Karnataka SSLC Class 10 Result 2024: ಕರ್ನಾಟಕ ಎಸ್​ಎಸ್​ಎಲ್​​​ಸಿ ಫಲಿತಾಂಶ ಪ್ರಕಟ: ಕಳೆದ ಬಾರಿಗಿಂತ ಶೇ 10ರಷ್ಟು ಕುಸಿತ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2024: ಕೊನೆಗೂ ಎಸ್​ಎಸ್​​ಎಲ್​ಸಿ ವಿದ್ಯಾರ್ಥಿಗಳು ಕಾಯುತ್ತಿದ್ದ ಆ ದಿನ ಬಂದೇಬಿಟ್ಟಿದೆ. 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ವರ್ಷ ಎಷ್ಟು ಮಂದಿ ತೇರ್ಗಡೆಯಾದರು? ತೇರ್ಗಡೆ ಪ್ರಮಾಣ ಎಷ್ಟಿದೆ? ಯಾವ ಜಿಲ್ಲೆ ಅಗ್ರಹ ಸ್ಥಾನದಲ್ಲಿದೆ? ಇತ್ಯಾದಿ ಎಲ್ಲ ಮಾಹಿತಿ ಇಲ್ಲಿದೆ.

Karnataka SSLC Class 10 Result 2024: ಕರ್ನಾಟಕ ಎಸ್​ಎಸ್​ಎಲ್​​​ಸಿ ಫಲಿತಾಂಶ ಪ್ರಕಟ: ಕಳೆದ ಬಾರಿಗಿಂತ ಶೇ 10ರಷ್ಟು ಕುಸಿತ
ಎಸ್​ಎಸ್​ಎಲ್​​​ಸಿ ಫಲಿತಾಂಶ ಪ್ರಕಟ: ಕಳೆದ ಬಾರಿಗಿಂತ ಶೇ 10ರಷ್ಟು ಕುಸಿತ

Updated on: May 09, 2024 | 11:23 AM

ಬೆಂಗಳೂರು, ಮೇ 9: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Results 2024) ಇದೀಗ ಪ್ರಕಟವಾಗಿದ್ದು, ಶೇ 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ಕೂಡ ವೀಕ್ಷಿಸಬಹುದಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಹಾಗೂ ನಿರ್ದೇಶಕ ಗೋಪಾಲಕೃಷ್ಣ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ಮಾಹಿತಿ ನೀಡಿದರು. ವಿದ್ಯಾರ್ಥಿಯ ನೋಂದಾಯಿತ ಮೊಬೈಲ್​ ನಂಬರ್​ಗೂ ಸಹ ಫಲಿತಾಂಶದ ವಿವರದ ಎಸ್​ಎಂಎಸ್​ ಕಳುಹಿಸಲಾಗುವುದು ಎಂದು ಮಂಜುಶ್ರೀ ತಿಳಿಸಿದರು.

ಈ ಬಾರಿಯ ಫಲಿತಾಂಶ ಪ್ರಮಾಣ ಶೇ 73.4 ಆಗಿದ್ದು, ಕಳೆದ ಬಾರಿಗಿಂತ ಶೇ 10ರಷ್ಟು ಕಡಿಮೆ ಆಗಿದೆ. ಕಳೆದ ವರ್ಷ ಶೇ 83.89ರಷ್ಟು ಫಲಿತಾಂಶ ದಾಖಲಾಗಿತ್ತು.

ಬಾಲಕಿಯರದ್ದೇ ಮೇಲುಗೈ

ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಒಟ್ಟು 8,59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರದ್ದೇ ಮೈಲುಗೈಯಾಗಿದೆ. ಈ ಬಾರಿ 441910 ವಿದ್ಯಾರ್ಥಿಗಳು, 428058 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. 2,87,416 ಮಂದಿ ಬಾಲಕರು ತೇರ್ಗಡೆಯಾಗಿದ್ದು, ತೇರ್ಗಡೆ ಪ್ರಮಾಣ ಶೇ 65.90 ಇದೆ. 3,43,788 ಬಾಲಕಿಯರು ತೇರ್ಗಡೆಯಾಗಿದ್ದು, ತೇರ್ಗಡೆ ಪ್ರಮಾಣ ಶೇ 81.11 ಇದೆ.

ಉಡುಪಿ ಜಿಲ್ಲೆಗೆ ಮೊದಲ ಸ್ಥಾನ

ಈ ಬಾರಿ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ ದೊರೆತಿದ್ದರೆ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ದೊರೆತಿದೆ. ಉಡುಪಿ ಜಿಲ್ಲೆಯಲ್ಲಿ ಶೇ 94ರ ಫಲಿತಾಂಶ ದಾಖಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ತೇರ್ಗಡೆ ಪ್ರಮಾಣ ಶೇ 50.59 ದಾಖಲಾಗಿದೆ.

ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ

ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು 625ಕ್ಕೆ 625 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮೆಳ್ಳಿಗೇರಿಯವರಾಗಿದ್ದಾರೆ. ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ, ಇಲ್ಲಿದೆ ಟಾಪರ್ಸ್​​ ಲಿಸ್ಟ್

ಯಾವ ಜಿಲ್ಲೆಯಲ್ಲಿ ಎಷ್ಟಿದೆ ತೇರ್ಗಡೆ ಪ್ರಮಾಣ?

ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆ ಶೇ 92.12, ಶಿವಮೊಗ್ಗ ಜಿಲ್ಲೆ ಶೇ 88.67, ಕೊಡಗು ಜಿಲ್ಲೆ ಶೇ 88.67 ರ ಫಲಿತಾಂಶ ದಾಖಲಿಸಿವೆ. ಉತ್ತರ ಕನ್ನಡ 86.54%, ಹಾಸನ 86.28%, ಮೈಸೂರು 85.5%, ಶಿರಸಿ 84.64%, ಬೆಂಗಳೂರು ಗ್ರಾ. 83.67%, ಚಿಕ್ಕಮಗಳೂರು 83.39%, ವಿಜಯಪುರ 79.82%, ಬೆಂಗಳೂರು ದಕ್ಷಿಣ 79%, ಬಾಗಲಕೋಟೆ 77.92%, ಬೆಂಗಳೂರು ಉತ್ತರ 77.09%, ಹಾವೇರಿ 75.85%, ತುಮಕೂರು 75.16%, ಗದಗ 74.76%, ಚಿಕ್ಕಬಳ್ಳಾಪುರ 73.61%, ಮಂಡ್ಯ 73.59%, ಕೋಲಾರ 73.57%, ಚಿತ್ರದುರ್ಗ 72.85%, ಧಾರವಾಡ 72.67%, ದಾವಣಗೆರೆ 72.49%, ಚಾಮರಾಜನಗರ 71.59%, ಚಿಕ್ಕೋಡಿ 69.82%, ರಾಮನಗರ 69.53%, ವಿಜಯನಗರ 65.61%, ಬಳ್ಳಾರಿ 64.99%, ಬೆಳಗಾವಿ 64.93%, ಮಧುಗಿರಿ 62.44%, ರಾಯಚೂರು 61.2%, ಕೊಪ್ಪಳ 61.16%, ಬೀದರ್ 57.52%, ಕಲಬುರಗಿ 53.04% ಫಲಿತಾಂಶ ದಾಖಲಾಗಿದೆ.

ಇದನ್ನೂ ಓದಿ:  SSLC ಫಲಿತಾಂಶ ಪ್ರಕಟ, ರಿಸಲ್ಟ್​​​ ನೋಡಲು ಈ ವೆಬ್​ ಸೈಟ್​​​ಗಳಿಗೆ ಭೇಟಿ ನೀಡಿ

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:42 am, Thu, 9 May 24