ಕಳೆದ 5 ವರ್ಷಗಳಲ್ಲಿ19,000 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ತ್ಯಜಿಸಿದ್ದಾರೆ: ಕೇಂದ್ರ
ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಅವರು ಈ ಡೇಟಾವನ್ನು ಹಂಚಿಕೊಂಡಿದ್ದಾರೆ.
ಶಿಕ್ಷಣ ಸಚಿವಾಲಯದ (Education Ministry) ಪ್ರಕಾರ 2018-2023ರ ಅವಧಿಯಲ್ಲಿ OBC, SC ಮತ್ತು ST ವರ್ಗಗಳ 19,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳು, IITಗಳು ಮತ್ತು IIM ಗಳಿಂದ ಹೊರಗುಳಿದಿದ್ದಾರೆ. ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಭಾಸ್ ಸರ್ಕಾರ್ (Subhas Sarkar) ಅವರು ಈ ಡೇಟಾವನ್ನು ಹಂಚಿಕೊಂಡಿದ್ದಾರೆ. ಲಭ್ಯವಿರುವ ದಾಖಲೆಗಳ ಪ್ರಕಾರ, 2018 ರಿಂದ 2023 ರವರೆಗೆ ವಿವಿಧ ಕೋರ್ಸ್‌ಗಳಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳು (ಸಿಯುಗಳು), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿಗಳು) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಗಳು) ನಲ್ಲಿ ವಿದ್ಯಾರ್ಥಿಗಳ ಡ್ರಾಪ್ ಔಟ್ ಸಂಖ್ಯೆ 19,256 ಆಗಿದೆ.
ಈ ಅವಧಿಯಲ್ಲಿ ಮೂರು ವಿಭಾಗಗಳಿಂದ 14,446 ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳಿಂದ ಹೊರಗುಳಿದಿದ್ದರೆ, 4,444 ವಿದ್ಯಾರ್ಥಿಗಳು ಐಐಟಿಯಿಂದ ಮತ್ತು 366 ವಿದ್ಯಾರ್ಥಿಗಳು ಐಐಎಂಗಳಿಂದ ಹೊರಗುಳಿದಿದ್ದಾರೆ ಎಂದು ಸಚಿವರು ಹೇಳಿದರು.
“ಉನ್ನತ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳು ಹಲವಾರು ಆಯ್ಕೆಗಳನ್ನು ಹೊಂದಿದ್ದಾರೆ ಮತ್ತು ಅವರು ಒಂದೇ ಸಂಸ್ಥೆಯಲ್ಲಿ ಒಂದು ಕೋರ್ಸ್ ಅಥವಾ ಪ್ರೋಗ್ರಾಂನಿಂದ ಇನ್ನೊಂದಕ್ಕೆ ಸಂಸ್ಥೆಗಳಾದ್ಯಂತ ವಲಸೆ ಹೋಗಲು ಆಯ್ಕೆ ಮಾಡುತ್ತಾರೆ. ಸಾಮಾನ್ಯವಾಗಿ ವಲಸೆ ಅಥವಾ ಹಿಂತೆಗೆದುಕೊಳ್ಳುವಿಕೆ, ಯಾವುದಾದರೂ ಇದ್ದರೆ, ಮುಖ್ಯವಾಗಿ ವಿದ್ಯಾರ್ಥಿಗಳು ಅವರು ಇಚ್ಛಿಸಿದ ಕೋರ್ಸ್ ಮಾಡಲು ಅಥವಾ ಅವರ ಇಷ್ಟದ ಕಾಲೇಜಿಗೆ ತೆರಳಲು ಇಂತಹ ನಿರ್ಧಾರವನ್ನು ತೆಗೆದುಕೊಂಡಿರುತ್ತಾರೆ. ” ಎಂದು ಸರ್ಕಾರ್ ಹೇಳಿದರು.
ಇದನ್ನೂ ಓದಿ: ನಾಳೆಯಿಂದ ಏಪ್ರಿಲ್ 15ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ; ಪೋಷಕರು, ವಿದ್ಯಾರ್ಥಿಗಳು ನೆನಪಲ್ಲಿಇಟ್ಟುಕೊಳ್ಳಬೇಕಾದ ಮಾಹಿತಿ
ಕಡಿಮೆ ಆದಾಯ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡಲು ಶುಲ್ಕ ಕಡಿತ, ಹೆಚ್ಚಿನ ಸಂಸ್ಥೆಗಳ ಸ್ಥಾಪನೆ, ವಿದ್ಯಾರ್ಥಿವೇತನ, ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನಕ್ಕೆ ಆದ್ಯತೆಯ ಪ್ರವೇಶದಂತಹ ವಿವಿಧ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. “ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ‘ಐಐಟಿಗಳಲ್ಲಿ ಬೋಧನಾ ಶುಲ್ಕ ಮನ್ನಾ’, ಕೇಂದ್ರ ವಲಯದ ಯೋಜನೆಯಡಿ ರಾಷ್ಟ್ರೀಯ ವಿದ್ಯಾರ್ಥಿವೇತನದ ಅನುದಾನ, ಸಂಸ್ಥೆಗಳಲ್ಲಿ ವಿದ್ಯಾರ್ಥಿವೇತನ ಇತ್ಯಾದಿ ಯೋಜನೆಗಳೂ ಇವೆ, ”ಎಂದು ಸರ್ಕಾರ್ ಹೇಳಿದರು.