SSLC ಹಿಂದಿ ವಿಷಯಕ್ಕೆ ಗ್ರೇಡ್​​ ಬದಲಿಗೆ ಅಂಕ: ಹೈಕೋರ್ಟ್ ಆದೇಶ ಮರುಪರಿಶೀಲನಾ ಅರ್ಜಿ ಇತ್ಯರ್ಥ

ಎಸ್‌ಎಸ್‌ಎಲ್‌ಸಿ ಹಿಂದಿ ವಿಷಯಕ್ಕೆ ಗ್ರೇಡ್ ಬದಲಿಗೆ ಅಂಕ ನೀಡುವಂತೆ ಆದೇಶ ಸಂಬಂಧ ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ಹೈಕೋರ್ಟ್​​ ಇತ್ಯರ್ಥಪಡಿಸಿದೆ. 2025-26ರಿಂದ ಹಿಂದಿ ವಿಷಯಕ್ಕೆ ಅಂಕ ನೀಡಬೇಕೆಂದು ಪೀಠ ಸ್ಪಷ್ಟಪಡಿಸಿದ್ದು, ನೀವು ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ. ನಿಯಮ ರೂಪಿಸುವ ಮುನ್ನ ಪರೀಕ್ಷಾ ಪದ್ಧತಿ ಬದಲಾವಣೆ ಸೂಕ್ತವಲ್ಲ ಎಂದು ತಿಳಿಸಿದೆ.

SSLC ಹಿಂದಿ ವಿಷಯಕ್ಕೆ ಗ್ರೇಡ್​​ ಬದಲಿಗೆ ಅಂಕ: ಹೈಕೋರ್ಟ್ ಆದೇಶ ಮರುಪರಿಶೀಲನಾ ಅರ್ಜಿ ಇತ್ಯರ್ಥ
ಹೈಕೋರ್ಟ್ ಆದೇಶ ಮರುಪರಿಶೀಲನಾ ಅರ್ಜಿ ಇತ್ಯರ್ಥ
Edited By:

Updated on: Apr 21, 2026 | 12:25 PM

ಬೆಂಗಳೂರು, ಏಪ್ರಿಲ್​​ 21: SSLC ಹಿಂದಿ ವಿಷಯಕ್ಕೆ ಅಂಕ ನೀಡುವಂತೆ ಸೂಚನೆ ಹಿನ್ನೆಲೆ ಹೈಕೋರ್ಟ್ ಆದೇಶ ಮರುಪರಿಶೀಲನೆ ಕೋರಿದ್ದ ಸರ್ಕಾರದ ಅರ್ಜಿ ಇತ್ಯರ್ಥಗೊಂಡಿದೆ. ಪ್ರಸಕ್ತ ಸಾಲಿಗೆ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ನ್ಯಾ.ಇ.ಎಸ್.ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಮಾಡಿದೆ. ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದು, ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಜಾಗೊಂಡಿದೆ. ಹಿಂದಿ ಭಾಷೆಯಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಅನುತ್ತೀರ್ಣಗೊಂಡಿದ್ದರು. ಹೀಗಾಗಿ ವಿದ್ಯಾರ್ಥಿಗಳ ಮೇಲೆ ಒತ್ತಡ ಕಡಿಮೆ ಮಾಡಲು ಸೂಕ್ತ ತಿದ್ದುಪಡಿಯೊಂದಿಗೆ ನಿಯಮ ರಚಿಸಲು ಸರ್ಕಾರ ಕರಡು ರೂಪಿಸುತ್ತಿದೆ. ಅಂಕದ ಬದಲು ಗ್ರೇಡ್ ನೀಡಲಾಗುತ್ತಿದೆ ಎಂದು ವಾದಿಸಿದ್ದರು.

ಆದರೆ ನ್ಯಾ.ಇ.ಎಸ್.ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠ ಸರ್ಕಾರವನ್ನೇ ಈ ಬಗ್ಗೆ ಪ್ರಶ್ನಿಸಿದೆ. SSLC ಪರೀಕ್ಷೆ ಅಧಿಸೂಚನೆ ಹೊರಡಿಸಿದಾಗಲೇ ಇದನ್ನು ಸ್ಪಷ್ಟಪಡಿಸಬೇಕಿತ್ತು. ಅಧಿಸೂಚನೆಯಲ್ಲಿಲ್ಲದ ಗ್ರೇಡ್ ಪದ್ಧತಿಯನ್ನ ಈಗ ಅನುಷ್ಠಾನಗೊಳಿಸುತ್ತಿದ್ದೀರಿ? ಪಿಯುಸಿಯಲ್ಲಿ ಈಗ ಶೇ.83ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ನೀವು ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ. ನಿಯಮ ರೂಪಿಸಿದ ಬಳಿಕ ಸರ್ಕಾರ ಸೂಕ್ತವೆನಿಸಿದ ಕ್ರಮ ಕೈಗೊಳ್ಳಬಹುದು. ಆದರೆ ನಿಯಮ ರೂಪಿಸುವ ಮುಂಚಿನ ಪರೀಕ್ಷೆಯ ಅಂಕ ಪದ್ಧತಿ ಬದಲಾವಣೆ ಸೂಕ್ತವಲ್ಲ ಎಂದು ತಿಳಿಸಿದೆ.  ಜೊತೆಗೆ 2025-26ನೇ ಸಾಲಿನ ಎಸ್​​ಎಸ್​​ಎಲ್​​ಸಿ ಹಿಂದಿ ಭಾಷೆಗೆ ಅಂಕ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.

ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ್ ಸೇರಿ ಮೂವರು ವಿದ್ಯಾರ್ಥಿನಿಯರು ರಿಟ್ ಸಲ್ಲಿಸಿದ್ದರು. ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿಂದಿ ಅಂಕ ಪರಿಗಣಿಸುತ್ತಾರೆ. ಗ್ರೇಡಿಂಗ್ ನೀಡುವುದರಿಂದ ಭವಿಷ್ಯದಲ್ಲಿ ತೊಂದರೆಯಾಗುತ್ತದೆ. ಹೀಗಾಗಿ ಗ್ರೇಡಿಂಗ್ ಬದಲು ಅಂಕ ನೀಡುವಂತೆ ನಿರ್ದೇಶನ ನೀಡುವಂತೆ ಕೋರಿದ್ದರು. ಇನ್ನು ಕೋರ್ಟ್​​ನ ಈ ಆದೇಶ ಎಸ್​ಎಸ್​ಎಲ್​​ಸಿ ಪರೀಕ್ಷೆಯ ಎಲ್ಲ ತೃತೀಯ ಭಾಷೆಗೂ ಅನ್ವಯ ಆಗಲಿದೆ.

ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್ ನೀಡಲು ಹೊರಟಿದ್ದ ಸರ್ಕಾರಕ್ಕೆ ತೀವ್ರ ಮುಖಭಂಗ; ಅಂಕ ನೀಡಲು ಹೈಕೋರ್ಟ್ ಆದೇಶ

ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ತೃತೀಯ ಭಾಷೆ ವಿಷಯಕ್ಕೆ ಸಂಬಂಧಿಸಿದಂತೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರಲು ಶಿಕ್ಷಣ ಇಲಾಖೆ ಆಸಕ್ತಿ ತೋರಿತ್ತು. ಇತ್ತೀಚೆಗೆ ಆ ಬಗ್ಗೆ ಅಧಿಕೃತ ಆದೇಶ ಘೋಷಣೆ ಮಾಡಿತ್ತು. ಪ್ರಥಮ ಮತ್ತು ದ್ವಿತೀಯ ಭಾಷೆಗಳಿಗೆ ನೀಡುವ ಪ್ರಾಮುಖ್ಯತೆಯನ್ನು ತೃತೀಯ ಭಾಷೆಗೆ ನೀಡದೆ, ಅದನ್ನು ಕೇವಲ ಅರ್ಹತಾ ವಿಷಯವನ್ನಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿತ್ತು. ಇದು ಹಿಂದಿ ಭಾಷಾ ಶಿಕ್ಷಕರ ಸಂಘ ಮತ್ತು ಪೋಷಕರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿವಾದವು ಕೇವಲ ಅಂಕಗಳಿಗೆ ಸೀಮಿತವಾಗದೆ, ಭಾಷಾ ನೀತಿಯ ಸಂಘರ್ಷವಾಗಿಯೂ ಬದಲಾಗಿತ್ತು. ತೃತೀಯ ಭಾಷೆಗೆ ಅಂಕ ನೀಡದಿದ್ದರೆ ವಿದ್ಯಾರ್ಥಿಗಳು ಆ ವಿಷಯದ ಕಡೆಗೆ ಆಸಕ್ತಿ ಕಳೆದುಕೊಳ್ಳುತ್ತಾರೆ ಮತ್ತು ಇದು ಭವಿಷ್ಯದಲ್ಲಿ ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವರಿಗೆ ಹಿನ್ನಡೆಯಾಗಬಹುದು ಎಂಬ ವಾದ ಕೇಳಿಬಂದಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:22 pm, Tue, 21 April 26

Follow Us