ಬೆಂಗಳೂರು: ಕರ್ನಾಟಕದ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ(textbook revision) ಸಂಬಂಧ ರಾಜ್ಯ ಸರ್ಕಾರವು ಮಹತ್ವದ ಕ್ರಮಕೈಗೊಂಡಿದ್ದು, ಈ ವರ್ಷ ಪಠ್ಯಪುಸ್ತಕ ಪರಿಷ್ಕರಣೆ ಮಾದೇ ಕೆಲ ವಿವಾದಿತ ಪಠ್ಯ ವಿಷಯಗಳನ್ನು ಪಟ್ಟಿ ಮಾಡಿ ಅವುಗಳನ್ನು ಬೋಧನೆ ಮಾಡದಂತೆ ಸುತ್ತೋಲೆ ಹೊರಡಿಸಿದ್ದು, ಇದೀಗ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯ ಅಂತಿಮ ವರದಿ ಸಿದ್ಧವಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿವಾದಿತ ಪಠ್ಯದ ಅಂತಿಮ ವರದಿ ಸಿದ್ಧಪಡಿಸಿದ್ದು, ಇಂದಿನ ಸಂಪುಟ ಸಭೆಯಲ್ಲಿ ವರದಿ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ. ಅಲ್ಲದೇ ಕ್ಯಾಬಿನೆಟ್ನಲ್ಲಿ ಚರ್ಚಿಸಿ ಅಂತಿಮ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಪರಿಷ್ಕೃತಗೊಂಡ ಪಠ್ಯದಲ್ಲಿ ಸೇರ್ಪಡೆ ಮಾಡಲಾದ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಗಡೆವಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ವಿದ್ವಾಂಸರಾದ ಬನ್ನಂಜೆ ಗೋಂವಿದಾಚಾರ್ಯ ಅವರ ವಿಚಾರದ ಪಠ್ಯವನ್ನು ಸೇರಿದಂತೆ ಹಲವು ಪಠ್ಯಗಳನ್ನು ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಸಭೆಗಳನ್ನು ಮಾಡಿ ಶಿಕ್ಷಣ ಇಲಾಖೆ ಅಂತಿಮ ವರದಿಯನ್ನು ತಯಾರು ಮಾಡಿದೆ. ಹೀಗಾಗಿ ಸೂಲಿಬೆಲೆ, ಬನ್ನಂಜೆ ಗೋಂವಿದಾಚಾರ್ಯ ಮತ್ತು ಬಲಿರಾಮ್ ಹೆಗಡೆವಾರ್ ಪಠ್ಯಗಳಿಗೆ ಕತ್ತರಿ ಬೀಳುವ ಎಲ್ಲಾ ಸಾಧ್ಯತೆಗಳಿವೆ.
ರಾಜ್ಯದಲ್ಲಿ ಈಗಾಲೇ ಶಾಲೆಗಳು ಆರಂಭವಾಗಿದ್ದು, ಪುಸ್ತಕಗಳು ಮುದ್ರಣಗೊಂಡು ಶಾಲೆಗಳಿಗೂ ತಲುಪಿವೆ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ತಿದ್ದುಪಡಿ ಮಾಡಲು ಸಮಯ ಇಲ್ಲವೆಂದು ಕೆಲ ಪಠ್ಯವನ್ನು ಬೋಧನೆ ಮಾಡದಂತೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಆದ್ರೆ, ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ದ್ವೇಷದಿಂದ ವರ್ತಿಸುತ್ತಿರುವುದು ಸರಿಯಲ್ಲ. ಎನ್‌ಸಿಇಆರ್‌ಟಿ ಸೂಚನೆ ಮೇರೆಗೆ ನಾವು ಹಿಂದೆ ಬದಲಾವಣೆ ಮಾಡಿದ್ದೆವು. ತಪ್ಪುಗಳನ್ನು ಸರಿಪಡಿಸುವ ಉದ್ದೇಶ ನಮ್ಮದಾಗಿತ್ತು. ಈಗ ದ್ವೇಷದಿಂದ ಬದಲಾವಣೆ ಮಾಡಿದರೆ ಅದರಿಂದ ಮಕ್ಕಳು, ಪೋಷಕರ ಮೇಲೆ ದುಷ್ಪರಿಣಾಮ ಬೀರಲಿದೆ. ಬದಲಾವಣೆ ಮಾಡುವುದಿದ್ದರೆ ಪೋಷಕರ ಗಮನಕ್ಕೆ ತಂದು ಮಾಡಬೇಕು ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಒತ್ತಾಯಿಸಿದ್ದಾರೆ.