಣೆ, ಬಡವರು, ಹಿಂದುಳಿದವರು, ದಮನಿತರ ಸಿಗಬಹುದಾದ ಸುಲಭ ಶಿಕ್ಷ,ಣದ ನಿರಾಕರಣೆ, ಕೋಮು ಅಜೆಂಡಾಗಳನ್ನು ತಂದು ಅವೈಜ್ಞಾನಿಕತೆಯನ್ನು, ದ್ವೇಷವನ್ನು ತುಂಬಿ ಭಾರತವನ್ನು ಶಾಶ್ವತ ಅಂಧಕಾರಕ್ಕೆ ತಳ್ಳಲಾಗುತ್ತಿದೆ ಮುಂತಾದ ಗಂಭೀರ ಆರೋಪಗಳಿವೆ.

ಸರ್ಕಾರ ಈ ಎಲ್ಲದರ ಕುರಿತು ಚರ್ಚೆ ನಡೆಸಬೇಕಾಗಿತ್ತು. ಇದೇನನ್ನೂ ನೀವು ಮಾಡಿಲ್ಲ. ನನ್ನ, ನಿಮ್ಮ ಆಯಸ್ಸು, ರಾಜಕೀಯ ವೃತ್ತಿ ಎಲ್ಲವೂ ಮುಂದೆAದೊ ಒಂದು ದಿನ ಮುಗಿಯುತ್ತದೆ. ಆದರೆ ಶಿಕ್ಷಣ ನೀತಿಯ ಹೆಸರಲ್ಲಿ ಬಲಿಪಶುಗಳಾಗುವ ಮಕ್ಕಳ ಮುಂದೆ 70-80 ವರ್ಷಗಳ ಭವಿಷ್ಯವಿದೆ. ಶಿಕ್ಷಣದ ಹಂತದಲ್ಲಿ ಅವರ ಭವಿಷ್ಯ ಅಲ್ಲೋಲ, ಕಲ್ಲೋಲವಾದರೆ ಅದರ ಶಾಪವನ್ನು ಹೊರುವವರು ಯಾರು? ಈ ನಾಡಿನ, ರೈತರ, ಪಶುಪಾಲಕರ, ಕುಶಲಕರ್ಮಿಗಳ, ಸಣ್ಣ ಪುಟ್ಟ ವ್ಯಾಪಾರಿಗಳ, ಕಾರ್ಮಿಕರ ಮನೆಗಳಿಂದ ಬಂದ ಮಕ್ಕಳು ಗುಣ ಮಟ್ಟದ ಶಿಕ್ಷಣ ಪಡೆದು ಜಾಗತಿಕ ಮಟ್ಟದ ಉದಾರ ಮಾನವತಾವಾದಿ, ವೈಜ್ಞಾನಿಕ ಶಿಕ್ಷಣ ಪಡೆಯಬಾರದೆ?

ತಾವು ನಿಜವಾಗಿಯೂ ನೈಜ ಸ್ಫೂರ್ತಿಯಲ್ಲಿ ಚರ್ಚೆಮಾಡಬಯಸಿದರೆ, ಕೂಡಲೆ ಈ ಹೊಸ ಶಿಕ್ಷಣ ನೀತಿಯನ್ನು ಹಿಂದಕ್ಕೆ ಪಡೆಯಿರಿ. ಚರ್ಚೆ ನಡೆಸಿದ ಮೇಲೆ ನಿಜವಾಗಿಯೂ ಈ ನೀತಿ ಆರೋಗ್ಯಕರವೆನ್ನಿಸಿ ಅನುಷ್ಠಾನ ಸೂಕ್ತವೆನ್ನಿಸಿದರೆ, ಈ ಶತಮಾನಕ್ಕೆ ಅತ್ಯಗತ್ಯ ಎನ್ನಿಸಿದರೆ ನಾವೆ ನಿಂತು ಅನುಷ್ಠಾನ ಮಾಡಲು ಬೆಂಬಲಿಸುತ್ತೇವೆ. ಇಲ್ಲದಿದ್ದರೆ ಮಕ್ಕಳ ಭವಿಷ್ಯದ ಕುತ್ತಿಗೆ ಕೊಯ್ಯುವಂಥ ಪಾಪದ ಕೆಲಸದಲ್ಲಿ ಭಾಗಿಯಾದೆವು ಎಂಬ ಪಶ್ಚಾತ್ತಾಪವನ್ನು ಹೊರಬೇಕಾಗುತ್ತದೆ ಎಂಬುದನ್ನು ತಮಗೆ ತಿಳಿಸಬಯಸುತ್ತೇನೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರದ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿದ್ದಾರೆ.

ಸಿದ್ದರಾಮಯ್ಯ
ವಿಪಕ್ಷ ನಾಯಕ, ಕರ್ನಾಟಕ ವಿಧಾನಸಭೆ

ಇದನ್ನೂ ಓದಿ: 

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಸುಧಾರಣೆ ಆಗಲಿದೆ; ಕೇಸರೀಕರಣ ಎನ್ನುವ ಆರೋಪ ಸರಿಯಲ್ಲ: ಅಶ್ವತ್ಥ್ ನಾರಾಯಣ

ಹೊಸ ಶಿಕ್ಷಣ ನೀತಿ ಪ್ರಕಾರ ನಾಳೆಯಿಂದಲೇ ಉನ್ನತ ವಿದ್ಯಾಭ್ಯಾಸಕ್ಕೆ ದಾಖಲಾತಿ ಶುರು; ಅಕ್ಟೋಬರ್ 1ರಿಂದ ತರಗತಿಗಳು ಆರಂಭ

(NEP 202 Implementation in Bangalore City University opposition leader Siddaramaiah writes letter opposing NEP)