ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಿಜಿ ಸೀಟ್ ಪಡೆಯಲು ಹತ್ತಾರು ಸಂಕಷ್ಟ; ಇದು ಖಾಸಗಿ ಕಾಲೇಜುಗಳಿಗೆ ಸೀಟು ಹಂಚುವ ದುರಾಲೋಚನೆಯೇ?
ಒಂದು ಮಾಹಿತಿಯ ಪ್ರಕಾರ ಆನ್‌ಲೈನ್ ಗೊಂದಲ ಸೃಷ್ಟಿಸಿ, ಸೀಟ್ ಪಡೆಯುವುದನ್ನು ವಿಫಲಗೊಳಿಸಿ, ಖಾಸಗಿ ಕಾಲೇಜುಗಳಿಗೆ ಸೀಟು ಮರು ಹಂಚಿಕೆ ಮಾಡಿ, ಮಾರಿಕೊಳ್ಳುವ ತಂತ್ರ ನಡೆದಿದೆ ಎಂಬ ಆರೋಪವಿದೆ. ಇದರ ಹಿಂದೆ ಏನಿದೆ?
ಪ್ರಾತಿನಿಧಿಕ ಚಿತ್ರ
Follow us on
ಈಗ ನಡೆಯುತ್ತಿರುವ ಪಿಜಿಇಟಿ- 21 (ನೀಟ್ ಪಿಜಿ ಸೀಟ್) ಪಿಜಿ ಮೆಡಿಕಲ್ ಸೀಟ್ ಹಂಚಿಕೆಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿರುವ ಕೆಇಎ (ಕರ್ನಾಟಕ ಪರೀಕ್ಷಾ ಅಥಾರಿಟಿ, ಬೆಂಗಳೂರು) ಬಾರೀ ಅನುಮಾನಗಳಿಗೆ ಎಡೆ ಮಾಡಿದೆ. ಬರೋಬ್ಬರಿ ಒಂದು ವರ್ಷ ಕಾದು ಕುಳಿತ ಮೆಡಿಕಲ್ ಪಿಜಿ ವಿದ್ಯಾರ್ಥಿಗಳ ಜೀವನದಲ್ಲಿ ಆಟ ಆಡುತ್ತಿದೆ. ಸುಮಾರು ಐವತ್ತು ಸಾವಿರ ಪಿಜಿ ಮೆಡಿಕಲ್ ವಿದ್ಯಾರ್ಥಿಗಳ ಬದುಕನ್ನು ಅತಂತ್ರಗೊಳಿಸುವ ಕೆಟ್ಟ ನಡಾವಳಿಯಿಂದ ಕೆಇಎ ಆರೋಪಕ್ಕೆ ಒಳಗಾಗಿದೆ. ಈ ತರಹದ ಗೊಂದಲ ಸೃಷ್ಟಿಸಿ, ವಿದ್ಯಾರ್ಥಿಗಳು ಸಕಾಲದಲ್ಲಿ ಸೀಟ್ ಪಡೆಯದೇ ಉಳಿದು ಬಿಟ್ಟರೆ ಅದು ಖಾಸಗೀ ಪಾಲಾಗುವ ಸಂಭವವಿದೆ. ಇದರ ಹಿಂದೆ ಇಡೀ ವ್ಯವಸ್ಥೆ ದಂಧೆ ನಡೆಸಿರಬಹುದು ಎಂಬ ಆರೋಪಗಳು ಇವೆ. ಮಕ್ಕಳಿಗೆ ತೊಂದರೆಯಾಗುತ್ತಿರುವ ಪರಿಜ್ಞಾನವಿದ್ದರೂ ಹುಂಬತನದ ವರ್ತನೆಯಿಂದೆ ಬಾರೀ ಗೋಲ್ ಮಾಲ್ ನಡೆಯುತ್ತಿದೆ ಎಂದು ಪೋಷಕರು ಮಾತಾಡುತ್ತಿದ್ದಾರೆ.
ಕೇಂದ್ರ ಸರ್ಕಾರದ ವೈದ್ಯಕೀಯ ಸ್ನಾತಕೊತ್ತರ ಪಿಜಿಇಟಿ 21. ಪಿಜಿ ಸೀಟ್ ಹಂಚಿಕೆ ಸರಳವಾಗಿ, ಸುಲಭವಾಗಿ ನಡೆಯುತ್ತಿದೆ. ಅವರು ಏಕ ಕಾಲದಲ್ಲಿ ಸಾವಿರಾರು ಸೀಟು ನೀಡಿದರೂ ವಿದ್ಯಾರ್ಥಿಗಳಿಗೆ ಯಾವ ಅಡಚಣೆಯೂ ಆಗಿಲ್ಲ. ಆದರೆ ರಾಜ್ಯ ಕೆಇಎ ತನ್ನ ನಿರ್ಲಕ್ಷ್ಯ, ಬೇಜವಬ್ಧಾರಿತನ, ಉದಾಸೀನತೆಯ ಪರಿಣಾಮ ರಾಜ್ಯದ ಗ್ರಾಮೀಣ ಭಾಗದ ಪಿಜಿ ಮೆಡಿಕಲ್ ವಿದ್ಯಾರ್ಥಿಗಳ ಪಿಜಿ ಸೀಟ್ ಕನಸು ಮುರಿದು ಬೀಳುವಂತಾಗಿದೆ. ಕಳೆದ ಒಂದು ವರ್ಷದಿಂದ ಕಾದು ಕುಳಿತ ಎಂಬಿಬಿಎಸ್ ಪದವೀಧರರು ಪಿಜಿ ಸೀಟು ಪಡೆಯುವಾಗ ಸಮಸ್ಯೆ ಶುರುವಾಗಿದೆ.
ಒಂದು ಮಾಹಿತಿಯ ಪ್ರಕಾರ ಆನ್‌ಲೈನ್ ಗೊಂದಲ ಸೃಷ್ಟಿಸಿ, ಸೀಟ್ ಪಡೆಯುವುದನ್ನು ವಿಫಲಗೊಳಿಸಿ, ಖಾಸಗಿ ಕಾಲೇಜುಗಳಿಗೆ ಸೀಟು ಮರು ಹಂಚಿಕೆ ಮಾಡಿ, ಮಾರಿಕೊಳ್ಳುವ ತಂತ್ರ ನಡೆದಿದೆ ಎಂಬ ಆರೋಪವಿದೆ. 2021ರಲ್ಲಿ ನಡೆಯಬೇಕಿದ್ದ ಪ್ರವೇಶ ಪರೀಕ್ಷೆ ಕೊವಿಡ್ ಕಾರಣದಿಂದ ಒಂದು ವರ್ಷ ವಿಳಂಬವಾಗಿ ನಡೆಯಿತು. ರ್ಯಾಂಕ್ ಫಲಿತಾಂಶ ಸಹ ವಿಳಂಬವಾಯಿತು. ನಂತರ ನೀಟ್, ಪಿಜಿಇಟಿ 21 ಹಂಚಿಕೆಗೆ EWS ಮೀಸಲಾತಿ ಸಂಬಂಧ ವಿದ್ಯಾರ್ಥಿಗಳು ಸುಪ್ರಿಂ ಕೋರ್ಟ್ ಮೆಟ್ಟಿಲು ಹತ್ತಿ ಮೂರು ತಿಂಗಳು ವಿಳಂಬವಾಗಿದೆ.
ಎಲ್ಲಾ ಮುಗಿದು ಜನವರಿಯಲ್ಲಿ ಸೀಟ್ ಹಂಚಿಕೆಗೆ ಅನುಮತಿ ದೊರೆತ ನಂತರ ಕೇಂದ್ರ ಸರ್ಕಾರ ಸರಳವಾಗಿ, ಸುಲಭವಾಗಿ ಆನ್‌ಲೈನ್ ಸೀಟು ಹಂಚುವ ಪ್ರಕ್ರಿಯೆ ನಡೆಸಿದರೆ, ರಾಜ್ಯ ಸರ್ಕಾರ ಹಲವು ಸಮಸ್ಯೆ ಒಡ್ಡಿ ಕುಳಿತಿದೆ. ಇವರ ನಾನಾ ತಪ್ಪು ತಪ್ಪು ನಿರ್ಧಾರ, ಅಪ್‌ಡೇಟ್ ಆಗದ ವೆಬ್‌ಸೈಟ್ ಕ್ರಮಗಳಿಂದ ಗ್ರಾಮೀಣ ವಿದ್ಯಾರ್ಥಿಗಳು ಆತಂಕ, ಭಯದಲ್ಲಿ, ದಿಕ್ಕು ಕಾಣದಂತೆ ಇದ್ದಾರೆ. ಅವರ ಸಮಸ್ಯೆ ಕೇಳುವವರು ಯಾರೂ ಇಲ್ಲದಂತಾಗಿದೆ. ಎಲ್ಲಿ ಹೋಗಬೇಕು, ಏನು ಮಾಡಬೇಕು ಎಂದು ಗೊತ್ತಾಗದೇ ಸಾಕಷ್ಟು ಒತ್ತಡ, ನೋವಿನಲ್ಲಿದ್ದಾರೆ. ಕೆಇಎ ಮಾಡುವ ಅನ್ಯಾಯ ಯಾರಿಗೂ ತಿಳಿಯುತ್ತಿಲ್ಲ. ಮನಸ್ಸಿಗೆ ಬಂದಂತೆ ಆನ್‌ಲೈನ್ ವ್ಯವಸ್ಥೆ ಮಾಡಿದ್ದು, ಇವತ್ತಿಗೆ ಅಪ್‌ಡೇಟ್ ಮಾಡಿಲ್ಲ.
ವಿದ್ಯಾರ್ಥಿಗಳು ಅತೀ ಗೊಂದಲದಲ್ಲಿದ್ದಾರೆ. ಇಲ್ಲಿನ ಸಮಸ್ಯೆಗಳು ಏನೇನು?
CAP nic ನಿರ್ಮಿತ centralise seat allotment pr. Website ನಿಂದ PG NEET medical and DNB – 2021. ಇದು ಹಳೆಯ ವೆಬ್‌ಸೈಟ್ ಅಪ್‌ಡೇಟ್ ಆಗಿಲ್ಲ. ಇದು ಸರಳ, ಸುಲಭವಾಗಿಲ್ಲ. ಹಳೆಯ ಡಿಪ್ಲೋಮೋ ಆಪ್ಶನ್ ತೆಗೆದು ಹಾಕಿಲ್ಲ. ಹೊಸಬರಿಗೆ ಬ್ರೌಸ್ ಮಾಡಲು, ಆನ್‌ಲೈನ್ ಅಪ್‌ಡೇಟ್ ಮಾಡಲು ಕಷ್ಟವಾಗಿದೆ.
ಕೆಇಎ ನೀಡಿರುವ ಕಾಲೇಜು ಶಿಕ್ಷಣ ಶುಲ್ಕ ರಚನೆ ಪಟ್ಟಿಗೂ, ಸೀಟು ಲಭ್ಯತೆ ಪಟ್ಟಿ ಹಾಗೂ ವೆಬ್‌ಸೈಟ್ ಸೀಟು ಲಭ್ಯತೆಗೂ ಬಾರೀ ವ್ಯತ್ಯಾಸವಿದೆ. ಉದಾಹರಣೆಗೆ ವೆಬ್ಸೈಟ್ನಲ್ಲಿ ಬೀದರ್ ಹಾಗೂ ಗದಗ ಮೆಡಿಕಲ್ ಕಾಲೇಜುಗಳಲ್ಲಿ ಯಾವ ಸೀಟ್ ಲಭ್ಯವಿಲ್ಲ ಶೂನ್ಯ ಎಂದು ತೋರಿಸಿದರೆ. (D1) ಸೀಟು ಲಭ್ಯ ಪಟ್ಟಿ ಹಾಗೂ ಶುಲ್ಕ ನಿಗಧಿ ಪಟ್ಟಿಯಲ್ಲಿ ಸೀಟು ಲಭ್ಯವಿದೆ ಎಂದು ತೋರಿಸಿದೆ. (D2)
ಮಂಗಳೂರು ಕಸ್ತುರ್ಬಾ ಮೆಡಿಕಲ್ ಕಾಲೇಜಿಗೆ ರೇಡಿಯೋ ಡಯಾಗ್ನೈಸ್ ಪ್ರವೇಶ ಪಡೆಯಲು ಶುಲ್ಕ ಪಟ್ಟಿಯಲ್ಲಿ ಜಿ ಸೀಟ್ ಶುಲ್ಕ 7,13,780/- ಇದೆ. ಅದೇ ವೆಬ್‌ಸೈಟ್ ನಲ್ಲಿ ಸೀಟ್ ಪಡೆಯಲು ಆಪ್ಶನ್ ಪ್ರವೇಶದಲ್ಲಿ ಅದೇ ರೆಡಿಯೋ ಡಯಾಗ್ನೈಸ್ ಜಿ- 38,98,500/- ಇದೆ. ಈ ಗೊಂದಲ ಏಕೆ? ವಾಸ್ತವ ಸರ್ಕಾರಿ ಶುಲ್ಕ ಎಷ್ಟು? ಮಕ್ಕಳು ಹೆಚ್ಚು ಶುಲ್ಕ ಎಂದು ಆಯ್ಕೆ ಮಾಡದೇ ಬಿಡುತ್ತಾರೆ. (D-6)
PGET- 21 ಪಿಜಿ ಸಿಇಟಿ ನೋಂದಾವಣೆಗೆ ನೀಡಿದ ಅವಧಿ ಕಡಿಮೆಯಿದ್ದು ಬಹಳ ಮಕ್ಕಳು ನೋಂದಾವಣೆ ಮಾಡಲು ಕಷ್ಡವಾಗಿದೆ.
ಕರ್ನಾಟಕ ಪಿಜಿಇಟಿ 21 ಗೆ ನೋಂದಾವಣೆಗೆ 500/- ಆನ್‌ಲೈನ್ ಪಾವತಿಗೆ ಮೊದಲು ಇಂಟರ್‌ನೆಟ್ ಹಾಗೂ ರೂಪೆ ಕಾರ್ಡ್ ಮಾತ್ರ ಅವಕಾಶವಿದ್ದು ಇತರೆ ಡೆಬಿಟ್ ಅವಕಾಶ ತಪ್ಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆ ಮಾಡಿದ್ದರು. ನಾವು ಈ ಬಗ್ಗೆ ಮನವರಿಕೆ ಮಾಡಿದ ಮೇಲೆ ಸರಿ ಪಡಿಸಿದರು. ಅಷ್ಟರಲ್ಲಿ ಆರು ಗಂಟೆ ಕಳೆದು ಹೋಗಿತ್ತು. ಬಹಳಷ್ಟು ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು.
ಪಿಜಿಇಟಿ 21 ನೊಂದಾವಣೆ ಪೂರ್ಣವಾಗಲು ವಿಳಂಬ, ಗೊಂದಲದ ನಡುವೆಯೇ ದಾಖಲಾತಿ ಪರಿಶೀಲನೆಗೆ ಕರೆದಿದ್ದು ವಿವೇಚನಾ ರಹಿತ ನಡಾವಳಿ. ಕೆಇಎ ಆನ್‌ಲೈನ್ ರದ್ದು ಮಾಡಿ ಆಫ್‌ಲೈನ್‌ನಲ್ಲಿ ದಾಖಲಾತಿ ಪರಿಶೀಲನೆಗೆ ಬೆಂಗಳೂರಿಗೆ 50 ಸಾವಿರ ವಿದ್ಯಾರ್ಥಿಗಳ ಬರ ಹೇಳಿ, ನೂರಾರು ವಿದ್ಯಾರ್ಥಿಗಳಿಗೆ ಕೊವಿಡ್ ಹರಡಲು ಕಾರಣವಾಗಿದ್ದರು. ನಂತರ ನಾವು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮೂಲಕ ಆರೋಗ್ಯ ಸಚಿವರಿಗೆ ಮನವಿ ಮಾಡಿರುವ ಜೊತೆಗೆ ಆರೋಗ್ಯ ಸಚಿವರ ಕಚೇರಿಗೆ ವಿಷಯ ತಿಳಿಸಲಾಗಿತ್ತು. ಸಿಎಂಗೆ ಹಾಗೂ ಆರೋಗ್ಯ ಸಚಿವರಿಗೆ ಟ್ವೀಟ್ ಮಾಡಲಾಗಿತ್ತು. (D3) ಪರಿಸ್ಥಿತಿ ಗಂಭೀರತೆ ಮನವರಿಕೆ ಮಾಡಲಾಗಿತ್ತು. ತಕ್ಷಣ ಕೆಇಎ ಎರಡು ದಿನಕ್ಕೆ ಆಫ್‌ಲೈನ್ ವೆರಿಫಿಕೇಷನ್ ರದ್ದು ಮಾಡಿ ಪುನಃ ಆನ್‌ಲೈನ್ ಮಾಡಿದರು. ಸರಿ, ಆದರೆ ಇವತ್ತಿನವರೆಗೂ (ಅಂದರೆ 25.1.2022) ಸಂಜೆಯವರೆಗೂ ಕೆಲವರಿಗೆ ಕೆಲವರಿಗೆ ಪಿಜಿಇಟಿ ನಂ. ಸಿಕ್ಕಿಲ್ಲ. ಹೀಗಾದರೆ ಆಪ್ಶನ್ ಎಂಟ್ರಿ ಹೇಗೆ ಸಾಧ್ಯ?
ಇದರ ಮಧ್ಯೆ 24.1.2022 ಬೆಳಗ್ಗೆ 11 ರಿಂದ 25.1.2022 ಬೆಳಗ್ಗೆ 11 ರವರೆಗೆ ಆಪ್ಶನ್ ಎಂಟ್ರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದು ಹೇಗೆ ಸಾಧ್ಯ? ಅಲ್ಲದೇ ವೆಬ್‌ಸೈಟ್ ನಲ್ಲಿ ದಿನಾಂಕ ಆರಂಭದ್ದು 2020 ತೋರಿಸುತ್ತಿದೆ (D4). ಪತ್ರವನ್ನೂ ಅದೇ ದಿನ ಹಾಕಲಾಗಿದೆ. (D5) ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಹೇಗೆ ತಲುಪಿಸಲಾಗಿದೆ. ಐವತ್ತು ಸಾವಿರ ರ್ಯಾಂಕ್ ವಿದ್ಯಾರ್ಥಿಗಳು ಏಕ ಕಾಲದಲ್ಲಿ ಕಾಲೇಜು, ಕೋರ್ಸ್ ಆಯ್ಕೆಗಾಗಿ ಎಂಟ್ರಿ ಮಾಡಲು ಕಷ್ಟಕರ. ಪುನಃ ಆರೋಗ್ಯ ಸಚಿವರ ಕಚೇರಿ ಸಂಪರ್ಕಿಸಿ, ಮಿಡಿಯಾ ಮೂಲಕ ಒತ್ತಡ ಹಾಕಿದಾಗ ಪುನಃ ಎರಡು ದಿನ ಆಪ್ಸನ್ ಎಂಟ್ರಿಗೆ ಅವಕಾಶ ಕಲ್ಪಿಸಿದ್ದಾರೆ.
ಕಾಲೇಜುಗಳ ಆಯ್ಕೆಗಾಗಿ ಆನ್‌ಲೈನ್ ನಲ್ಲಿ ಆಪ್ಶನಲ್ ನಮೂದಿಸಲು ಕೇವಲ 24 ಅವಕಾಶ ನೀಡಿದ್ದು ಅದೂ ನಾಲ್ಕು ಗಂಟೆ ತಡವಾಗಿ ಆನ್‌ಲೈನ್ ಮೂಲಕ ಮಾಹಿತಿ ನೀಡಲಾಗಿದೆ. ಪ್ರತಿ ಬಾರಿ ಎರಡು ಮೂರು ದಿನ ಅವಕಾಶ ನೀಡಿದ್ದು ಈ ಬಾರಿ ಕಡಿತಗೊಳಿಸಿ, ವಿದ್ಯಾರ್ಥಿಗಳನ್ನು ಗೊಂದಲಕ್ಕಿಡುಮಾಡಿದ್ದು ಯಾಕೆ ಅನ್ನೋದೇ ಯಕ್ಷ ಪ್ರಶ್ನೆ.
ಸೀಟ್ ಆಯ್ಕೆ, ನೈಜ ಫಲಿತಾಂಶ 29.1.2022 ಸಂಜೆ 7 ಗಂಟೆ. ಅದೇ ದಿನ ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 31.1.2022 ರ ಬೆಳಗ್ಗೆ 11 ಗಂಟೆಯವರೆಗೆ ಚಾಯ್ಸ್ ಮಾಡುವ ಅವಕಾಶ. ಅದೇ ದಿನ ಆರಂಭಿಸಿ ಮರುದಿನ 1.2.2022ರ ವೆರೆಗೆ 1 ಮತ್ತು 2 ನೇ ಚಾಯ್ಸ್ ಅಭ್ಯರ್ಥಿಗಳು ಬ್ಯಾಂಕ್ ಅವಧಿಯೊಳಗೆ ಶುಲ್ಕ ಪಾವತಿ ಮಾಡಬೇಕು. ಈ ಎರಡು ದಿನದಲ್ಲೇ ಬೆಳಗ್ಗೆ 10.30 am to 4 pm ರವರೆಗೆ ಚಾಯ್ಸ್ 1 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಬೆಂಗಳೂರು ಕೆಇಎ ಕಚೇರಿಯಲ್ಲಿ ಮೂಲ ದಾಖಲೆ ಸಲ್ಲಿಸಿ ಪ್ರವೇಶ ಪತ್ರ ಪಡೆಯುವುದು. ನಂತರ 2.2.2022 ರಂದು ಆಯ್ಕೆ ಮಾಡಿಕೊಂಡ ಕಾಲೇಜಿಗೆ ಹೋಗಿ ಸಂಜೆ 5.30 ರೊಳಗೆ ಪ್ರವೇಶ ಪಡೆಯಬೇಕು. ಅಂದರೆ 29 ಅಂತಿಮ ಫಲಿತಾಂಶ, 30, 31 ಮರು ಆಯ್ಕೆ, ಚಾಯ್ಸ್ಗೆ ಅವಕಾಶ. 31 ಮತ್ತು 1 ಬ್ಯಾಂಕ್ ಪಾವತಿ, ಅದೇ ದಿನ ಅಂದರೆ 1.2.2022 ಬೆಂಗಳೂರು ಮೂಲ ದಾಖಲೆ ಸಲ್ಲಿಕೆ, ಮರು ದಿನ ಅಂದರೆ 2.2.2022 ಸಂಜೆಯೊಳಗೆ ಆಯ್ಕೆಯಾದ ಕಾಲೇಜಿಗೆ ಪ್ರವೇಶ ಪಡೆಯಬೇಕು. (D5)
ಕಡೆ ದಿನಾಂಕದ, ಕಡೆ ಸಮಯದೊಳಗೆ ಪ್ರವೇಶ ಪಡೆಯಬೇಕು. ನಂತರ ಪ್ರವೇಶ ಪಡೆದ ಬಗ್ಗೆ ಕೆಇಎಗೆ ಅಪಡೇಟ್ ಮಾಡಬೇಕು (D7). ನಿಗದಿತ ದಿನಾಂಕ, ಸಮಯದೊಳಗೆ ಅಡ್ಮಿಷನ್ ಆಗದಿದ್ದರೆ, ಹಂಚಿಕೆ ಮಾಡಿದ ಸೀಟು ರದ್ದು. ಇಲ್ಲಿ ಯಾರೂ ಸಣ್ಣ ವ್ಯತ್ಯಾಸ ಮಾಡುವಂತಿಲ್ಲ. ಕಾಲೇಜಿನಲ್ಲಿ ಅವರಿಲ್ಲ, ಇವರಿಲ್ಲ, ಎಂದು ಹೇಳಿದರೂ ಮುಗಿತು ವಿದ್ಯಾರ್ಥಿಗಳ ಭವಿಷ್ಯ ಹಾಳು. ಮೈಸೂರಿನಿಂದ ಬೀದರ್‌ಗೆ ಆಕಾಶದಲ್ಲಿ ಹಾರಿ ಹೋಗಬೇಕೇ? ಇದೆಂಥಾ ಕಠಿಣ ಕ್ರಮ. ಕಷ್ಟಪಟ್ಟು ವರ್ಷಗಟ್ಟಲೆ ಓದಿರುವ ವಿದ್ಯಾರ್ಥಿಗಳಿಗೆ ನಿಮಿಷದಲ್ಲಿ ನಾಶ ಮಾಡುವ ಕುತಂತ್ರ ಇದು.
31 ರಲ್ಲಿ ಬ್ಯಾಂಕ್‌ಗೆ ಹೋಗಿ ಶುಲ್ಕ ಪಾವತಿಸಿ, 1.2.2022 ಕೆಇಎ ಕೇಂದ್ರ ಕಚೇರಿಗೆ ಬೆಂಗಳೂರಿಗೆ ಬಂದು ಮೂಲ ದಾಖಲೆ ಸಲ್ಲಿಸಿ, 2 ನೇ ತಾರೀಕು ಸಂಜೆಯೊಳಗೆ ಕಾಲೇಜಿಗೆ ಹೋಗಿ ಪ್ರವೇಶ ಪಡೆಯಬೇಕೆನ್ನುವ ತುರಾತುರಿ ಏಕೆ. (D6). ಈ ಪತ್ರ ಸಹ 25.1.2022 ರಂದು ಪ್ರಕಟಿಸಿದ್ದು, ಮೊದಲ ಪತ್ರಕ್ಕೂ ಈ ಪತ್ರಕ್ಕೂ ವ್ಯತ್ಯಾಸ ಇದೆ. ಆ ಪತ್ರದಲ್ಲಿ ಇಲ್ಲದ ಮಾಹಿತಿ, ಸೂಚನೆ ಈ ಪತ್ರದಲ್ಲಿದೆ.
ಚಾಮರಾಜನಗರದ ಒಬ್ಬ ಅಭ್ಯರ್ಥಿ 1ನೇ ತಾರೀಖು ಬೆಂಗಳೂರಿಗೆ ಬಂದು ಪ್ರವೇಶ ಪತ್ರ ಪಡೆದು, ಮರುದಿನ ಬೀದರ್‌ಗೆ ಹೋಗಿ ಪಡೆಯಲು ಸಾಧ್ಯವೇ? ಯಾಕಿಷ್ಟು ಗೊಂದಲ, ಅವಸರ. ದಿನಾಂಕ 25.1.2022ರಿಂದ 2.2.2022 ರವರೆಗೆ ಪಿಜಿಇಟಿ ವಿದ್ಯಾರ್ಥಿಗಳು ಪಟ್ಟಿರುವ ಶ್ರಮ, ಆತಂಕ ಒತ್ತಡ, ಭಯ, ನಿದ್ರೆ, ಊಟ ಬಿಟ್ಟಿರುವ ಜೊತೆಗೆ ಕೊನೆಯಲ್ಲಿ ಇಂತಹ ಪರೀಕ್ಷೆ ಯಾಕೆ? ಇದು ಸಾಧ್ಯನಾ? ಇದರ ಹಿಂದಿನ ತಂತ್ರ ಏನು?
ಮನವಿ ಏನು?
* ಶುಲ್ಕ ಮತ್ತು ಸೀಟು ಲಭ್ಯತೆ ಪಾರ ದರ್ಶಕತೆಯಿಂದ ಮಾಡಲಿ
* ಶುಲ್ಕ ಪಾವತಿಗೆ ಎರಡು ದಿನ
* ಮೂಲ ದಾಖಲಾತಿ ಸಲ್ಲಿಕೆ ಮತ್ತು ಪ್ರವೇಶ ಪತ್ರ ಪಡೆಯಲು ಎರಡು ದಿನ ಮತ್ತು ಕಾಲೇಜಿಗೆ ಪ್ರವೇಶ ಪಡೆಯಲು ನಾಲ್ಕು ದಿನ ಹೆಚ್ಚಿನ ಅವಕಾಶ ಕೊಡಬೇಕು
* ತೊಂದರೆಗೊಳಗಾದ ಮಕ್ಕಳಿಗೆ ಪ್ರವೇಶಾವಕಾಶ ದೊರೆಯಬೇಕು
* ಶುಲ್ಕ ಪಾವತಿ, ಸೀಟ್ ಲಭ್ಯತೆ ನ್ಯಾಯ ಬದ್ಧವಾಗಿರಬೇಕು
* ಸರ್ಕಾರಿ ಸೀಟ್ ಯಾವುದೇ ಕಾರಣಕ್ಕೂ ಮರು ಹಂಚಿಕೆಯಾಗಬೇಕೇ ವಿನಃ ಖಾಸಗಿಯವರಿಗೆ ಬಿಟ್ಟು ಕೊಡಬಾರದು
* ಜೊತೆಗೆ ಯೂಸರ್ ಪ್ರೆಂಡ್ಲಿ ಇಲ್ಲದ ವೆಬ್‌ಸೈಟ್. ಸರಳವಿಲ್ಲ, ಸಮಯದ ಕೊರತೆ ಆಗುತ್ತಿದೆ.
* ತಪ್ಪು ತಪ್ಪು ದಿನಾಂಕ ನಮೂದಿಸಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟು ಮಾಡಲಾಗಿದೆ.
* ಹಿಂದಿನ ಡಿಪ್ಲೊಮಾ ಅಳಿಸದೇ ಮತ್ತಷ್ಟು ಗೊಂದಲ ಉಂಟಾಗಿದೆ.
* ಕಾಲೇಜು ಮತ್ತು ಶುಲ್ಕಗಳು ಹೊಂದಾಣಿಕೆಯಿಲ್ಲ, ಕೆಲವು ಕಾಲೇಜುಗಳ ಶುಲ್ಕ ಪ್ರಕಟಿಸದೇ ಗೌಪ್ಯ ಮಾಡಲಾಗಿದೆ.
ಇದರ ಹಿಂದೆ ಏನಿದೆ? ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿರುವ ಕೆಇಎ ಮಂಡಳಿಯ ಈ ಲೋಪಗಳ ವಿರುದ್ಧ ಕ್ರಮ ಜರುಗಿಸಬೇಕು.
ವಿಶೇಷ ವರದಿ: ತಿಪಟೂರು ಕೃಷ್ಣ, ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ