ತಾಜ್​ಮಹಲ್ ರಹಸ್ಯ: ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ತೀರ್ಮಾನ

ತಾಜ್​ಮಹಲ್ ರಹಸ್ಯ: ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ತೀರ್ಮಾನ
ಪ್ರಾತಿನಿಧಿಕ ಚಿತ್ರ

ವಿವಾದ ಶಾಶ್ವತವಾಗಿ ಕೊನೆಯಾಗಬೇಕು. ಹೀಗಾಗಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವುದಾಗಿ ಡಾ.ರಜನೀಶ್ ಸಿಂಗ್​ ಹೇಳಿದ್ದಾರೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 13, 2022 | 9:10 AM

ಲಖನೌ: ತಾಜ್​ಮಹಲ್​ನ 22 ಕೋಣೆಗಳ ಬೀಗ ತೆರೆದು ಪರಿಶೀಲನೆಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎನ್ನುವ ಅಲಹಾಬಾದ್​ ಹೈಕೋರ್ಟ್​ನ ಲಖನೌ ಪೀಠದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅರ್ಜಿದಾರ ಡಾ.ರಜನೀಶ್ ಸಿಂಗ್ ತೀರ್ಮಾನಿಸಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆ ಮೂಲದವರಾಗಿರುವ ರಜನೀಶ್ ಸಿಂಗ್​ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ಮಾಧ್ಯಮ ಉಸ್ತುವಾರಿಯಾಗಿದ್ದಾರೆ. ಅಲಹಾಬಾದ್ ತೀರ್ಪು ಪ್ರಶ್ನಿಸಿ, ಸುಪ್ರೀಂಕೋರ್ಟ್​ ಮೊರೆ ಹೋಗುವುದಾಗಿ ಅವರು ಘೋಷಿಸಿದ್ದಾರೆ. ತಾಜ್​ ಮಹಲ್​ನ 22 ಕೊಠಡಿಗಳಿಗೆ ಹಾಕಿರುವ ಬೀಗ ತೆರೆಯಬೇಕು. ಜನರಿಗೆ ಸತ್ಯ ಗೊತ್ತಾಗಬೇಕು, ವಿವಾದ ಶಾಶ್ವತವಾಗಿ ಕೊನೆಯಾಗಬೇಕು. ಹೀಗಾಗಿ ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವುದಾಗಿ ಡಾ.ರಜನೀಶ್ ಸಿಂಗ್​ ಹೇಳಿದ್ದಾರೆ.

ತಾಜ್​ಮಹಲ್ ಕುರಿತು ಮತ್ತಷ್ಟು ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

ಸತ್ಯ ಏನಿದ್ರೂ ಪರವಾಗಿಲ್ಲ, ಕೊಠಡಿಗಳ ಬೀಗ ತೆರೆಸಿ

ತಾಜ್​ಮಹಲ್​ ಕುರಿತ ಸತ್ಯ ಎಲ್ಲರಿಗೂ ಅರ್ಥವಾಗಬೇಕು. ತಾಜ್​ಮಹಲ್​ನ ಯಥಾರ್ಥ ಇತಿಹಾಸವನ್ನು ಜನರ ಎದುರು ತೆರೆದಿಡಲು ಸತ್ಯಶೋಧನ ಸಮಿತಿ ರಚಿಸಬೇಕು. ಸದಾ ಬೀಗ ಹಾಕಿರುವ 22 ಕೊಠಡಿಗಳ ಬೀಗಗಳನ್ನು ತೆರೆಯಬೇಕು ಎಂದು ಕೋರಿ ಅಲಹಾಬಾದ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಬಿಜೆಪಿ ಅಯೋಧ್ಯೆ ಘಟಕದ ಮಾಧ್ಯಮ ಪ್ರಮುಖ್ ರಜನೀಶ್ ಸಿಂಗ್ ಈ ಸಂಬಂಧ ಅಲಹಾಬಾದ್ ಹೈಕೋರ್ಟ್​ನ ಲಖನೌ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪ್ರಾಥಮಿಕ ಪರಿಶೀಲನೆಯ ನಂತರ ಈ ಅರ್ಜಿಯು ವಿಚಾರಣೆಗೆ ಬರಲಿದೆ. ‘ಸತ್ಯ ಏನಿದ್ದರೂ ಸರಿ, ಅದು ಜನರಿಗೆ ತಿಳಿಯಬೇಕಿದೆ. ಹೀಗಾಗಿಯೇ ತಾಜ್​ ಮಹಲ್​ನ 22 ಕೊಠಡಿಗಳ ಬೀಗ ತೆರೆಯಬೇಕು ಎಂದು ಅರ್ಜಿ ಸಲ್ಲಿಸಿದ್ದೇನೆ’ ಎಂದು ರಜನೀಶ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಪುರಾತತ್ವ ಮತ್ತು ಐತಿಹಾಸಿಕ ಸ್ಮಾರಕಗಳ ಕಾಯ್ದೆ (1951) ಹಾಗೂ ಪುರಾತತ್ವ ಮತ್ತು ಪ್ರಾಚೀನ ಸ್ಮಾರಕಗಳ ಕಾಯ್ದೆಯ (1958) ಕೆಲ ಅಂಶಗಳನ್ನು ತಾಜ್ ಮಹಲ್ ವಿಚಾರದಲ್ಲಿ ಕೈಬಿಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಈ ಕಾಯ್ದೆಗಳ ಅನ್ವಯವೇ ತಾಜ್​ಮಹಲ್, ಫತೇಪುರ್ ಸಿಕ್ರಿ, ಆಗ್ರಾ ಕೋಟೆ, ಇತಿಮದ್-ಉದ್-ದೌಲಾ ಸಮಾಧಿ ಇರುವ ಸ್ಥಳಗಳನ್ನು ಐತಿಹಾಸಿಕ ಸ್ಮಾರಕಗಳು ಎಂದು ಘೋಷಿಸಲಾಗಿದೆ.

ತಾಜ್​ ಮಹಲ್ ಸ್ಮಾರಕವಿರುವ ಸ್ಥಳದಲ್ಲಿ ಪ್ರಾಚೀನ ಶಿವ ದೇವಾಲಯವಿತ್ತು ಎಂದು ಹಲವು ಬಲಪಂಥೀಯ ಸಂಘಟನೆಗಳು ಪ್ರತಿಪಾದಿಸುತ್ತಿವೆ. ಇದೇ ಅಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯೂ ಪ್ರಸ್ತಾಪಿಸಿದೆ. ವಕೀಲರಾದ ರಾಮ್ ಪ್ರಕಾಶ್ ಶುಕ್ಲ ಮತ್ತು ರುದ್ರ ವಿಕ್ರಮ್ ಸಿಂಗ್ ಅರ್ಜಿದಾರರ ಪರವಾಗಿ ಹೈಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada