ಒಂದೇ ಒಂದು ಸೀಟು ಖಾಲಿ ಬಿಡಬಾರದು, ನೀವು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದ್ದೀರಿ: ನೀಟ್​​ ಪಿಜಿ ಕೌನ್ಸಿಲಿಂಗ್​​​ ಸಮಿತಿಗೆ ಸುಪ್ರೀಂ ತರಾಟೆ

| Updated By: ರಶ್ಮಿ ಕಲ್ಲಕಟ್ಟ

Updated on: Jun 08, 2022 | 8:58 PM

NEET-PG ವೈದ್ಯರ ಅಗತ್ಯವಿರುವಾಗ ಸೀಟುಗಳನ್ನೇಕೆ ಖಾಲಿ ಬಿಡುತ್ತೀರಿ? ಅಲ್ಲಿ ಯಾಕೆ ದಕ್ಷತೆ ಇಲ್ಲ? ವಿದ್ಯಾರ್ಥಿ ಮತ್ತು ಪೋಷಕರ ಒತ್ತಡದ ಬಗ್ಗೆ ನಿಮಗೆ ತಿಳಿದಿದೆಯೇ? ಎಂದು ನ್ಯಾಯಾಲಯವು ಸಮಿತಿಯನ್ನು ಪ್ರಶ್ನಿಸಿದೆ.

ಒಂದೇ ಒಂದು ಸೀಟು ಖಾಲಿ ಬಿಡಬಾರದು, ನೀವು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದ್ದೀರಿ: ನೀಟ್​​ ಪಿಜಿ ಕೌನ್ಸಿಲಿಂಗ್​​​ ಸಮಿತಿಗೆ ಸುಪ್ರೀಂ ತರಾಟೆ
ಸುಪ್ರೀಂಕೋರ್ಟ್
Follow us on

ನೀಟ್ ಪಿಜಿಯಲ್ಲಿ (NEET-PG 2021) ಸೀಟುಗಳನ್ನು ಖಾಲಿ ಬಿಡುವುದು ಆಕಾಂಕ್ಷಿಗಳನ್ನು ತೊಂದರೆಗೆ ಸಿಲುಕಿಸುತ್ತದೆ ಮತ್ತು ಅರ್ಹ ವೈದ್ಯರ ಕೊರತೆಗೆ ಕಾರಣವಾಗುತ್ತದೆ ಎಂದು ಸುಪ್ರೀಂಕೋರ್ಟ್ (Supreme Court) ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯನ್ನು (MCC) ತರಾಟೆಗೆ ತೆಗೆದುಕೊಂಡಿದೆ. ಮೇ ತಿಂಗಳಿನಿಂದ 1,456 ಸೀಟುಗಳು ಖಾಲಿ ಇವೆ ಎಂದು ಪೀಠಕ್ಕೆ ತಿಳಿಸಲಾಯಿತು. ಖಾಲಿ ಇರುವ ಸೀಟುಗಳಲ್ಲಿ ಅಭ್ಯರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡಲು ವಿಶೇಷ ಸ್ಟ್ರೇ ರೌಂಡ್ ಕೌನ್ಸೆಲಿಂಗ್‌ಗೆ ಕೇಳುವ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.  “ಒಂದು ಕೋರ್ಸ್‌ನಲ್ಲಿ ಸೀಟು ಖಾಲಿ ಇದ್ದರೂ ಅದು ಭರ್ತಿಯಾಗದೆ ಉಳಿಯಬಾರದು. ಅದು ಖಾಲಿಯಾಗದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ. ನೀವು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದೀರಿ”. ಅಧಿಕಾರಿಗಳಿಗೆ ಸೀಟು ಖಾಲಿ ಇದೆ ಎಂದು ಗೊತ್ತಿದ್ದರೆ ಅವರು ಮಾಪ್ ಅಪ್ ರೌಂಡ್ ನಡೆಸಬೇಕಿತ್ತು ಎಂದು ನ್ಯಾಯಾಲಯ ಹೇಳಿದೆ.

ವೈದ್ಯರ ಅಗತ್ಯವಿರುವಾಗ ಸೀಟುಗಳನ್ನೇಕೆ ಖಾಲಿ ಬಿಡುತ್ತೀರಿ? ಅಲ್ಲಿ ಯಾಕೆ ದಕ್ಷತೆ ಇಲ್ಲ? ವಿದ್ಯಾರ್ಥಿ ಮತ್ತು ಪೋಷಕರ ಒತ್ತಡದ ಬಗ್ಗೆ ನಿಮಗೆ ತಿಳಿದಿದೆಯೇ? ಎಂದು ನ್ಯಾಯಾಲಯವು ಸಮಿತಿಯನ್ನು ಪ್ರಶ್ನಿಸಿದೆ.

ಅರ್ಜಿದಾರರು NEET-PG 2021-22 ಪರೀಕ್ಷೆ ಬರೆದಿದ್ದು ಅಖಿಲ ಭಾರತ ಕೋಟಾ (AIQ) ಕೌನ್ಸೆಲಿಂಗ್ ಮತ್ತು ರಾಜ್ಯ ಕೋಟಾ ಕೌನ್ಸೆಲಿಂಗ್‌ನ 1 ಮತ್ತು 2 ನೇ ಸುತ್ತುಗಳಲ್ಲಿ ಭಾಗವಹಿಸಿದ್ದರು. ವೈದ್ಯಕೀಯ ಕೌನ್ಸಿಲಿಂಗ್ ಸಮಿತಿಯು ಆಲ್ ಇಂಡಿಯಾ ಸ್ಟ್ರೇ ವೇಕೆನ್ಸಿ ಸುತ್ತಿನ ನಂತರ ಅಖಿಲ ಭಾರತ ಮಾಪ್-ಅಪ್ ಮತ್ತು ರಾಜ್ಯ ಮಾಪ್-ಅಪ್ ರೌಂಡ್‌ಗಳನ್ನು 2022 ಮೇ 7 ರಂದು ಮುಕ್ತಾಯಗೊಳಿಸಿತ್ತು.  ಅರ್ಜಿದಾರರಿಗೆ ಯಾವುದೇ ಸುತ್ತಿನಲ್ಲಿಯೂ ಸೀಟು ಸಿಗಲಿಲ್ಲ. ಎಲ್ಲಾ ಖಾಲಿ ಇರುವ ಸೀಟುಗಳು ಕೌನ್ಸೆಲಿಂಗ್‌ನ ಸ್ಟ್ರೇ ವೇಕೆನ್ಸಿ ಸುತ್ತಿನ ಭಾಗವಲ್ಲ ಎಂಬ ರೀತಿಯಲ್ಲಿ ಎಂಸಿಸಿ ನಡೆಸಿದ ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ತಾವು ನೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
NEET PG Result 2022: NEET PG 2022 ಫಲಿತಾಂಶ ಬಿಡುಗಡೆಯಾಗಿದೆ; ಫಲಿತಾಂಶ ನೋಡಲು ಇಲ್ಲಿದೆ ಲಿಂಕ್
NEET PG 2022 ನೀಟ್ ಪಿಜಿ ಪರೀಕ್ಷೆ ಮುಂದೂಡಲು ಸುಪ್ರೀಂಕೋರ್ಟ್​​​ ನಕಾರ
ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಿಜಿ ಸೀಟ್ ಪಡೆಯಲು ಹತ್ತಾರು ಸಂಕಷ್ಟ; ಇದು ಖಾಸಗಿ ಕಾಲೇಜುಗಳಿಗೆ ಸೀಟು ಹಂಚುವ ದುರಾಲೋಚನೆಯೇ?

ವಿಚಾರಣೆಯ ಆರಂಭದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಬುಧವಾರ ಲಭ್ಯವಿಲ್ಲ ಎಂದು ತಿಳಿಸುವ ಮನವಿಗೆ ಪ್ರತಿಕ್ರಿಯಿಸಲು ಎಂಸಿಸಿ ಒಂದು ದಿನದ ಸಮಯವನ್ನು ಕೋರಿತ್ತು. ಸೀಟು ಖಾಲಿಯಾಗಿ ಯಾಕೆ ಉಳಿದುಕೊಂಡಿತು ಎಂಬುದಕ್ಕೆ ಕಾರಣವಾದ ಎಲ್ಲಾ ಸಂದರ್ಭಗಳನ್ನು ವಿವರಿಸುವ ಅಫಿಡವಿಟ್ ಅನ್ನು ಸಲ್ಲಿಸುವುದಾಗಿ ಎಂಸಿಸಿ ಹೇಳಿದೆ.

ಕೌನ್ಸೆಲಿಂಗ್ ಪ್ರಕ್ರಿಯೆಯ ಮಧ್ಯದಲ್ಲಿ ಸೀಟುಗಳನ್ನು ಸೇರಿಸುವ ಕುರಿತು ಅರ್ಜಿದಾರರು ಸಲ್ಲಿಸಿರುವ ಸಲ್ಲಿಕೆಯನ್ನು ಪೀಠವು ಗಮನಿಸಿದ್ದು “ನೀವು ಕೌನ್ಸೆಲಿಂಗ್ ಮಧ್ಯೆ ಸೀಟುಗಳನ್ನು ಏಕೆ ಸೇರಿಸುತ್ತೀರಿ? ಹೀಗೆ ಸೀಟುಗಳನ್ನು ಸೇರಿಸಿದರೆ ಭ್ರಷ್ಟಾಚಾರದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಟೀಕಿಸಿದೆ. ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದೆ. ಮುಂದಿನ ವಿಚಾರಣೆಯನ್ನು ಜೂನ್ 9 ಗುರುವಾರಕ್ಕೆ ನಿಗದಿಪಡಿಸಲಾಗಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 8:57 pm, Wed, 8 June 22