ನೀಟ್ ವಿರೋಧಿ ಮಸೂದೆ ಮಂಡಿಸಿದ ತಮಿಳುನಾಡು ಸರ್ಕಾರ; ಗೃಹ ಸಚಿವಾಲಯಕ್ಕೆ ಕಳಿಸಿಕೊಟ್ಟ ರಾಜ್ಯಪಾಲರು
ನೀಟ್ ವಿರೋಧಿ ಮಸೂದೆಯನ್ನು ಮೊದಲಬಾರಿ ತಮಿಳುನಾಡು ಸರ್ಕಾರ ರಾಜ್ಯಪಾಲರಿಗೆ ಕಳಿಸಿದಾಗ, ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅದನ್ನು ವಾಪಸ್ ಕಳಿಸಿದ್ದರು. ಆದರೆ ಸರ್ಕಾರ ಮತ್ತೊಮ್ಮೆ ಜಾರಿ ಮಾಡಿದೆ.
ತಮಿಳುನಾಡು ಸರ್ಕಾರ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗಾಗಿ ಆ್ಯಂಟಿ ನೀಟ್ ಬಿಲ್ (ನೀಟ್ ವಿರೋಧಿ ಮಸೂದೆ)ನ್ನು ಪರಿಚಯಿಸಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕಾದರೆ ಕಡ್ಡಾಯವಾಗಿ ಬರೆಯಬೇಕಾದ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆ ನೀಟ್ನಿಂದ (ರಾಷ್ಟ್ರೀಯ ಪ್ರವೇಶ-ಅರ್ಹತಾ ಪರೀಕ್ಷೆ-NEET) ವಿನಾಯಿತಿ ನೀಡುವ ಮಸೂದೆ ಇದಾಗಿದೆ. ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗಾಗಿ ನೀಟ್ ಬದಲು, ಬೇರೆ ಯಾವುದಾದರೂ ಮಾರ್ಗವನ್ನು ಕಂಡುಕೊಳ್ಳಲು ತಮಿಳುನಾಡು ಸರ್ಕಾರ ಮುಂದಾಗಿದೆ. ಹಾಗೇ, ವೈದ್ಯಕೀಯ ಸೀಟು ಆಕಾಂಕ್ಷಿ ವಿದ್ಯಾರ್ಥಿಗಳನ್ನು ಅವರ 12ನೇ ತರಗತಿ ಅಂಕದ ಆಧಾರದ ಮೇಲೆ ಕೂಡ ಪರಿಗಣಿಸಬಹುದು ಎಂಬ ಪ್ರಸ್ತಾಪವನ್ನೂ ಇಟ್ಟಿದೆ. ತಮ್ಮ ಈ ಕ್ರಮದಿಂದ ಸಾಮಾಜಿಕ ನ್ಯಾಯ ಸಲ್ಲಿಸದಂತಾಗುತ್ತದೆ ಮತ್ತು ಎಲ್ಲ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೂ ಸಹಾಯವಾಗಲಿದೆ ಎಂದು ಹೇಳಿದೆ.
ನೀಟ್ ಪರೀಕ್ಷೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗೆ ನೀಟ್ ಸರಿಯಾದ ಕ್ರಮವಲ್ಲ. ಕೋಚಿಂಗ್ ಪಡೆಯಲು ಸಮರ್ಥವಾಗಿರುವ ವಿದ್ಯಾರ್ಥಿಗಳು ಅಂದರೆ ಹಣಕಾಸಿನ ವಿಚಾರದಲ್ಲಿ ಸದೃಢರಾಗಿರುವ ಕುಟುಂಬಗಳ ವಿದ್ಯಾರ್ಥಿಗಳು ಮಾತ್ರ ಈ ನೀಟ್ ಪರೀಕ್ಷೆ ಬರೆಯಬಹುದು. ಪಠ್ಯಕ್ರಮವು ರಾಜ್ಯದಿಂದ ರಾಜ್ಯಕ್ಕೆ ಬೇರೆ ಇರುತ್ತದೆ. ಆಯಾ ರಾಜ್ಯಗಳ ಪಠ್ಯಕ್ರಮಗಳ ಅಭ್ಯಾಸ ಮಾಡಿದವರು, ಒಮ್ಮೆಲೆ ರಾಷ್ಟ್ರೀಯ ಮಟ್ಟದ ಪಠ್ಯಕ್ರಮ ಅಭ್ಯಸಿಸಿ ಪರೀಕ್ಷೆ ಬರೆಯಯುವುದು ಸರಿಯಾದ ಕ್ರಮವಲ್ಲ. ಇದು ವಿದ್ಯಾರ್ಥಿಗಳಲ್ಲಿ ಒತ್ತಡಕ್ಕೆ ಕಾರಣವಾಗುತ್ತದೆ ಎಂದೂ ತಮಿಳುನಾಡು ಸರ್ಕಾರ ಹೇಳಿದೆ.
ಈ ನೀಟ್ ಬಗ್ಗೆ ರಾಜ್ಯಾದ್ಯಂತ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಎ.ಕೆ.ರಾಜನ್ ಸಮಿತಿಯನ್ನು ತಮಿಳುನಾಡು ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ ‘ತಮಿಳುನಾಡಿನಲ್ಲಿ ವೈದ್ಯಕೀಯ ಪ್ರವೇಶಾತಿ ಮೇಲೆ ನೀಟ್ ಪರಿಣಾಮ’ ಎಂಬ ತಲೆಬರಹವುಳ್ಳ ವರದಿಯನ್ನು ಸಲ್ಲಿಸಿದೆ. ಹಾಗೇ, ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶಕ್ಕೆ ನೀಟ್ ಸೂಕ್ತವಾದ ಮಾರ್ಗವಲ್ಲ ಎಂಬ ರಾಜ್ಯ ಸರ್ಕಾರದ ನಿಲುವನ್ನೇ ಈ ಸಮಿತಿಯೂ ಪ್ರತಿಪಾದಿಸಿದೆ. ಒಟ್ಟು 165 ಪೇಜ್ಗಳ ವರದಿ ಸಲ್ಲಿಸಿರುವ ಸಮಿತಿ, ನೀಟ್ ಪರೀಕ್ಷೆ ಬರೆದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡ ವಿದ್ಯಾರ್ಥಿಗಳಲ್ಲಿ ಕೆಲವರು ಮಾತ್ರ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ನೀಟ್ ಪರೀಕ್ಷೆ ಪದ್ಧತಿ ಬರುವುದಕ್ಕೂ ಮೊದಲು ತಮಿಳುನಾಡಿನಲ್ಲಿ ಈ ವಿಭಾಗದ ಸರಾಸರಿ ಶೇ.61.45ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುತ್ತಿದ್ದರು. ಆದರೆ ನೀಟ್ ಪರೀಕ್ಷೆ ಶುರುವಾದ ಮೇಲೆ ಆ ಪ್ರಮಾಣ ಇಳಿಕೆಯಾಗಿದೆ. 2020-21ರಲ್ಲಿ ಗ್ರಾಮೀಣ ಪ್ರದೇಶದ ಶೇ.49.91 ವಿದ್ಯಾರ್ಥಿಗಳು ಮಾತ್ರ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ ಎಂದು ವಿವರಿಸಲಾಗಿದೆ. ನೀಟ್ ಬರೆದು ಪ್ರವೇಶ ಗಿಟ್ಟಿಸಿಕೊಂಡ ಅದೆಷ್ಟೋ ವಿದ್ಯಾರ್ಥಿಗಳು, 12ನೇ ತರಗತಿ ಅಂಕದ ಆಧಾರದ ಮೇಲೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಿಂತಲೂ ಅತ್ಯಂತ ಕಳಪೆ ಸಾಧನೆ ಮಾಡಿದ್ದು ನಮ್ಮ ಸಮೀಕ್ಷೆಯಲ್ಲಿ ಗೊತ್ತಾಗಿದೆ ಎಂದೂ ಸಮಿತಿ ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯಕ್ಕೆ ಕಳಿಸಿದ ರಾಜ್ಯಪಾಲ
ನೀಟ್ ವಿರೋಧಿ ಮಸೂದೆಯನ್ನು ಮೊದಲಬಾರಿ ತಮಿಳುನಾಡು ಸರ್ಕಾರ ರಾಜ್ಯಪಾಲರಿಗೆ ಕಳಿಸಿದಾಗ, ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅದನ್ನು ವಾಪಸ್ ಕಳಿಸಿದ್ದರು. ಆದರೆ ಸರ್ಕಾರ ಮತ್ತೊಮ್ಮೆ ಜಾರಿ ಮಾಡಿದೆ. ಹೀಗಾಗಿ ಅದನ್ನೀಗ ರಾಜ್ಯಪಾಲರು ಕೇಂದ್ರ ಗೃಹಸಚಿವಾಲಯಕ್ಕೆ ಕಳಿಸಿಕೊಟ್ಟಿದ್ದಾರೆ. ಅಲ್ಲಿಂದ ಈ ಮಸೂದೆ ರಾಷ್ಟ್ರಪತಿಯವರ ಬಳಿ ಹೋಗಲಿದೆ. ಈ ಮಸೂದಗೆ ಖಂಡಿತ ತಿರಸ್ಕೃತಗೊಳ್ಳುತ್ತದೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವರ್ಗಾವಣೆ; ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ನೇಮಕ
Published On - 4:50 pm, Thu, 5 May 22