SSLC ಪರೀಕ್ಷೆ: ಸರ್ಕಾರ ಅಂಕಕ್ಕೆ ಕೋಕ್ ನೀಡಲು ಹೊರಟಿದ್ದ ತೃತೀಯ ಭಾಷೆಯಲ್ಲಿ ಶೇ. 98.55 ಫಲಿತಾಂಶ
SSLC ಪರೀಕ್ಷೆಯ ತೃತೀಯ ಭಾಷೆಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರವನ್ನು ಕೋರ್ಟ್ ರದ್ದುಗೊಳಿಸಿ, ಅಂಕಗಳನ್ನು ನೀಡುವಂತೆ ಆದೇಶಿಸಿತ್ತು. ಆ ಬೆನ್ನಲ್ಲೇ ಫಲಿತಾಂಶ ಪ್ರಕಟಗೊಂಡಿದ್ದು, ತೃತೀಯ ಭಾಷೆಯಲ್ಲಿ 98.55% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದಿದ್ದ 7,69,751 ವಿದ್ಯಾರ್ಥಿಗಳ ಪೈಕಿ 7,58,623 ಮಕ್ಕಳು ಪಾಸ್ ಆಗಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರು, ಏಪ್ರಿಲ್ 23: ವಿದ್ಯಾರ್ಥಿಗಳ ಮೇಲಿನ ಹೊರೆ ತಗ್ಗಿಸುವ ನಿಟ್ಟಿನಲ್ಲಿ SSLC ಪರೀಕ್ಷೆಯ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಒಟ್ಟು 625 ಅಂಕಗಳ ಬದಲಿಗೆ 525 ಅಂಕಗಳಿಗೆ ಪರೀಕ್ಷಾ ಮೌಲ್ಯಮಾಪನವನ್ನು ಸೀಮಿತಗೊಳಿಸುವ ಬಗ್ಗೆ ನಿರ್ಧರಿಸಲಾಗಿತ್ತು. ತ್ರಿಭಾಷಾ ಸೂತ್ರದ ಅಡಿಯಲ್ಲಿ ತೃತೀಯ ಭಾಷೆಯನ್ನು ಕೇವಲ ಅರ್ಹತಾ ವಿಷಯವನ್ನಾಗಿ ಪರಿಗಣಿಸಿ, ಗ್ರೇಡ್ ನೀಡುವ ಮೂಲಕ ಒಟ್ಟು ಶೇಕಡಾವಾರು ಅಂಕಗಳ ಲೆಕ್ಕಾಚಾರದಿಂದ ಇದನ್ನು ಹೊರಗಿಡಲು ಉದ್ದೇಶಿಸಿತ್ತು. ಆದರೆ ಅಂತಿಮವಾಗಿ ಕೋರ್ಟ್ ಆದೇಶದಂತೆ ತೃತೀಯ ಭಾಷೆಗೂ ಅಂಕಗಳನ್ನು ನೀಡಲಾಗಿದೆ. ಇಲ್ಲಿ ಗಮನಾರ್ಹ ವಿಷಯವೆಂದರೆ ತೃತೀಯ ಭಾಷೆಯಲ್ಲಿ ಶೇಕಡಾ 98.55ರಷ್ಟು ಫಲಿತಾಂಶ ಬಂದಿದೆ. ಅಂದರೆ ಪರೀಕ್ಷೆ ಬರೆದಿದ್ದ 7,69,751 ವಿದ್ಯಾರ್ಥಿಗಳ ಪೈಕಿ 7,58,623 ಮಕ್ಕಳು ಉತ್ತೀರ್ಣರಾಗಿದ್ದಾರೆ.
ವಿಷಯವಾರು ವಿದ್ಯಾರ್ಥಿಗಳ ಫಲಿತಾಂಶ
| ವಿಷಯ | ಪರೀಕ್ಷೆ ಬರೆದವರ ಸಂಖ್ಯೆ | ಉತ್ತೀರ್ಣರಾದವರ ಸಂಖ್ಯೆ | ಶೇಕಡಾವಾರು ಫಲಿತಾಂಶ |
| ಪ್ರಥಮ ಭಾಷೆ | 769926 | 748660 | 97.24 |
| ದ್ವಿತೀಯ ಭಾಷೆ | 769795 | 755369 | 98.13 |
| ತೃತೀಯ ಭಾಷೆ | 769751 | 758623 | 98.55 |
| ಗಣಿತ | 769447 | 753882 | 97.98 |
| ವಿಜ್ಞಾನ | 769507 | 752611 | 97.8 |
| ಸಮಾಜ ವಿಜ್ಞಾನ | 769714 | 753127 | 97.85 |
ಇದನ್ನೂ ಓದಿ: Karnataka SSLC Result 2026; 625ಕ್ಕೆ 625 ಅಂಕ ಪಡೆದ ಟಾಪರ್ಸ್ ಯಾರು? ಇಲ್ಲಿದೆ ಮಾಹಿತಿ
ಶೇ. 100 ಫಲಿತಾಂಶ ಪಡೆದ ಶಾಲೆಗಳೆಷ್ಟು?
2,393 ಸರ್ಕಾರಿ, 824 ಅನುದಾನಿತ, 2959 ಖಾಸಗಿ ಶಾಲೆಗಳು ಈ ಬಾರಿ ಶೇ.100ರಷ್ಟು ಫಲಿತಾಂಶವನ್ನು ದಾಖಲಿಸಿವೆ. ಹಾಗೆಯೇ 5 ಅನುದಾನಿತ ಶಾಲೆಗಳು ಮತ್ತು 22 ಖಾಸಗಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ ಗ್ರಾಮಾಂತರ ಭಾಗದ 4,42,280 ವಿದ್ಯಾರ್ಥಿಗಳ ಪೈಕಿ 4,19,261 ಮಕ್ಕಳು ಪಾಸ್ ಆಗಿದ್ದಾರೆ. ಹಾಗೆಯೇ ನಗರ ಪ್ರದೇಶ 3,27,929 ಮಕ್ಕಳ ಪೈಕಿ 3,05,533 ಮಕ್ಕಳು ತೇರ್ಗಡೆ ಹೊಂದಿದ್ದಾರೆ.
68,207 ವಿದ್ಯಾರ್ಥಿಗಳು A+ ಶ್ರೇಣಿ(90ರಿಂದ 100%) 1,30,403 ಮಂದಿ A ಶ್ರೇಣಿ(80ರಿಂದ 90%), 1,40,963 ವಿದ್ಯಾರ್ಥಿಗಳು B+ ಶ್ರೇಣಿ(70ರಿಂದ 79%), 1,42,645 ಮಕ್ಕಳು B ಶ್ರೇಣಿ(60ರಿಂದ 69%), 1,28,722 ವಿದ್ಯಾರ್ಥಿಗಳು C+ ಶ್ರೇಣಿ(50ರಿಂದ 59%) ಮತ್ತು 1,13,854 ಮಂದಿ C ಶ್ರೇಣಿಯಲ್ಲಿ(33ರಿಂದ 49%) ಉತ್ತೀರ್ಣರಾಗಿರೋದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:16 pm, Thu, 23 April 26




