ದೆಹಲಿ: ಭಾರತೀಯ ವೈದ್ಯಕೀಯ ಒಕ್ಕೂಟವು (Indian Medical Association – IMA) ನೀಟ್ ಪಿಜಿ 2022ರ (NEET PG 2022) ಪರೀಕ್ಷೆಯ ದಿನಾಂಕಗಳನ್ನು ಬದಲಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಮನವಿ ಮಾಡಿದೆ. ಮೇ 21ಕ್ಕೆ ನೀಟ್ ಪಿಜಿ ಪರೀಕ್ಷೆಗಳು ನಡೆಯಬೇಕಿತ್ತು. ನೀಟ್ ಪಿಜಿ 2021ರ ಅಖಿಲ ಭಾರತ ಕೋಟಾ (All India Quota – AIQ) ಕೌನ್ಸೆಲೆಂಗ್ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಯ ದಿನಾಂಕ ಮುಂದೂಡಬೇಕು ಎಂದು ಒಕ್ಕೂಟವು ವಿನಂತಿಸಿದೆ. ನೀಟ್ ಪಿಜಿ 2022ರ ಪರೀಕ್ಷೆಯ ದಿನಾಂಕ ಮತ್ತು 2021ರ ಕೌನ್ಸಲಿಂಗ್ ಮುಗಿಸಬೇಕಿರುವ ದಿನಾಂಕದ ನಡುವಣ ಅಂತರ ಕಡಿಮೆಯಿದೆ. ಹೀಗಾಗಿ ಇಂಥ ಕಠಿಣ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು, ಹಾಜರಾಗಲು ಅಭ್ಯರ್ಥಿಗಳಿಗೆ ಅಗತ್ಯ ಕಾಲಾವಕಾಶ ಸಿಗುವುದಿಲ್ಲ ಎಂದು ಒಕ್ಕೂಟವು ವಿವರಿಸಿದೆ.
ನೀಟ್ ಪರೀಕ್ಷೆ ಕುರಿತು ಮತ್ತಷ್ಟು ಮಾಹಿತಿಗೆ ಲಿಂಕ್ ಕ್ಲಿಕ್ ಮಾಡಿ
ಕೊವಿಡ್-19ರ ಕಾರಣದಿಂದಾಗಿ ‘ನೀಟ್ ಪಿಜಿ 2021’ ಐದು ತಿಂಗಳು ತಡವಾಗಿ ಆರಂಭವಾಗಿತ್ತು. ಅಕ್ಟೋಬರ್ 25, 2021ರಂದು ನಡೆಯಬೇಕಿದ್ದ ಕೌನ್ಸೆಲಿಂಗ್ ಜನವರಿ 2022ರಲ್ಲಿ ಆರಂಭವಾಯಿತು. ಸೀಟ್ಗಳ ಮೀಸಲಾತಿ ಘೋಷಣೆ ಬಾಕಿಯಾಗಿದ್ದು ಇದಕ್ಕೆ ಮುಖ್ಯ ಕಾರಣ. ಮಾರ್ಚ್ 31, 2022ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಕಾರಣದಿಂದ ಕೌನ್ಸಲಿಂಗ್ ಮತ್ತಷ್ಟು ತಡವಾಯಿತು. ಮಾಪ್-ಅಪ್ ರೌಂಡ್ಗಾಗಿ ವಿಶೇಷ ಕೌನ್ಸಲಿಂಗ್ ನಡೆಸಬೇಕು. ಹಿಂದಿನ ಕೌನ್ಸಲಿಂಗ್ ರದ್ದುಪಡಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು.
ಕೊವಿಡ್ ವಾರಿಯರ್ಗಳಾಗಿ ಸೇವೆ ಸಲ್ಲಿಸುತ್ತಿದ್ದ ಸುಮಾರು 10 ಸಾವಿರ ಇಂಟರ್ನಿಗಳು ಅವರ ಅಂತಿಮ ಪರೀಕ್ಷೆಗಳು ತಡವಾದದ್ದರಿಂದ ಮತ್ತು ಇಂಟರ್ನ್ಶಿಪ್ ಮಾನದಂಡದ ಅರ್ಹತೆಯನ್ನು ವಿಸ್ತರಿಸಿದ ಕಾರಣ ನೀಟ್-ಪಿಜಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ ಎಂದು ಒಕ್ಕೂಟವು ಹೇಳಿದೆ. ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ವಿವಿಧ ತೀರ್ಪುಗಳು ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳ ಟೈಂ ಟೇಬಲ್ ಮುಂದೂಡಿಕೆ ಬಗ್ಗೆ ಸುಪ್ರೀಂಕೋರ್ಟ್ನ ವಿವರಣೆಯನ್ನು ಉಲ್ಲೇಖಿಸಿರುವ ಐಎಂಎ, ‘ಲಕ್ಷಾಂತರ ವೈದ್ಯಕೀಯ ಪದವೀಧರರ ಭವಿಷ್ಯ ನಿರ್ಧರಿಸುವ ನೀಟ್ 2022 ಪರೀಕ್ಷೆಗಳನ್ನು ಮುಂದೂಡಬೇಕು’ ಎಂದು ವಿನಂತಿಸಿದೆ.
‘ನೀಟ್ ಪಿಜಿ 2022 ಪರೀಕ್ಷೆಗಳು ಮೇ 21ಕ್ಕೆ ನಿಗದಿಯಾಗಿವೆ. ತಾವು ಸಕಾಲದಲ್ಲಿ ಮಧ್ಯಪ್ರವೇಶಿಸಿ, ಪರೀಕ್ಷೆಗಳನ್ನು ಸೂಕ್ತ ರೀತಿಯಲ್ಲಿ ಮುಂದೂಡಬೇಕು. ಆಗ ಮಾತ್ರ ನೀಟ್ 2021ರ ಅಭ್ಯರ್ಥಿಗಳಿಗೆ ಸಿದ್ಧತೆ ಮಾಡಿಕೊಳ್ಳಲು ಮತ್ತು ನೀಟ್ ಪಿಜಿ 2022ರ ಪರೀಕ್ಷೆಗಳನ್ನು ಬರೆಯಲು ಇಂಟರ್ನಿಗಳಿಗೆ ಅರ್ಹತೆ ಸಿಗುತ್ತದೆ’ ಎಂದು ಐಎಂಎ ಹೇಳಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಈ ವಿಚಾರವನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕು ಎಂದು ಭಾರತೀಯ ವೈದ್ಯಕೀಯ ಒಕ್ಕೂಟವು ಸಚಿವರನ್ನು ಕೋರಿದೆ.
Published On - 9:55 am, Thu, 12 May 22