
ಬೆಂಗಳೂರು: ತಂತ್ರಜ್ಞಾನ, ಸಂಶೋಧನೆ ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಪ್ರಸಿದ್ಧ ಯೂನಿವರ್ಸಿಟಿ ಆಫ್ ಯಾರ್ಕ್ (University of York) ನಡುವೆ ಮಹತ್ವದ ಸಹಯೋಗ ಏರ್ಪಟ್ಟಿದೆ. ಎರಡೂ ಸಂಸ್ಥೆಗಳು ನಾವೀನ್ಯತೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಪರಸ್ಪರ ಸಹಕರಿಸುವ ಸಂಬಂಧ ‘ಉದ್ದೇಶಪತ್ರ’ಕ್ಕೆ (Letter of Intent) ಸಹಿ ಹಾಕಿರುವುದಾಗಿ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಯಾರ್ಕ್ ಮತ್ತು ನಾರ್ತ್ ಯಾರ್ಕ್‌ಶೈರ್ ಮೇಯರ್ ಡೇವಿಡ್ ಸ್ಕೇಥ್ ಅವರ ಉಪಸ್ಥಿತಿಯಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಸರ್ಕಾರ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಒಪ್ಪಂದದಡಿ ಜೈವಿಕ ಅರ್ಥವ್ಯವಸ್ಥೆ (Bioeconomy), ಸ್ವಚ್ಛ ತಂತ್ರಜ್ಞಾನ (Clean Technology), ಕೃಷಿ-ತಂತ್ರಜ್ಞಾನ (Agri-tech) ಮತ್ತು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳನ್ನು ಪ್ರಮುಖವಾಗಿ ಗುರುತಿಸಲಾಗಿದೆ. ಇದರೊಂದಿಗೆ ಸುಸ್ಥಿರತೆ, ಘನತ್ಯಾಜ್ಯ ನಿರ್ವಹಣೆ, ನೀರು, ಸಾರಿಗೆ, ಭದ್ರತೆ ಕ್ಷೇತ್ರಗಳಲ್ಲೂ ಸಹಕರಿಸುವ ಕುರಿತು ಚರ್ಚೆಗಳು ನಡೆದಿವೆ. ಈ ಮೂಲಕ ಉಭಯ ವಲಯಗಳ ನಡುವೆ ಶೈಕ್ಷಣಿಕ ಮತ್ತು ಸಂಶೋಧನಾ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ.
ಯಾರ್ಕ್ ಮತ್ತು ನಾರ್ತ್ ಯಾರ್ಕ್‌ಶೈರ್ ಪ್ರದೇಶಗಳು ಜೈವಿಕ ಅರ್ಥವ್ಯವಸ್ಥೆ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ಸುಸ್ಥಿರ ರಸಾಯನಶಾಸ್ತ್ರ, ಕೃಷಿ ನಾವೀನ್ಯತೆ ಮತ್ತು ಕ್ಲೀನ್-ಟೆಕ್ ಕ್ಷೇತ್ರಗಳಲ್ಲಿ ಅತ್ಯುತ್ತಮ ಪರಿಣತಿಯನ್ನು ಹೊಂದಿವೆ. ಮತ್ತೊಂದೆಡೆ, ಕರ್ನಾಟಕವು ಜೈವಿಕ ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ, ಅತ್ಯುತ್ತಮ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ ಮತ್ತು ಇಂಜಿನಿಯರಿಂಗ್ ಪ್ರತಿಭೆಗಳಿಗೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಈ ಎರಡೂ ಪ್ರದೇಶಗಳ ಶಕ್ತಿಯು ಒಂದಾಗುತ್ತಿರುವುದು ನಾವೀನ್ಯತೆಗೆ ಹೊಸ ಹಾದಿ ತೆರೆಯಲಿದೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ-ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಎರಡೇ ಮುಖ್ಯ ಪರೀಕ್ಷೆ!
ಮುಂದಿನ ಮೂರು ವರ್ಷಗಳಲ್ಲಿ ಜಂಟಿ ನಾವೀನ್ಯತೆ ಕಾರ್ಯಕ್ರಮಗಳು, ಉತ್ಕೃಷ್ಠತಾ ಕೇಂದ್ರಗಳ (Centres of Excellence) ಸ್ಥಾಪನೆ, ಸರ್ಕಾರಿ ಮಟ್ಟದ (G2G) ಪಾಲುದಾರಿಕೆಗಳು ಮತ್ತು ಪ್ರಾಯೋಗಿಕ ಯೋಜನೆಗಳನ್ನು ವೇಗವಾಗಿ ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ. ವಿಶೇಷವಾಗಿ ಸುಸ್ಥಿರತೆ, ತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯದಿಂದ ಆರ್ಥಿಕ ಮೌಲ್ಯ ಸೃಷ್ಟಿಸುವ (creating economic value from waste) ಯೋಜನೆಗಳ ಮೇಲೆ ಹೆಚ್ಚಿನ ಗಮನಹರಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:47 am, Thu, 22 October 26