ಬೆಂಗಳೂರು: 2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಬುಧವಾರದಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ, ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ (Students Bus Pass) ಅವಧಿ ವಿಸ್ತರಿಸಿದೆ. ಜೂನ್ 15ರ ವರೆಗೂ ಹಳೆಯ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಿ ಇಂದು(ಮೇ 31) ಕೆಎಸ್ಆರ್ಟಿಸಿ ಆದೇಶ ಹೊರಡಿಸಿದ್ದು, ಇದು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ವಿದ್ಯಾರ್ಥಿ ತಮ್ಮ ಈ ಹಿಂದಿನ ವರ್ಷದ ಪಾಸನ್ನೇ ಬಸ್ ಗಳಲ್ಲಿ ತೋರಿಸಿ ಪ್ರಯಾಣ ಮಾಡಬಹುದು. ಪಾಸ್ ಇಲ್ಲದಿದ್ರೆ ಪ್ರಸಕ್ತ ವರ್ಷದ ಶಾಲಾ ಶುಲ್ಕ ರಸೀದಿ ತೋರಿಸಿಬೇಕೆಂದು ಕೆಎಸ್ಆರ್ಟಿಸಿ ತನ್ನ ಆದೇಶದಲ್ಲಿ ತಿಳಿಸಿದೆ.
ಬೇಸಿಗೆ ರಜೆ ಅಂತ್ಯವಾಗಿದ್ದು, ಇಂದಿನಿಂದ ರಾಜ್ಯಾದ್ಯಂತ ಶಾಲೆ ಪ್ರಾರಂಭವಾಗಿವೆ. ಇನ್ನು ಶಾಲೆಗೆ ಮಕ್ಕಳನ್ನು ಬರಮಾಡಿಕೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ಕೆಲ ಮಾರ್ಗಸೂಚನೆಗಳನ್ನು ನೀಡಿದೆ. ಪ್ರಾರಂಭೋತ್ಸವ ನಡೆಸಿ ಮೊದಲ ದಿನ ಮಕ್ಕಳನ್ನು ಬರಮಾಡಿಕೊಳ್ಳಬೇಕು. ಅಂದು ಬಿಸಿಯೂಟದಲ್ಲಿ ಸಿಹಿ ವಿತರಿಸಬೇಕು. ಮೊದಲ ದಿನವೇ ಒಂದೆರಡು ಗಂಟೆ ನಂತರ ಶೈಕ್ಷಣಿಕ ತರಗತಿ ಚಟುವಟಿಕೆಗಳನ್ನು ಆರಂಭಿಸಬೇಕು ಎಂದು ಇಲಾಖೆ ಸೂಚಿಸಿದೆ. ಒಂದು ವೇಳೆ ಮಳೆಯಿಂದಾಗಿ ಮಕ್ಕಳು ಶಾಲೆಗೆ ಬರಲು ತೊಂದರೆಯಾಗುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಶಾಲೆಗೆ ರಜೆ ಘೋಷಿಸಬೇಕು ಎಂದು ಶಿಕ್ಷಣ ಇಲಾಖೆ ತನ್ನ ಸುತ್ತೋಲೆಯಲ್ಲಿ ಸೂಚಿಸಿದೆ.
Published On - 11:23 am, Wed, 31 May 23