ನವದೆಹಲಿ: ರಷ್ಯಾ ಮತ್ತು ಉಕ್ರೇನ್ (Ukraine) ಪಡೆಗಳ ನಡುವಿನ ಯುದ್ಧ ಇಂದು (ಮಾರ್ಚ್ 1) 6ನೇ ದಿನಕ್ಕೆ ಕಾಲಿಟ್ಟಿದ್ದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 14,000 ಭಾರತೀಯರು ಇನ್ನೂ ಯುದ್ಧ ಪೀಡಿತ ದೇಶವಾದ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲಿನ ಜನರು ಊಟ, ನೀರು, ವಸತಿ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ವಾರ ವ್ಲಾಡಿಮಿರ್ ಪುಟಿನ್ ನೇತೃತ್ವದ ರಷ್ಯಾ (Russia) ಉಕ್ರೇನ್ ಮೇಲೆ ದಾಳಿ ಮಾಡಿದ ನಂತರ ಕಳೆದ ಕೆಲವು ದಿನಗಳಲ್ಲಿ ಸಾವಿರಾರು ಭಾರತೀಯ ಪ್ರಜೆಗಳನ್ನು ಉಕ್ರೇನ್ನಿಂದ ಭಾರತಕ್ಕೆ ಕರೆತರಲಾಗುತ್ತಿದೆ.
ಉಕ್ರೇನ್‌ನ ಶಿಕ್ಷಣ ಮತ್ತು ವಿಜ್ಞಾನ ಸಚಿವಾಲಯದ ಮಾಹಿತಿಯ ಪ್ರಕಾರ, ಸುಮಾರು 80,000 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಉಕ್ರೇನ್‌ನಲ್ಲಿರುವ ಒಟ್ಟು ವಿದೇಶಿ ವಿದ್ಯಾರ್ಥಿಗಳ ಕಾಲು ಭಾಗದಷ್ಟು ಭಾರತೀಯರು ಇದ್ದಾರೆ. ಉಕ್ರೇನ್‌ನಲ್ಲಿ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಅಧ್ಯಯನವನ್ನು ನಡೆಸುತ್ತಿದ್ದಾರೆ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಉಕ್ರೇನ್ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಹೆಸರುವಾಸಿಯಾಗಿದೆ. ವೈದ್ಯಕೀಯದಲ್ಲಿ ಹೆಚ್ಚಿನ ಸಂಖ್ಯೆಯ ಪದವಿ ಮತ್ತು ಸ್ನಾತಕೋತ್ತರ ವಿಶೇಷತೆಗಳನ್ನು ಹೊಂದಿರುವ ಉಕ್ರೇನ್ ತನ್ನ ಖಂಡದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿಯಾಗಿದೆ.
ಬೋಧನಾ ಶುಲ್ಕವೂ ಕಡಿಮೆ:
ಉಕ್ರೇನ್‌ನಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜುಗಳ ಬೋಧನಾ ಶುಲ್ಕವು ಭಾರತದ ಕಾಲೇಜುಗಳಿಗೆ ಹೋಲಿಸಿದರೆ ಬಹಳ ಕಡಿಮೆ ಇದೆ. ಈ ಕಾರಣಕ್ಕೆ ಉಕ್ರೇನ್ಗೆ ತೆರಳಿ ವೈದ್ಯಕೀಯ ಶಿಕ್ಷಣ ಪಡೆಯುವ ಭಾರತೀಯರ ಸಂಖ್ಯೆ ಹೆಚ್ಚಾಗುತ್ತಿದೆ.
ಮಾನ್ಯತೆ ಪಡೆದ ಕಾಲೇಜುಗಳು:
ಉಕ್ರೇನಿಯನ್ ಕಾಲೇಜುಗಳು ವಿಶ್ವ ಆರೋಗ್ಯ ಮಂಡಳಿಯಿಂದ ಗುರುತಿಸಲ್ಪಟ್ಟಿವೆ. ಉಕ್ರೇನಿಯನ್ ವೈದ್ಯಕೀಯ ಪದವಿಗಳನ್ನು ಪಾಕಿಸ್ತಾನದ ವೈದ್ಯಕೀಯ ಮತ್ತು ದಂತ ಕೌನ್ಸಿಲ್, ಯುರೋಪಿಯನ್ ಕೌನ್ಸಿಲ್ ಆಫ್ ಮೆಡಿಸಿನ್ ಮತ್ತು ಇಂಗ್ಲೆಂಡ್ನ ಜನರಲ್ ಮೆಡಿಕಲ್ ಕೌನ್ಸಿಲ್, ಇತರರಿಂದಲೂ ಗುರುತಿಸಲ್ಪಟ್ಟಿದೆ.
ಪ್ರವೇಶ ಪರೀಕ್ಷೆ ಇಲ್ಲ:
ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ಗೆ ಹೋಗಿ ವಿದ್ಯಾಭ್ಯಾಸ ಮಾಡಲು ಕಾರಣವೆಂದರೆ, ಇಲ್ಲಿನ ಹಲವಾರು ಪ್ರಸಿದ್ಧ ವೈದ್ಯಕೀಯ ಶಾಲೆಗಳು ಸೀಟು ಒದಗಿಸಲು ಪ್ರವೇಶ ಪರೀಕ್ಷೆ ಮಾಡುವುದಿಲ್ಲ. ಇತ್ತೀಚೆಗೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ವಿದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುವ ಸುಮಾರು ಶೇ. 90ರಷ್ಟು ಭಾರತೀಯರು ಭಾರತದಲ್ಲಿ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದಿಲ್ಲ ಎಂದು ಹೇಳಿದ್ದಾರೆ.
ಹಣವಿರುವ ಪೋಷಕರು ಕೋಟ್ಯಾಂತರ ರೂ. ಖರ್ಚು ಮಾಡಿ ತಮ್ಮ ಮಕ್ಕಳನ್ನು ದೇಶ ಹಾಗೂ ವಿದೇಶದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ಓದಿಸುತ್ತಾರೆ. ಆದರೆ, ಕೆಳ ಮತ್ತು ಮಧ್ಯಮ ವರ್ಗದವರು ಕಷ್ಟವಾದರೂ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದು ಕಷ್ಟಪಟ್ಟು ಉತ್ತಮ ಯುನಿವರ್ಸಿಟಿಗಳಿಗೆ ಸೇರಿಸುತ್ತಾರೆ. ಮೆಡಿಕಲ್ಗೆ ಬಹಳ ಹಣ ಖರ್ಚಾಗುವುದರಿಂದ ಹಲವರಿಗೆ ತಮ್ಮ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಕೊಡಿಸಲು ಸಾಧ್ಯವಾಗುವುದಿಲ್ಲ.
ಭಾರತದಲ್ಲಿ ಸರ್ಕಾರಿ ಕೋಟಾದಡಿ ನಾಲ್ಕೂವರೆ ವರ್ಷದ ಎಂಬಿಬಿಎಸ್ ಕೋರ್ಸ್ ಮಾಡಲು ಒಬ್ಬ ವಿದ್ಯಾರ್ಥಿ ವಾರ್ಷಿಕವಾಗಿ 20 ರಿಂದ 30 ಲಕ್ಷ ರೂ. ಶುಲ್ಕ ಖರ್ಚು ಮಾಡಬೇಕಾಗುತ್ತದೆ. ಖಾಸಗಿ ಕೋಟಾದಡಿ ಮೆಡಿಕಲ್ ವಿದ್ಯಾಭ್ಯಾಸ ಮಾಡಲು ವಾರ್ಷಿಕವಾಗಿ ಕೋಟ್ಯಾಂತರ ಹಣ ಮೀಸಲಿಡಬೇಕು. ಆದರೆ, ಉಕ್ರೇನ್‌ನಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ವರ್ಷಕ್ಕೆ ಕೇವಲ 4ರಿಂದ 5 ಲಕ್ಷ ರೂ. ಶುಲ್ಕವಿದೆ. ಹೀಗಾಗಿ, ಉಕ್ರೇನ್‌ನ ವಿದೇಶಿ ವಿದ್ಯಾರ್ಥಿಗಳ ಪೈಕಿ ಶೇ.23.64ರಷ್ಟು ವಿದ್ಯಾರ್ಥಿಗಳು ಭಾರತೀಯರೇ ಆಗಿದ್ದಾರೆ.
ಭಾರತದಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಂಡರೆ ಉಕ್ರೇನ್‌ನಲ್ಲಿ ಸೀಟ್ ಪಡೆಯುವುದು ತುಂಬ ಸುಲಭ. ಉಕ್ರೇನ್‌ನಲ್ಲಿ ಪಡೆಯುವ ಎಂಬಿಬಿಎಸ್ ಪದವಿಗೆ ಜಾಗತಿಕವಾಗಿ ಮಾನ್ಯತೆ ಇದೆ. ಭಾರತಕ್ಕೆ ಹೋಲಿಸಿಕೊಂಡರೆ ಉಕ್ರೇನ್‌ನ ವೈದ್ಯಕೀಯ ಕಾಲೇಜುಗಳು ಉತ್ತಮ ಮೂಲಸೌಕರ್ಯವನ್ನು ಹೊಂದಿವೆ. ಉತ್ತಮ ಪ್ರಾಯೋಗಿಕ ಲ್ಯಾಬ್‌ಗಳಿವೆ. ಈ ಎಲ್ಲ ಕಾರಣಗಳಿಂದ ಭಾರತದ ವಿದ್ಯಾರ್ಥಿಗಳು ಉಕ್ರೇನ್ಗೆ ಹೋಗಿ ವೈದ್ಯಕೀಯ ಶಿಕ್ಷಣ ಪಡೆಯುತ್ತಾರೆ.
ಇದನ್ನೂ ಓದಿ: ಉಕ್ರೇನ್ ವಿಚಾರದಲ್ಲಿ ಭಾರತ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿರುವುದಕ್ಕೆ 5 ಮುಖ್ಯ ಕಾರಣಗಳು ಇಲ್ಲಿವೆ
Big Breaking: ರಷ್ಯಾ ದಾಳಿಗೆ ಉಕ್ರೇನ್ನಲ್ಲಿದ್ದ ಕರ್ನಾಟಕದ ವಿದ್ಯಾರ್ಥಿ ದುರ್ಮರಣ; ಖಚಿತ ಪಡಿಸಿದ ವಿದೇಶಾಂಗ ಇಲಾಖೆ