SSLC ವಿದ್ಯಾರ್ಥಿಗಳೇ ಗಮನಿಸಿ: ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ

ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಶಿಕ್ಷಣ ಇಲಾಖೆ ಮಹತ್ವದ ಬದಲಾವಣೆಗಳನ್ನು ಪ್ರಕಟಿಸಿದೆ. ಜನವರಿ 27 ರಿಂದ ಫೆಬ್ರವರಿ 2ರ ವರೆಗೆ ನಡೆಯುವ ದ್ವಿತೀಯ ಪೂರ್ವಸಿದ್ಧತಾ ಪರೀಕ್ಷೆಗಳು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿವೆ. ಪ್ರಶ್ನೆಪತ್ರಿಕೆ ಡೌನ್‌ಲೋಡ್, ಮುದ್ರಣ ಮತ್ತು ವಿತರಣೆಗೆ ಹೊಸ ಮಾರ್ಗಸೂಚಿಗಳನ್ನು ನೀಡಲಾಗಿದೆ. ಸೋರಿಕೆ ಪ್ರಕರಣಗಳಲ್ಲಿ ಮುಖ್ಯಶಿಕ್ಷಕರು ಸೇರಿದಂತೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

SSLC ವಿದ್ಯಾರ್ಥಿಗಳೇ ಗಮನಿಸಿ: ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ
ಸಾಂದರ್ಭಿಕ ಚಿತ್ರ

Updated on: Jan 20, 2026 | 12:55 PM

ಬೆಂಗಳೂರು, ಜನವರಿ 20: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ಹಿನ್ನೆಲೆ ಎಚ್ಚೆತ್ತ ಶಿಕ್ಷಣ ಇಲಾಖೆ ಮುಂದಿನ ಪರೀಕ್ಷೆಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.ಹೊಸ ಮಾರ್ಗಸೂಚಿಗಳ ಪ್ರಕಾರ, ಎರಡನೇ ಪೂರ್ವಸಿದ್ಧತಾ ಪರೀಕ್ಷೆಗಳು ಜನವರಿ 27ರಿಂದ ಫೆಬ್ರವರಿ 2ರವರೆಗೆ ನಡೆಯಲಿವೆ. ಬೆಳಿಗ್ಗೆ 10 ಗಂಟೆಗೆ ಬದಲು 11 ಗಂಟೆಗೆ ಪರೀಕ್ಷೆಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳು ಬೆಳಿಗ್ಗೆ 9 ಗಂಟೆಯಿಂದ ನಿಯಮಿತ ತರಗತಿಗಳಿಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ.

ಇನ್ನು ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಶಾಲೆಯ ಲಾಗಿನ್‌ನಿಂದ ಬೆಳಿಗ್ಗೆ 9.30ಕ್ಕೆ ಡೌನ್‌ಲೋಡ್ ಮಾಡಬೇಕು. ಬಳಿಕ 10 ಗಂಟೆಯೊಳಗೆ ಅವನ್ನು ಮುದ್ರಿಸಬೇಕು. ಅಲ್ಲದೆ ಬೆಳಿಗ್ಗೆ 10.50ಕ್ಕಿಂತ ಮುಂಚಿತವಾಗಿ ಪರೀಕ್ಷಾ ಹಾಲ್‌ಗೆ ಕಳುಹಿಸಬಾರದು ಎಂದು ಸೂಚಿಸಲಾಗಿದೆ. ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯ ಘಟನೆ ನಡೆದರೆ, ಸಂಬಂಧಿತ ಶಾಲೆಯ ಮುಖ್ಯಶಿಕ್ಷಕ, ನೋಡಲ್ ಶಿಕ್ಷಕ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪ್ರತಿ ಪ್ರಕರಣಕ್ಕೂ ಪ್ರತ್ಯೇಕ ಎಫ್‌ಐಆರ್ ದಾಖಲಾಗಲಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಇದನ್ನೂ ಓದಿ: SSLC ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್; ಮುಖ್ಯೋಪಾಧ್ಯಾಯರು ಸೇರಿ 8 ಮಂದಿ ಅರೆಸ್ಟ್

ಕಳೆದ ವಾರ ನಡೆದ SSLC ಪೂರ್ವಭಾವಿ ಪರೀಕ್ಷೆಯಲ್ಲಿ ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಆಗಿತ್ತು. ಶಿವಮೊಗ್ಗ ಹಾಗೂ ಕಲಬುರಗಿಯಲ್ಲಿ ಪ್ರಶ್ನೆಪತ್ರಿಕೆ ವೈರಲ್ ಆಗಿದ್ದು, ಕೃತ್ಯವನ್ನು ಹಲವು ಶಾಲೆಗಳೇ ಎಸಗಿದ್ದವು. ಪರೀಕ್ಷೆಗೆ ಮೂರು ಗಂಟೆಗಳಿಗೂ ಮುನ್ನ ಪ್ರಶ್ನೆ ಪತ್ರಿಕೆಗಳ ಫೋಟೋ ಪ್ರತಿಯನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದರು. ಅಲ್ಲದೆ ಪ್ರಶ್ನೆ ಪತ್ರಿಕೆ ಮಾರಾಟಕ್ಕಾಗಿ ಇನ್‌ಸ್ಟಾಗ್ರಾಂನಲ್ಲಿ ‘ಡೆಲ್ಟಾ ಹ್ಯಾಕರ್‌ 32’ ಹಾಗೂ ‘ಡೆಲ್ಟಾ ಹ್ಯಾಕರ್‌’ ಸೇರಿದಂತೆ 8ಕ್ಕೂ ಅಧಿಕ ಖಾತೆಗಳನ್ನು ತೆರೆದಿರೋದು ಕೂಡ ಬೆಳಕಿಗೆ ಬಂದಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.