ತುಮಕೂರು, (ಮಾರ್ಚ್ 25): ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam) ಬರೆಯುತ್ತಿದ್ದ ವೇಳೆ ವಿದ್ಯಾರ್ಥಿ(Student) ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿರುವ ಘಟನೆ ತುಮಕೂರಿನ (Tumakuru) ತುರುವೇಕೆರೆ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಸರಸ್ವತಿ ಬಾಲಕರ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಮೋಹನ್ ಕುಮಾರ್ ಸಿ.ಎಸ್ (16) ಮೃತ ವಿದ್ಯಾರ್ಥಿ. ತುರುವೇಕೆರೆ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಸರಸ್ವತಿ ಬಾಲಕರ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಮೋಹನ್ ಕುಮಾರ್ ಸಿ.ಎಸ್ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಮೋಹನ್ ಕುಮಾರ್ ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ದುರದೃಷ್ಟವಶಾತ್ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಚಿಕ್ಕರಾಂಪುರ ನಿವಾಸಿ ಸಿದ್ದೇಶ್ ಅವರ ಮಗ ಮೋಹನ್ ಕುಮಾರ್ , ತುರುವೇಕೆರೆ ತಾಲ್ಲೂಕಿನ ಲೋಕಮ್ಮನಹಳ್ಳಿ ಗೇಟ್ ಬಳಿಯಿರುವ ಶ್ರೀ ಕಂಚಿರಾಯ ಸನಿವಾಸ ಪ್ರೌಢ ಶಾಲೆಯಲ್ಲಿ 10 ತರಗತಿ ಓದುತ್ತಿದ್ದ.ಇಂದು ಎಸ್ಎಸ್ಎಲ್ ಸಿ ಪರೀಕ್ಷೆ ಹಿನ್ನೆಲೆಯಲ್ಲಿ ತುರುವೇಕೆರೆ ಪಟ್ಟಣದ ಸರಸ್ವತಿ ಬಾಲಕರ ಪ್ರೌಢ ಶಾಲೆಗೆ ಬಂದಿದ್ದಾನೆ. ಆದ್ರೆ, ಪರೀಕ್ಷೆ ಬರೆಯುತ್ತಿದ್ದ ವೇಳೆ ಮೋಹನ್ ಕುಮಾರ್ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದ್ದು, ಬಳಿಕ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯವಂತೆ ವೈದ್ಯರು ಸೂಚಿಸಿದ್ದಾರೆ. ಅದರಂತೆ
ಅಂಬ್ಯುಲೆನ್ಸ್ನಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ, ಗುಬ್ಬಿ ಸಮೀಪ ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ: ಯಾದಗಿರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸಿದ ಇಬ್ಬರು ಶಿಕ್ಷಕರ ಅಮಾನತು
ಶಿವಮೊಗ್ಗ: ಪರೀಕ್ಷಾ ದಿನವೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ (SSLC Student) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಸಾಗರ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಪರಶುರಾಮ್ ಬಾಬು (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಆನಂದಪುರದ KPSC ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ, ಚೆನ್ನಾಗಿಯೇ ಓದುತ್ತಿದ್ದ. ಪರೀಕ್ಷೆಗೆ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡಿದ್ದ. ಆದ್ರೆ ಕೊನೇ ಕ್ಷಣದಲ್ಲಿ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಈ ಸಂಬಂಧ ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ತಾಲೂಕಿನ ಮೂಡಲವಿಠಲಾಪುರ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿ ಅಪಘಾತದಲ್ಲಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಜಂಬರಘಟ್ಟ ಗ್ರಾಮದ ನಿವಾಸಿ ಉಮ್ಮೆ ಕೂಲ್ಸುಂ (14) ಮೃತ ವಿದ್ಯಾರ್ಥಿ. ರಸ್ತೆ ದಾಟುವ ವೇಳೆ ವಿದ್ಯಾರ್ಥಿಗೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬಾಲಕಿ ಸಾವನ್ನಪ್ಪಿದ್ದಾಳೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.