ಶಾಲೆ ಆರಂಭ ಮಾಡುವುದಕ್ಕೆ ಆತುರ ಬೇಡ; ಮನೆಯಲ್ಲಿ ಗಣೇಶ ಹಬ್ಬ ಆಚರಣೆ ಮಾಡಿ: ಫನಾ ಅಧ್ಯಕ್ಷ ಹೇಳಿಕೆ

Coronavirus: ಮಕ್ಕಳ ಐಸಿಯು ಬೆಡ್​ಗಳ ಕೊರತೆ ಕಾಣಬಹುದು. ನುರಿತ ತಜ್ಞರ ಕೊರತೆ ಇದೆ, ವೈದ್ಯರ ನೇಮಕಾತಿ ಆಗಬೇಕು. ಲಸಿಕೆ ಅಭಿಯಾನ ಚುರುಕುಗೊಳಿಸಬೇಕು. ಸೆಕ್ಯೂರ್ಡ್ ಡಾಟಾ ಬೇಸ್ ಸಿದ್ಧಪಡಿಸಬೇಕು ಎಂಬುದು ಆಕ್ಷನ್ ಪ್ಲಾನ್​ನಲ್ಲಿರುವ ಪ್ರಮುಖ ಅಂಶಗಳು ಆಗಿವೆ.

ಶಾಲೆ ಆರಂಭ ಮಾಡುವುದಕ್ಕೆ ಆತುರ ಬೇಡ; ಮನೆಯಲ್ಲಿ ಗಣೇಶ ಹಬ್ಬ ಆಚರಣೆ ಮಾಡಿ: ಫನಾ ಅಧ್ಯಕ್ಷ ಹೇಳಿಕೆ
ಸಾಂಕೇತಿಕ ಚಿತ್ರ

ಬೆಂಗಳೂರು: ಕೊರೊನಾ ಮೂರನೇ ಅಲೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳ ಒಕ್ಕೂಟದಿಂದ ಆಕ್ಷನ್ ಪ್ಲಾನ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಬರುವ ಮೂರನೇ ಅಲೆಗೆ ಹೇಗೆ ತಯಾರಿ ನಡೆದಿದೆ ಎಂಬ ಮಾಹಿತಿಗಳನ್ನು ಒಳಗೊಂಡಿರುವ ಆಕ್ಷನ್ ಪ್ಲಾನ್ ವಿವರಗಳನ್ನು ಇಂದು ಆರೋಗ್ಯ ಸಚಿವರಿಗೆ ಸಲ್ಲಿಕೆ ಮಾಡಲಾಗುವುದು. ವಿಧಾನ ಸೌಧದಲ್ಲಿ‌ ಫನಾ ಅಧ್ಯಕ್ಷರು, ಪದಾಧಿಕಾರಿಗಳಿಂದ ವರದಿ ಸಲ್ಲಿಕೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನಲ್ಲಿ ಫನಾ 500 ಕ್ಕೂ ಅಧಿಕ ಆಸ್ಪತ್ರೆಗಳನ್ನು ಹೊಂದಿದೆ. ಫನಾದಡಿ ರಾಜ್ಯದ 6 ಸಾವಿರಕ್ಕೂ ಅಧಿಕ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದೆ.

ಐಸಿಯು ಬೆಡ್, ಮಕ್ಕಳ ಐಸಿಯು ಬೆಡ್, ಆಮ್ಲಜನಕ ಪೂರೈಕೆ ಕುರಿತ ಮಾಹಿತಿಗಳನ್ನು ಒಳಗೊಂಡಿರುವ ವರದಿಯನ್ನು ಸ್ತ್ರೀ ತಜ್ಞೆ ಹಾಗೂ ಮಕ್ಕಳ ತಜ್ಞೆ ಆಗಿರುವ ಡಾ. ಹೇಮಾ ದಿವಾಕರ್ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದೆ. ಈ ಆಕ್ಷನ್ ಪ್ಲಾನ್​ನ್ನು ಸೋಮವಾರ (ಆಗಸ್ಟ್ 30) ಸಲ್ಲಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಮುಂಬರುವ ಮೂರನೇ ಅಲೆ ಹೇಗಿರಬಹುದು, ಎನ್ನೆಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಆಕ್ಷನ್ ಪ್ಲಾನ್ ವರದಿ ಇರಲಿದೆ. ಮೂರನೇ ಅಲೆಗೆ ಐಸಿಯು ಬೆಡ್​ಗಳ ಕೊರತೆ ಉಂಟಾಗಬಹುದು. ಮಕ್ಕಳ ಐಸಿಯು ಬೆಡ್​ಗಳ ಕೊರತೆ ಕಾಣಬಹುದು. ನುರಿತ ತಜ್ಞರ ಕೊರತೆ ಇದೆ, ಆದಷ್ಟು ಬೇಗ ವೈದ್ಯರ ನೇಮಕಾತಿ ಆಗಬೇಕು. ಲಸಿಕೆ ಅಭಿಯಾನ ಚುರುಕುಗೊಳಿಸಬೇಕು. ಮಕ್ಕಳಿಗೆ ಲಸಿಕೆ ಆದಷ್ಟು ಬೇಗ ಲಭ್ಯವಾಗಬೇಕು. ಸೆಕ್ಯೂರ್ಡ್ ಡಾಟಾ ಬೇಸ್ ಸಿದ್ಧಪಡಿಸಬೇಕು ಎಂಬುದು ಆಕ್ಷನ್ ಪ್ಲಾನ್​ನಲ್ಲಿರುವ ಪ್ರಮುಖ ಅಂಶಗಳು ಆಗಿವೆ.

ಶಾಲೆ ಆರಂಭ ಮಾಡುವುದಕ್ಕೆ ಆತುರ ಬೇಡ
ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಶಾಲೆ ಆರಂಭಿಸಬಾರದು ಎಂದು ಬೆಂಗಳೂರಿನಲ್ಲಿ ಫನಾ ಅಧ್ಯಕ್ಷ ಡಾ. ಪ್ರಸನ್ನ ಹೇಳಿಕೆ ನೀಡಿದ್ದಾರೆ. ಇಸ್ರೇಲ್‌ನಲ್ಲಿಯೂ ಶಾಲೆ ಆರಂಭ ಮಾಡಿದ್ದರು. ಆದರೆ, ಇಸ್ರೇಲ್‌ನಲ್ಲಿ ಹೆಚ್ಚಾಗಿ ಮಕ್ಕಳಿಗೆ ಕೊರೊನಾ ಹಿನ್ನೆಲೆಯಲ್ಲಿ ಒಂದೇ ವಾರದಲ್ಲಿ ಶಾಲೆಗಳನ್ನು ಕ್ಲೋಸ್ ಮಾಡಿಸಿದರು. ಹೀಗಾಗಿ ಶಾಲೆ ಆರಂಭ ಮಾಡುವುದಕ್ಕೆ ಆತುರ ಬೇಡ ಎಂದು ಅವರು ತಿಳಿಸಿದ್ದಾರೆ.

ಸರ್ಕಾರ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು. ಮನೆಯಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಿ. ಆದರೆ, ಸಾರ್ವಜನಿಕವಾಗಿ ಗಣೇಶೋತ್ಸವಕ್ಕೆ ವಿರೋಧವಿದೆ ಎಂದು ಡಾ. ಪ್ರಸನ್ನ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಏನು ತೀರ್ಮಾನ?
6-8ನೇ ತರಗತಿವರೆಗೆ ಶಾಲೆ ಆರಂಭಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇಂದಿನ ಸಿಎಂ ನೇತೃತ್ವದ ಸಭೆಯಲ್ಲಿ ಮುಂದಿನ ವಾರ ಪ್ರಾಥಮಿಕ ಶಾಲೆ ಆರಂಭಕ್ಕೆ ಅನುಮತಿ ನೀಡಬಹುದು. ಕಲ್ಯಾಣ ಮಂಟಪಗಳಲ್ಲಿ ಶೇ. 50 ರಷ್ಟು ಜನ ಸೇರಲು ಅವಕಾಶ ನೀಡಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಖಚಿತ ನಿರ್ಧಾರಗಳು ಸಿಎಂ ನೇತೃತ್ವದ ಮಹತ್ವದ ಸಭೆ ಬಳಿಕವಷ್ಟೇ ತಿಳಿದು ಬರಬೇಕಿದೆ.

ಇದನ್ನೂ ಓದಿ: Covishield: ಡೆಲ್ಟಾ ಪ್ರಭೇದದ ಬ್ರೇಕ್ ಥ್ರೂ ಪ್ರಕರಣ ತಡೆಯಲು ಕೊವಿಶೀಲ್ಡ್ ಲಸಿಕೆ ವಿಫಲ – ಅಧ್ಯಯನ

ಭಾರತದಲ್ಲಿ ಇಂದು ಮತ್ತೆ 45 ಸಾವಿರ ದಾಟಿದ ಕೊರೊನಾ ಕೇಸ್​; ಮುಕ್ಕಾಲು ಭಾಗ ಕೇರಳದಲ್ಲೇ ಪತ್ತೆ

Read Full Article

Click on your DTH Provider to Add TV9 Kannada