ಪ್ರತಿಷ್ಠಿತ ಯುಪಿಎಸ್ ಸಿ ಸಂಸ್ಥೆ ನಡೆಸುವ ನೇಮಕಾತಿ ಪರೀಕ್ಷೆಗಳು, ಆಯ್ಕೆಗಳು ಅತ್ಯಂತ ಕರಾರುವಕ್ಕಾಗಿ, ಕಟ್ಟುನಿಟ್ಟಾಗಿ, ನಿರ್ಲಕ್ಷ್ಯಕ್ಕೆ ಆಸ್ಪದ ನೀಡದಂತೆ ನಡೆಯುತ್ತವೆ ಎಂಬ ಬಲವಾದ ನಂಬಿಕೆಯಿದೆ. ಅದು ಇತರೆ ಆಯ್ಕೆ ಸಮಿತಿ, ಸಂಸ್ಥೆಗಳಂತೆ ಅಲ್ಲ ಎಂಬುದು ಜನಜನಿತ. ಆದರೆ ಅಲ್ಲೂ… ಯಡವಟ್ಟುಗಳು ಸಂಭವಿಸಿದರೆ ಗತಿಯೇನು? ಹೀಗೆಯುಪಿಎಸ್ ಸಿ ಪ್ರತಿಷ್ಠಿತವಾಗಿ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯಬೇಕೆಂಬುದು (UPSC Rank) ಹಲವರ ಕನಸಾಗಿದ್ದು, ಹಗಲಿರುಳು ಹರಸಾಹಸ ಪಡುತ್ತಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಯುವಕರು ಈ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಫಲಿತಾಂಶದಲ್ಲಿ ಅವರ ಹೆಸರು ಕಾಣಿಸಿಕೊಂಡಾಗ ಜಗತ್ತನ್ನು ಗೆದ್ದ ಸಂತೋಷ. ಎಲ್ಲ ಹಂತಗಳನ್ನು ದಾಟಿ ಕೊನೆಗೆ ಯಾವುದಾದರೂ ಅನಿರೀಕ್ಷಿತ ಅಡೆತಡೆ ಎದುರಾದರೆ ಅದರ ನೋವು ವರ್ಣನಾತೀತ (UPSC Result).
ಇತ್ತೀಚೆಗಷ್ಟೇ ಸಿವಿಲ್ ಸರ್ವೀಸಸ್-2022 ಪರೀಕ್ಷೆಗಳ ಅಂತಿಮ ಫಲಿತಾಂಶ ಹೊರಬಿದ್ದಿರುವುದು ಗೊತ್ತೇ ಇದೆ. ಆದರೆ ಫಲಿತಾಂಶದಲ್ಲಿ ಸಮಸ್ಯೆ ಇತ್ತು. ಮಧ್ಯಪ್ರದೇಶದ ಇಬ್ಬರು ಮಹಿಳಾ ಅಭ್ಯರ್ಥಿಗಳು ಒಂದೇ ರೋಲ್ ಸಂಖ್ಯೆ ಮತ್ತು ಒಂದೇ ಶ್ರೇಣಿಯನ್ನು ಪಡೆದರು. ಆಯೇಷಾ ಫಾತಿಮಾ (23) ಮತ್ತು ಆಯೇಶಾ ಮಕ್ರಾನಿ (26) ಇಬ್ಬರೂ 184ನೇ ರ್ಯಾಂಕ್ ಪಡೆದಿದ್ದಾರೆ. ಇವರಿಬ್ಬರಲ್ಲಿ ನಿಜವಾದ ರ‍್ಯಾಂಕರ್ ಯಾರು ಎಂಬುದು ಪ್ರಶ್ನಾರ್ಹವಾಗಿದೆ. ಇಬ್ಬರೂ ತಮಗೆ ನ್ಯಾಯ ಕೊಡಿಸುವಂತೆ ಯುಪಿಎಸ್‌ಸಿಗೆ ಮನವಿ ಮಾಡಿಕೊಂಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ.
ಅಂತಿಮ ಹಂತದ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ನಡೆಸುವ ದಿನಾಂಕದಲ್ಲಿ UPSC ಈ ವ್ಯತ್ಯಾಸವನ್ನು ಗುರುತಿಸಿದೆ. ಎಪ್ರಿಲ್ 25, 2023 ರಂದು ಇಬ್ಬರಿಗೂ ವ್ಯಕ್ತಿತ್ವ ಪರೀಕ್ಷೆಯನ್ನು ನಡೆಸಲಾಯಿತು. ಆದರೆ ಮಕ್ರಾನಿಯ ಪ್ರವೇಶ ಪತ್ರದಲ್ಲಿ ಗುರುವಾರ ಮತ್ತು ಫಾತಿಮಾ ಅವರ ಕಾರ್ಡ್ ಮಂಗಳವಾರ ಎಂದು ಬರೆದಿದೆ. ಪಂಚಾಂಗದ ಪ್ರಕಾರ ಆ ದಿನ ಮಂಗಳವಾರ. ಇದಲ್ಲದೆ, ಫಾತಿಮಾ ಪ್ರವೇಶ ಕಾರ್ಡ್‌ನಲ್ಲಿ ಯುಪಿಎಸ್‌ಸಿ ವಾಟರ್ ಮಾರ್ಕ್ ಜೊತೆಗೆ ಕ್ಯೂಆರ್ ಕೋಡ್ ಇದೆ. ಮಕ್ರಾನಿಯ ಪ್ರವೇಶ ಪತ್ರದಲ್ಲಿ ಇದು ಕಾಣಿಸಿಕೊಂಡಿಲ್ಲ. ಫಾತಿಮಾ ಮೂಲ ಅಭ್ಯರ್ಥಿ ಎಂದು ಯುಪಿಎಸ್‌ಸಿ ಹೇಳಿದೆ. ಈ ಮಧ್ಯೆ, ಮಕ್ರಾನಿಯವರನ್ನೂ ದೂಷಿಸುವಂತಿಲ್ಲ. ಎಲ್ಲಿ ತಪ್ಪು ನಡೆದಿದೆ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ಯುಪಿಎಸ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವರ್ಷಗಳ ನಂತರ 10 ನೇ ತರಗತಿ ಪರೀಕ್ಷೆ ಬರೆದ ಪ್ಯೂನ್; ಮಗನೊಂದಿಗೆ ತಂದೆಯೂ ಪಾಸ್
ಅದೇ ರೀತಿ, ಹರಿಯಾಣದ ರೇವಾರಿಯಿಂದ ಇಬ್ಬರು ಪುರುಷ ಅಭ್ಯರ್ಥಿಗಳಾದ ತುಷಾರ್ ಕುಮಾರ್ ಮತ್ತು ಬಿಹಾರ ರಾಜ್ಯದ ಭಾಗಲ್ಪುರದ ತುಷಾರ್ ಕುಮಾರ್ ಅವರಿಗೆ ಒಂದೇ ರೋಲ್ ಸಂಖ್ಯೆ ಮತ್ತು ಒಂದೇ ಶ್ರೇಣಿಯನ್ನು ನೀಡಲಾಗಿದೆ. ಈ ಇಬ್ಬರು ಅಭ್ಯರ್ಥಿಗಳಿಗೆ 44ನೇ ರ‍್ಯಾಂಕ್ ಹಂಚಿಕೆ ವಿವಾದವಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಯುಪಿಎಸ್‌ಸಿ ಇಂತಹ ತಪ್ಪುಗಳನ್ನು ಮಾಡುವುದಿಲ್ಲ ಮತ್ತು ಈ ಬಗ್ಗೆ ತನಿಖೆ ನಡೆಸಿ ಸತ್ಯಾಂಶವನ್ನು ಕಂಡುಕೊಳ್ಳಲಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ