ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆಗಳು (SSLC Exams 2023) ಇಂದಿನಿಂದ ಆರಂಭವಾಗಿದೆ. ಪರೀಕ್ಷೆ ಇದ್ದರೂ ಖಾಸಗಿ ಶಾಲೆಯೊಂದು ಹಾಲ್ ಟಿಕೆಟ್ ನೀಡದೆ ಎಂಟು ಮಂದಿ ವಿದ್ಯಾರ್ಥಿಗಳ ಬಾಳಿನಲ್ಲಿ ಚೆಲ್ಲಾಟ ಆಡಿತ್ತು. ಪರಿಣಾಮ ಲಗ್ಗೆರೆ ಮುಖ್ಯ ರಸ್ತೆಯ ಅನಿಕೇತನ ಶಾಲೆಯ ಅನಿಕೇತನ ಪರೀಕ್ಷಾ ಕೇಂದ್ರದ ಬಳಿ ಹಾಲ್ ಟಿಕೆಟ್ ಇಲ್ಲದ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಿದ್ದರು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಶಾಲೆ ಮುಖ್ಯ ಶಿಕ್ಷಕಿ ವಿದ್ಯಾ ಅವರು ಬಿಇಒ ರಮೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಲ್ ಟಿಕೆಟ್ ಕೊಡಿಸಿ ಎಂಟು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಇದ್ದರೂ ಲಗ್ಗೆರೆಯ ಸೆಂಟ್ ಪಬ್ಲಿಕ್ ಶಾಲೆ ತನ್ನ ಎಂಟು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡದೆ ನಿರ್ಲಕ್ಷ್ಯ ತೋರಿದ್ದು, ಸಪ್ಲಿಮೆಂಟರಿ ಪರೀಕ್ಷೆ ಬರೆಸುತ್ತೇವೆ ಎಂದು ಶಾಲಾ ಮುಖ್ಯ ಶಿಕ್ಷಕಿ ಎನ್ನುತ್ತಿದ್ದರು. ಈ ಬಗ್ಗೆ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ ಹೊರಹಾಕಿದ್ದರು. 1-8ನೇ ತರಗತಿಗೆ ಮಾತ್ರ ಶಾಲೆ ನಡೆಸಲು ಅವಕಾಶ ಇದ್ದರೂ ಸೆಂಟ್ ಪಬ್ಲಿಕ್ ಶಾಲೆ ಆಡಳಿತ ಮಂಡಳಿಯು ಅನಧಿಕೃತವಾಗಿ 10ನೇ ತರಗತಿವರೆಗೆ ಶಾಲೆ ನಡೆಸುತ್ತಿರುವ ಆರೋಪ ಎದುರಿಸುತ್ತಿದೆ.
ಇದನ್ನೂ ಓದಿ: SSLC Exams: ಕರ್ನಾಟಕದಾದ್ಯಂತ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ..All The Best
ಖಾಸಗಿ ಶಾಲೆಯ ಕಳ್ಳಾಟಕ್ಕೆ ಪೋಷಕರು ಕಂಗಾಲಾಗಿದ್ದು, ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಡುತ್ತೇವೆ ಅಂತ ಹೇಳಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಕಾಗೆ ಹಾರಿಸಿದ್ದಾರೆ. ಆದರೆ ಇಂದು ಪರೀಕ್ಷೆಗಳು ಆರಂಭವಾಗುತ್ತಿದೆ ಎಂಬ ವಿಚಾರ ತಿಳಿದರೂ ಎಂಟು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡದೆ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟ ಆಡಿತ್ತು. ಹಾಲ್ ಟಿಕೆಟ್ ಕೇಳಿದರೆ ದೇವಸ್ಥಾನದಲ್ಲಿ ಪೂಜೆ ಮಾಡಿ ಕೊಡುತ್ತೇವೆ ಅಂತ ಹೇಳಿ ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ಯಾಮಾರಿಸಿದೆ.
ನನ್ನ ಮಗಳಿಗೆ ಹಾಲ್ ಟಿಕೆಟ್ ಕೊಡಲಿಲ್ಲ ಎಂದು ವಿದ್ಯಾರ್ಥಿಯೊಬ್ಬಳ ತಾಯಿ ನಾಗಮಣಿ ಕಣ್ಣೀರು ಹಾಕಿದ್ದರು. ನನಗೆ ಏನಾದರು ಮಾಡಿ ಪರೀಕ್ಷೆ ಬರಿಯಲು ಅವಕಾಶ ಮಾಡಿಕೊಡಿ, ನಾನು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೆ. ಈಗ ಹಾಲ್ ಟಿಕೆಟ್ ಇಲ್ಲ ಅಂತಿದ್ದಾರೆ. ಮರು ಪರೀಕ್ಷೆ ಬರೆಯುವಂತೆ ಸೂಚಿಸುತ್ತಿದ್ದಾರೆ. ಏನು ಮಾಡಲಿ ನಾನು ಅಂತಾ ವಿದ್ಯಾರ್ಥಿನಿ ನಂದಿನಿ ಅಳಲು ತೋಡಿಕೊಂಡಿದ್ದಳು.
ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:51 am, Fri, 31 March 23