ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಏಪ್ರಿಲ್ 1 ರಂದು ‘ಪರೀಕ್ಷಾ ಪೇ ಚರ್ಚಾ 2022’ರ (Pariksha Pe Charcha 2022) ಅಂಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ವಿದ್ಯಾರ್ಥಿಗಳು ಮುಂಬರುವ ಬೋರ್ಡ್ ಎಕ್ಸಾಂಗಳನ್ನು ಯಾವುದೇ ಆತಂಕವಿಲ್ಲದೇ, ಆತ್ಮವಿಶ್ವಾಸದಿಂದ ಎದುರಿಸುವ ಕುರಿತು ‘ಪರೀಕ್ಷಾ ಪೇ ಚರ್ಚಾ’ದಲ್ಲಿ ಪ್ರಧಾನಿಯೊಂದಿಗೆ ಸಂವಾದ ನಡೆಯಲಿದೆ. ‘ಪರೀಕ್ಷಾ ಪೇ ಚರ್ಚಾ’ದ 5ನೇ ಆವೃತ್ತಿ ಇದಾಗಿದ್ದು, ನವದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆಯಲಿದೆ. ಶಿಕ್ಷಣ ಸಚಿವಾಲಯವು ಈ ಕುರಿತು ದಿನಾಂಕವನ್ನು ಘೋಷಿಸಿ ಟ್ವೀಟ್ ಮಾಡಿದೆ. ‘‘ಕಾಯುವಿಕೆ ಅಂತ್ಯಗೊಂಡಿದೆ. ಏಪ್ರಿಲ್ 1ರಂದು ಟಾಲ್ಕಟೋರಾ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ಮೋದಿ ಜತೆಗಿನ ಸಂವಾದದಲ್ಲಿ ಅವರು, ಪರೀಕ್ಷಾ ಭಯವನ್ನು ಹೇಗೆ ಎದುರಿಸಬೇಕು ಎನ್ನುವುದರ ಬಗ್ಗೆ ಮಾತನಾಡಲಿದ್ದಾರೆ’’ ಎಂದು ಟ್ವೀಟ್ ಮಾಡಲಾಗಿದೆ. ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕೆ 12.12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. 2.71 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಈ ವರ್ಷದ ಕಾರ್ಯಕ್ರಮಕ್ಕೆ ಹೆಸರು ಸಲ್ಲಿಸಿದ್ದು, ಈವೆಂಟ್ನಲ್ಲಿ ಭಾಗಿಯಾಗಲಿದ್ದಾರೆ.
ಶಿಕ್ಷಣ ಸಚಿವಾಲಯದ ಟ್ವೀಟ್:
The wait is now over! The 5th edition of #PPC2022 is going to be held on 1st April, 2022 at Talkatora Stadium, New Delhi. Hon’ble PM Shri @narendramodi will interact with students & share his insights on how to beat exam stress. Stay Tuned! #ExamWarriors pic.twitter.com/j36wWLvDrZ
— Ministry of Education (@EduMinOfIndia) March 24, 2022
ಪ್ರಧಾನಿ ಮೋದಿಯವರ ‘ಪರೀಕ್ಷಾ ಪೇ ಚರ್ಚಾ’ವನ್ನು 2018 ರಿಂದ ಪ್ರತಿ ವರ್ಷ ನಡೆಸಲಾಗುತ್ತಿದೆ. ಅಲ್ಲಿ ಪ್ರಧಾನ ಮಂತ್ರಿಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸುತ್ತಾರೆ. ಈ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಗುತ್ತದೆ. ದೇಶದಲ್ಲಿ ಬೋರ್ಡ್ ಪರೀಕ್ಷೆಗಳು ಆರಂಭವಾಗುವ ಮುನ್ನ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸೇರಿದಂತೆ ಹಲವಾರು ಬೋರ್ಡ್‌ಗಳು ಏಪ್ರಿಲ್ 26 ರಿಂದ ಟರ್ಮ್ 2 ಬೋರ್ಡ್ ಪರೀಕ್ಷೆಗಳನ್ನು ನಡೆಸಲಿವೆ. JEE ಮೇನ್ಸ್ ಸೇರಿದಂತೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳು ಸಹ ಏಪ್ರಿಲ್‌ನಲ್ಲಿ ನಡೆಯಲಿದೆ.
ಕೊರೊನಾ ಕಾರಣದಿಂದ ಕಳೆದ ವರ್ಷ ಕಾರ್ಯಕ್ರಮವನ್ನು ವರ್ಚುವಲ್ ಮೋಡ್ನಲ್ಲಿ ನಡೆಸಲಾಗಿತ್ತು. ಈ ಬಾರಿ ಸಾರ್ವಜನಿಕವಾಗಿ ನಡೆಯಲಿದೆ. ಪರೀಕ್ಷಾ ಪೇ ಚರ್ಚಾಗೆ ನೋಂದಣಿ ಕಾರ್ಯವು ಡಿಸೆಂಬರ್ 28ರಂದು ಆರಂಭವಾಗಿತ್ತು. ಜನವರಿ 20ರವರೆಗೆ ನೋಂದಣಿ ಮಾಡಲು ಅವಕಾಶವಿತ್ತು. ‘ಪರೀಕ್ಷಾ ಪೇ ಚರ್ಚಾ’ಗೆ ಪ್ರವೇಶವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಕೆಲವು ಆನ್‌ಲೈನ್ ಸ್ಪರ್ಧೆಗಳನ್ನು ಆಧರಿಸಿರುತ್ತದೆ. ವಿಜೇತರು ನೇರವಾಗಿ ಪ್ರಧಾನ ಮಂತ್ರಿಯೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಪಡೆಯುತ್ತಾರೆ. ಈ ವಿಶೇಷ ವಿಜೇತರು ತಮ್ಮ ಹಸ್ತಾಕ್ಷರದ ಛಾಯಾಚಿತ್ರದ ಡಿಜಿಟಲ್ ಸ್ಮರಣಿಕೆಯನ್ನು ಪಡೆಯುತ್ತಾರೆ. ಅವರಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರವನ್ನೂ ನೀಡಲಾಗುವುದು.
ಇದನ್ನೂ ಓದಿ:
TATA IPL 2022: ಐಪಿಎಲ್ 2022 ಅನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
Published On - 12:39 pm, Fri, 25 March 22