AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಡ್​ ನ್ಯೂಸ್: 200 ಹೆಚ್ಚುವರಿ ವೈದ್ಯಕೀಯ ಸೀಟು ಮಂಜೂರು, ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೆ 200 ಹೆಚ್ಚುವರಿ ವೈದ್ಯಕೀಯ ಸೀಟು ಮಂಜೂರು ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿಳಿಸಿದೆ. ಹೀಗಾಗಿ 3ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಅರ್ಜಿಸಲ್ಲಿಸಬಹುದು. ಯಾವ್ಯಾವ ಮೆಡಿಕಲ್ ಕಾಲೇಜಿನಲ್ಲಿ ಹೆಚ್ಚುವರಿ ಸೀಟು? ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವಾಗ ಎನ್ನುವ ವಿವರ ಇಲ್ಲಿದೆ.

ಗುಡ್​ ನ್ಯೂಸ್: 200 ಹೆಚ್ಚುವರಿ ವೈದ್ಯಕೀಯ ಸೀಟು ಮಂಜೂರು,  ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
Medical Seats
ರಮೇಶ್ ಬಿ. ಜವಳಗೇರಾ
|

Updated on: Oct 13, 2025 | 4:36 PM

Share

ಬೆಂಗಳೂರು, (ಅಕ್ಟೋಬರ್ 13): ಕರ್ನಾಟಕದ (Karnataka) ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ (Medical College)  ವೈದ್ಯಕೀಯ ಸಲಹಾ ಸಮಿತಿ (MCC) ತಲಾ 50 ಸೀಟುಗಳಂತೆ ಒಟ್ಟು 200 ಸೀಟು (Medical Seats) ಹೆಚ್ಚುವರಿಯಾಗಿ ಮಂಜೂರು ಮಾಡಿದೆ. ಕಾರಣ 3ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಆಯ್ಕೆಗಳನ್ನು ದಾಖಲಿಸಲು ಅಕ್ಟೋಬರ್ 15ರಂದು ಬೆಳಿಗ್ಗೆ 8 ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ. ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡಿರುವುದರಿಂದ ಡಾಕ್ಟರ್ ಆಗಲು ಕನಸು ಕಾಣುತ್ತಿರುವ ವಿದ್ಯಾರ್ಥಿಗಳಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಶಿವಮೊಗ್ಗದ ಸುಬ್ಬಯ್ಯ, ಬೆಂಗಳೂರು ನಾಗರೂರಿನ ಬಿಜಿಎಸ್, ತುಮಕೂರಿನ ಶ್ರೀದೇವಿ, ಮಂಗಳೂರಿನ ಎ.ಜೆ. ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿ ಸೀಟು ಹಂಚಿಕೆ ಮಾಡಿದ್ದು, ಅವುಗಳ ಪ್ರವೇಶಕ್ಕೆ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ. ಈ ಕಾಲೇಜುಗಳ ಶುಲ್ಕವನ್ನು ಗಮನಿಸಿ ಆಪ್ಷನ್ಸ್ ದಾಖಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಇದನ್ನೂ ಓದಿ: Brazil Scholarships: ಭಾರತೀಯ ವಿದ್ಯಾರ್ಥಿಗಳಿಗೆ ಬ್ರೆಜಿಲ್ ಸರ್ಕಾರ ನೀಡುತ್ತಿದೆ ಸ್ಕಾಲರ್​ ಶಿಪ್​; ಹೀಗೆ ಅರ್ಜಿ ಸಲ್ಲಿಸಿ

ಈಗಾಗಲೇ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿ ಕಾಲೇಜುಗಳಿಗೆ ವರದಿ ಮಾಡಿಕೊಂಡವರು ಕೂಡ ಈ ನಾಲ್ಕು ಕಾಲೇಜುಗಳ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಅಂತಹವರು ಅಕ್ಟೋಬರ್ 15ರಂದು ಬೆಳಿಗ್ಗೆ 11ರಿಂದ ಅ.16ರಂದು ಬೆಳಿಗ್ಗೆ 8 ಗಂಟೆವರೆಗೆ ಆಪ್ಷನ್ಸ್ ದಾಖಲಿಸಬಹುದು. ಇವರು ಈಗಾಗಲೇ ಶುಲ್ಕ ಕಟ್ಟಿರುವ ಕಾರಣ ಅವರು ಮುಂಗಡ ಶುಲ್ಕ ಕಟ್ಟುವ ಅಗತ್ಯ ಇರುವುದಿಲ್ಲ.

ಆದರೆ ಯಾರಿಗೆ ಸೀಟು ಹಂಚಿಕೆಯಾಗಿಲ್ಲವೊ ಅಂತಹವರು ಮುಂಗಡ ಶುಲ್ಕ ಕಟ್ಟಬೇಕು. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದರೆ ಪ್ರವೇಶ ಪಡೆಯುವುದು ಕಡ್ಡಾಯ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಐಎಎಸ್ ಮಾಹಿತಿ ನೀಡಿದ್ದಾರೆ.

ಪ್ರಸ್ತಾವನೆ ಸಲ್ಲಿಸಿದ್ದ ಸಚಿವರು

ಎನ್‌ಎಂಸಿ ದೇಶಾದ್ಯಂತ ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರು ನವದೆಹಲಿಗೆ ತೆರಳಿ ಭೇಟಿಯಾಗಿ ರಾಜ್ಯದ 15 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.ಕರ್ನಾಟಕದಲ್ಲಿ ಪ್ರತಿ ವರ್ಷ ವೈದ್ಯಕೀಯ ದಾಖಲಾತಿಯಾಗುವವರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವು ಪ್ರತಿಭಾವಂತ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಿಗೆ ಅಧಿಕ ಶುಲ್ಕ ಕಟ್ಟಿ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕರ್ನಾಟಕಕ್ಕೆ ನಿಗದಿಪಡಿಸಿರುವ ವೈದ್ಯಕೀಯ ಸೀಟುಗಳು ಜೊತೆಗೆ ಹೆಚ್ಚುವರಿಯಾಗಿ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದರು.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ