ದೆಹಲಿ: ನೀಟ್ ಪಿಜಿ 2022 (NEET-PG 2022)ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಶುಕ್ರವಾರ ತಿರಸ್ಕರಿಸಿದ ಸುಪ್ರೀಂಕೋರ್ಟ್ (Supreme Court) ಹೀಗೆ ಮಾಡಿದರೆ ಕೆಲವರ ಕಾರಣದಿಂದಾಗಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸಾವಿರಾರು ಮಂದಿಗೆ ತೊಂದರೆಯಾಗುತ್ತದೆ ಎಂದು ಹೇಳಿದೆ. ನೀಟ್ ಪಿಜಿ 2021 ರ ಕೌನ್ಸೆಲಿಂಗ್‌ನಲ್ಲಿ ವಿಳಂಬವನ್ನು ಉಲ್ಲೇಖಿಸಿ ಪರೀಕ್ಷೆಯನ್ನು ಮುಂದೂಡುವಂತೆ ಕೇಂದ್ರ ಸರ್ಕಾರಕ್ಕೆ ಪದೇ ಪದೇ ಒತ್ತಾಯಿಸಿದ ನಂತರ ಸುಪ್ರೀಂಕೋರ್ಟ್‌ನಲ್ಲಿ ಈ ಮನವಿ ಸಲ್ಲಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಘ (IMA) ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಅವರಿಗೆ ಪರೀಕ್ಷೆಯನ್ನು ಮರು ನಿಗದಿಪಡಿಸುವಂತೆ ಮನವಿ ಮಾಡಿತ್ತು. ಮಾಂಡವಿಯಾ ಅವರಿಗೆ ಬರೆದ ಪತ್ರದಲ್ಲಿ, ನೀಟ್ ಪಿಜಿ 2022 ಪರೀಕ್ಷೆಯ ದಿನಾಂಕ ಮತ್ತು 2021 ರ ಕೌನ್ಸೆಲಿಂಗ್‌ನ ನಡುವಿನ ಕಾಲವಧಿಯು ಅಂತಹ ಅತ್ಯಂತ ಕಷ್ಟಕರವಾದ ಪರೀಕ್ಷೆಗೆ ತಯಾರಾಗಲು ಮತ್ತು ಪರೀಕ್ಷೆಗೆ ಹಾಜರಾಗಲು ಆಕಾಂಕ್ಷಿಗಳಿಗೆ ತುಂಬಾ ಸಣ್ಣದು ಎಂದು ಐಎಂಎ ಹೇಳಿದೆ. ಆಕಾಂಕ್ಷಿಗಳು ಗೊಂದಲಕ್ಕೊಳಗಾಗಿದ್ದಾರೆ, ಇದು ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ. ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠವು ತನ್ನ ಆದೇಶದಲ್ಲಿ ಮುಂದೂಡಿಕೆಯು ಅವ್ಯವಸ್ಥೆ ಮತ್ತು ಅನಿಶ್ಚಿತತೆ ಮತ್ತು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯನ್ನು ಸೃಷ್ಟಿಸುತ್ತದೆ ಎಂದು ಹೇಳಿದೆ.
ಮುಂದೂಡಿಕೆಯಿಂದ ಪರೀಕ್ಷೆಗೆ ಸಿದ್ಧರಾಗಿರುವ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತದೆ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಗಮನಿಸಿತು. ನಾವು ಇದನ್ನು ಮಾಡುವುದು ಹೇಗೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಕೇಳಿದ್ದಾರೆ.
ಪರೀಕ್ಷೆಯನ್ನು ನಡೆಸುವಲ್ಲಿ ಯಾವುದೇ ವಿಳಂಬವು ರೆಸಿಡೆಂಟ್ ಡಾಕ್ಟರ್ಸ್ಗಳ ಸಂಖ್ಯೆ ಕಡಿಮೆಯಾಗುವುದಕ್ಕೆ ಕಾರಣವಾಗುತ್ತದೆ ಎಂದು ಪೀಠವು ಗಮನಿಸಿದೆ. ನೀಟ್ ಪಿಜಿ 2022 ಅನ್ನು ಮುಂದೂಡುವ ವಿನಂತಿಯನ್ನು ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಇದು ರೋಗಿಗಳ ಆರೈಕೆ ಮತ್ತು ವೈದ್ಯರ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ, ರೋಗಿಗಳ ಆರೈಕೆಯ ಅಗತ್ಯ ಪ್ರಧಾನವಾದುದು ಎಂದಿದೆ. “ಸಾಂಕ್ರಾಮಿಕ ರೋಗದಿಂದಾಗಿ ಹಳಿತಪ್ಪಿದ ದೇಶವು ಹಳಿಗಳ ಮೇಲೆ ಹಿಂತಿರುಗುತ್ತಿದ್ದಂತೆ, ಈ ನ್ಯಾಯಾಲಯವು ನಿಗದಿಪಡಿಸಿದ ಸಮಯದ ವೇಳಾಪಟ್ಟಿಯನ್ನು ಅನುಸರಿಸಬೇಕು” ಎಂದು ಸುಪ್ರೀಂಕೋರ್ಟ್ ಹೇಳಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ