Karnataka SSLC Result 2022 Date: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬ: ಮೇ 16ರ ನಂತರ ಫಲಿತಾಂಶ ಪ್ರಕಟಣೆ ಸಾಧ್ಯತೆ
ಸಾಲು ಸಾಲು ರಜೆಗಳು ಬಂದ ಕಾರಣ ಫಲಿತಾಂಶ ಪ್ರಕಟಣೆಯಲ್ಲಿ ಕೊಂಚ ವಿಳಂಬವಾಗಲಿದೆ. ಮೌಲ್ಯ ಮಾಪನ ಪ್ರಕ್ರಿಯೆ ಕೂಡಾ ಮುಗಿಯುತ್ತಾ ಬಂದಿದ್ದು, ಮೇ 16ರ ನಂತರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಣೆ ನಿರೀಕ್ಷಿಸಬಹುದಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಮುಕ್ತಾಯವಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಚ್ 28 ರಿಂದ ಏಪ್ರಿಲ್ 11 ರವರಗೆ 2022 ನೇ ಸಾಲಿನ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯನ್ನ ನಡೆಸಿದೆ. ಸದ್ಯ ವಿದ್ಯಾರ್ಥಿಗಳು ಮತ್ತು ಪೋಷಕರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕ ಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ (KSEEB) 2022ರ SSLC ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಮೇ 15 ರಂದು ಪ್ರಕಟಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ಹಿಂದೆ ನಿರ್ಧರಿಸಿತ್ತು. ಆದರೆ ಸಾಲು ಸಾಲು ರಜೆಗಳು ಬಂದ ಕಾರಣ ಫಲಿತಾಂಶ ಪ್ರಕಟಣೆಯಲ್ಲಿ ಕೊಂಚ ವಿಳಂಬವಾಗಲಿದೆ. ಮೌಲ್ಯ ಮಾಪನ ಪ್ರಕ್ರಿಯೆ ಕೂಡಾ ಮುಗಿಯುತ್ತಾ ಬಂದಿದ್ದು, ಮೇ 16ರ ನಂತರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಣೆ ನಿರೀಕ್ಷಿಸಬಹುದಾಗಿದೆ.
ಕರ್ನಾಟಕ SSLC ಫಲಿತಾಂಶ 2022 ದಿನಾಂಕಕ್ಕೆ ಸಂಬಂಧಿಸಿದಂತೆ, ಮೂಲಗಳ ಪ್ರಕಾರ ಮೇ 16ರ ನಂತರ ಫಲಿತಾಂಶಗಳನ್ನು ನಿರೀಕ್ಷಿಸಬಹುದು ಎಂದು ಸೂಚಿಸಲಾಗಿದ್ದು, ನಿಖರವಾದ ದಿನಾಂಕವನ್ನು ಹಂಚಿಕೊಳ್ಳಲಾಗಿಲ್ಲ. ಆದರೆ, ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಮೇ ಮೂರನೇ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಖಚಿತಪಡಿಸಿದ್ದಾರೆ. ಸುಮಾರು 234 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆದಿದ್ದು, ಸುಮಾರು 63,796 ಶಿಕ್ಷಕರು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಬಾರಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ 15,387 ಶಾಲೆಗಳಿಂದ 8,73,884 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 4,52,732 ವಿದ್ಯಾರ್ಥಿಗಳು, 4,21,110 ವಿದ್ಯಾರ್ಥಿನಿಯರು ಮತ್ತು 4 ತೃತೀಯ ಲಿಂಗಿ ವಿದ್ಯಾರ್ಥಿಗಳು. ಅಲ್ಲದೆ ವಿಭಿನ್ನ ಸಾಮರ್ಥ್ಯವುಳ್ಳ 5,307 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶಗಳು 2022, karresults.nic.in ನಲ್ಲಿ ಲಭ್ಯವಿರಲಿದ್ದು, ಇದಲ್ಲದೇ, KSEEB ಗಾಗಿ ಅಧಿಕೃತ ವೆಬ್‌ಸೈಟ್ – sslc.karnataka.gov.in ನಲ್ಲಿ ಫಲಿತಾಂಶಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ಬೇರೆ ಬೇರೆ ವೆಬ್‌ಸೈಟ್‌ಗಳಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. ಅಧಿಕೃತ ಕರ್ನಾಟಕ ಎಸ್‌ಎಸ್‌ಎಲ್‌ಸಿ ಸೈಟ್‌ಗಳ ಹೊರತಾಗಿ, ಡಿಪಿಆರ್ ಕರ್ನಾಟಕ ವೆಬ್‌ಸೈಟ್‌ನಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. (ದಯವಿಟ್ಟು ಗಮನಿಸಿ, ಹಳೆಯ KSEEB ವೆಬ್‌ಸೈಟ್ kseeb.kar.nic.inನ್ನು ಸ್ಥಗಿತಗೊಳಿಸಲಾಗಿದೆ.)
ಫಲಿತಾಂಶ ಚೆಕ್ ಮಾಡುವುದು ಹೇಗೆ? ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್ http://kseeb.kar.nic.in/ ಗೆ ಅಥವಾ karresults.nic.in ಗೆ ಭೇಟಿ ನೀಡಿ. ಪೇಜ್ ಓಪನ್ ಆದ ನಂತರ ವಿದ್ಯಾರ್ಥಿಗಳು ತಮ್ಮ ಎಸ್‌ಎಸ್‌ಎಲ್‌ಸಿ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ಟೈಪ್ ಮಾಡಬೇಕು. ನಂತರ ‘Submit’ ಎಂಬಲ್ಲಿ ಕ್ಲಿಕ್ ಮಾಡಿ. ಫಲಿತಾಂಶ ಪೇಜ್ ಓಪನ್ ಆಗುತ್ತದೆ. ಡೌನ್‌ಲೋಡ್ ಮಾಡಿಕೊಳ್ಳಬಹುದು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳ ಫಲಿತಾಂಶವನ್ನು ಅವರ ರಿಜಿಸ್ಟರ್ ಮೊಬೈಲ್ ನಂಬರ್‌ಗೂ ಸಹ ಮೆಸೇಜ್ ಮೂಲಕ ಕಳುಹಿಸುವ ಸಾಧ್ಯತೆ ಕೂಡ ಇದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಜೂನ್ 4ನೇ ವಾರದಲ್ಲಿ ಪೂರಕ ಪರೀಕ್ಷೆ ಬರೆದು, ಪಾಸ್ ಮಾಡಿಕೊಳ್ಳಬಹುದಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:30 pm, Thu, 12 May 22