Big News: ಟೋಯಿಂಗ್ ಮಾಡುವಾಗ ವಾಹನ ಮಾಲೀಕರು ಸ್ಥಳದಲ್ಲಿದ್ದರೆ ನೋ ಪಾರ್ಕಿಂಗ್ ಶುಲ್ಕ ಪಡೆದು ಬಿಟ್ಟುಬಿಡಬೇಕು: ಆರಗ ಜ್ಞಾನೇಂದ್ರ ತಾಕೀತು
ಟೋಯಿಂಗ್ ಸಿಬ್ಬಂದಿಗಳು ಸಾರ್ವಜನಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಟೋಯಿಂಗ್ ಮಾಡಲಾಗುವ ವಾಹನಗಳನ್ನು ಅತ್ಯಂತ ಜಾಗರೂಕತೆಯಿಂದ ಯಾವುದೇ ಹಾನಿಗೊಳಗಾಗದಂತೆಯೂ ನೋಡಿಕೊಳ್ಳಬೇಕು ಎಂದೂ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು: ವಾಹನ ಟೋಯಿಂಗ್ ಮಾಡುವಾಗ ನಿಯಮಾವಳಿಗಳನ್ನು ಪಾಲಿಸುವಂತೆ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಾಕೀತು ಮಾಡಿದ್ದಾರೆ. ಬೆಂಗಳೂರು ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನ ಟೋಯಿಂಗ್ ಸಿಬ್ಬಂದಿಗಳಿಂದ ಸಾರ್ವಜನಿಕರಿಗಾಗುತ್ತಿರುವ ಕಿರುಕುಳದ ಬಗ್ಗೆ ಕೇಳಿ ಬಂದ ಆಪಾದನೆ ಹಿನ್ನೆಲೆಯಲ್ಲಿ ಗೃಹ ಸಚಿವರು ಪೊಲೀಸರಿಗೆ ನಿಯಮ ಪಾಲಿಸುವಂತೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಇನ್ನು ಮುಂದೆ ಯಾವುದೇ ಸಂಧರ್ಭದಲ್ಲಿ ಟ್ರಾಫಿಕ್ ಪೊಲೀಸರು ವಾಹನವನ್ನು ಹೊತ್ತೊಯ್ಯುವ ಸಮಯದಲ್ಲಿ ವಾಹನದ ಮಾಲೀಕರು ಸ್ಥಳದಲ್ಲಿದ್ದರೆ ಕೇವಲ ‘ನೋ ಪಾರ್ಕಿಂಗ್’ ಶುಲ್ಕದ ಹಣವನ್ನು ಮಾತ್ರ ಪಡೆದುಕೊಳ್ಳಬೇಕು. ವಾಹನವನ್ನು ಅಲ್ಲಿಯೇ ಅವರಿಗೆ ಬಿಟ್ಟು ಕೊಡಬೇಕು ಮತ್ತು ಟೋಯಿಂಗ್ ಮಾಡಬಾರದು ಎಂದು ಸೂಚನೆ ನೀಡಲಾಗಿದೆ.
ಈಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂಥ್ ಹಾಗೂ ಹೆಚ್ಚುವರಿ ಆಯುಕ್ತ ಸಂಚಾರ ವಿಭಾಗದ ರವಿಕಾಂತೇಗೌಡ ಅವರ ಜೊತೆ ಸಭೆ ನಡೆಸಿದ್ದಾರೆ. ಇನ್ನು ಮುಂದೆ ಟೋಯಿಂಗ್ ಪ್ರಕ್ರಿಯೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ. ಯಾವುದೇ ವಾಹನವನ್ನು ಟೋಯಿಂಗ್ ಮಾಡುವ ಪೂರ್ವದಲ್ಲಿ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ವಾಹನ ಮಾಲೀಕರ ಗಮನ ತರಬೇಕು. ಮಾಲೀಕರ ಗಮನ ಸೆಳೆಯಲು ಸೈರನ್ ಅಥವಾ ಹಾರ್ನ್ ಮಾಡಬೇಕು. ವಾಹನ ಟೋಯಿಂಗ್ ಮಾಡಬೇಕಾದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ನಿಯಾಮಾವಳಿಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು ಎಂದು ಸಭೆಯಲ್ಲಿ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ.
ಟೋಯಿಂಗ್ ಸಿಬ್ಬಂದಿಗಳು ಸಾರ್ವಜನಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಟೋಯಿಂಗ್ ಮಾಡಲಾಗುವ ವಾಹನಗಳನ್ನು ಅತ್ಯಂತ ಜಾಗರೂಕತೆಯಿಂದ ಯಾವುದೇ ಹಾನಿಗೊಳಗಾಗದಂತೆಯೂ ನೋಡಿಕೊಳ್ಳಬೇಕು ಎಂದೂ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
(Home Minister Araga Jnanendra directs to Bengaluru Police behave good when towing and if vehicle owner in the spot do not make towing)
Published On - 4:19 pm, Fri, 3 September 21