KCET Results 2023: ಇಂದು ಸಿಇಟಿ ಫಲಿತಾಂಶ, ರಿಸಲ್ಟ್ ನೋಡುವುದು ಹೇಗೆ?
Karnataka CET Exam Results Today: ಬೆಳಗ್ಗೆ 11 ಗಂಟೆ ನಂತರ karresults.nic.in ವೆಬ್‌ಸೈಟ್‌ನಲ್ಲಿ ಸಿಇಟಿ ಫಲಿತಾಂಶ ಲಭ್ಯವಾಗಲಿದೆ.
ಬೆಂಗಳೂರು: ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ ಫಲಿತಾಂಶ ಪ್ರಕಟಗೊಳ್ಳಲಿದೆ. ಬೆಳಗ್ಗೆ 9.30ಕ್ಕೆ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಎಂ.ಸಿ.ಸುಧಾಕರ್ ಫಲಿತಾಂಶ ಪ್ರಕಟಿಸಲಿದ್ದಾರೆ. ಬೆಳಗ್ಗೆ 11 ಗಂಟೆ ನಂತರ karresults.nic.in ವೆಬ್‌ಸೈಟ್‌ನಲ್ಲಿ ಸಿಇಟಿ ಫಲಿತಾಂಶ ಲಭ್ಯವಾಗಲಿದೆ.
2023-24ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಕಳೆದ ತಿಂಗಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆದಿತ್ತು. ಸದ್ಯ ಜೂನ್ 15ರಂದು ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶವು ಜೂನ್ 15ರ ಗುರುವಾರ ಬೆಳಿಗ್ಗೆ 11ರ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.
ಇದನ್ನೂ ಓದಿ; ಸಿಇಟಿ ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿಗೆ ಟ್ರಾಫಿಕ್ ಬಿಸಿ; ನೆರವಾದ ಪೊಲೀಸರು
ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಇಂಜಿನಿಯರಿಂಗ್, ಆಯುರ್ವೇದ, ಹೋಮಿಯೋಪತಿ ಮತ್ತು ಫಾರ್ಮಸಿ, ಬಿಎಸ್‍ಸಿ ನಸಿರ್ಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಸಿಇಟಿಯನ್ನು ನಡೆಸಲಾಗುತ್ತದೆ. ಸಿಇಟಿ ಪರೀಕ್ಷೆ ಮೇ 20 ಹಾಗೂ 21ರಂದು ರಾಜ್ಯದ 592 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು. 2.60 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಸುಮಾರು 16,000 ಕನ್ನಡೇತರ ವಿದ್ಯಾರ್ಥಿಗಳು ಈ ಪರೀಕ್ಷೆ ತೆಗೆದುಕೊಂಡಿದ್ದಾರೆ. ಮೇ 26 ರಂದು ಕೆಇಎ ತಾತ್ಕಾಲಿಕ ಉತ್ತರ ಕೀಯನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ಮೇ 30ರ ವರೆಗೆ ಕಾಲಾವಕಾಶ ನೀಡಲಾಗಿತ್ತು.
ಫಲಿತಾಂಶ ಪರಿಶೀಲನೆ ಹೇಗೆ?
ಫಲಿತಾಂಶ ಪ್ರಕಟವಾದ ನಂತರ, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಮೂಲಕ ಅದನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. KCET ಸ್ಕೋರ್ ಕಾರ್ಡ್ ಅನ್ನು ಅಧಿಕೃತ ವೆಬ್‌ಸೈಟ್‌ಗಳಾದ cetonline.karnataka.gov.in ಮತ್ತು karresults.nic.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತಮ್ಮ ಕರ್ನಾಟಕ CET ಫಲಿತಾಂಶ 2023 ಅನ್ನು ಪ್ರವೇಶಿಸಲು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.
ಮೇ 20 ಮತ್ತು 22 ರಂದು ನಡೆದ ಕರ್ನಾಟಕ ಸಿಇಟಿಗೆ ಈ ಬಾರಿ ಒಟ್ಟು 2.60 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಒಟ್ಟು 1.4 ಲಕ್ಷ ಮಹಿಳಾ ಅಭ್ಯರ್ಥಿಗಳು ಮತ್ತು 1.21 ಲಕ್ಷ ಪುರುಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡಿದ್ದರು. ಒಟ್ಟಾರೆಯಾಗಿ 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 592 ಕೇಂದ್ರಗಳಲ್ಲಿ ಕೆಸಿಇಟಿ ನಡೆಸಲಾಗಿದ್ದು, ಈ ಪೈಕಿ 121 ಕೇಂದ್ರಗಳು ಬೆಂಗಳೂರಿನಲ್ಲಿದ್ದವು.
ಈ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, ಕೌನ್ಸೆಲಿಂಗ್ ವೇಳಾಪಟ್ಟಿಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು KEA ಬಿಡುಗಡೆ ಮಾಡುತ್ತದೆ. ಅದಾಗ್ಯೂ, ಪರೀಕ್ಷೆಗೆ ಹಾಜರಾದ ಸುಮಾರು 30,000 ಅಭ್ಯರ್ಥಿಗಳ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಕೆಇಎ ಪ್ರಕಾರ, ಜೂನ್ 12, 11 ರ ಗಡುವಿನೊಳಗೆ ಸಮಸ್ಯೆಯನ್ನು ಸರಿಪಡಿಸುವ ಅವಕಾಶ ಇತ್ತು. ಸರಿಪಡಿಸದಿದ್ದರೆ ಅಂತಹ ಅಭ್ಯರ್ಥಿಗಳನ್ನು ಸಾಮಾನ್ಯ ಮೆರಿಟ್ ಕೋಟಾದ ಅಡಿಯಲ್ಲಿ ಪರಿಗಣಿಸಲಾಗುತ್ತದೆ. ಆರ್‌ಡಿ ಸಂಖ್ಯೆ ಹೊಂದಿಕೆಯಾಗದ ಅಭ್ಯರ್ಥಿಗಳು ಕೋಟಾ ವ್ಯವಸ್ಥೆಯಡಿ ಕಾಯ್ದಿರಿಸಿದ ಸೀಟುಗಳಿಗೆ ಅರ್ಹರಾಗಿರುವುದಿಲ್ಲ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:46 am, Thu, 15 June 23