ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿಯೇ ಜಿಲ್ಲೆಯ ಇಬ್ಬರು ಶಾಸಕರುಗಳಲ್ಲಿ ಒರ್ವ ಶಾಸಕನ ಬಂಧನ, ಇನ್ನೊಬ್ಬರಿಗೆ ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಕೇಸ್ ಆಗಿದೆ. ಹೌದು ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ(Madal Virupakshappa) ಹಾಗೂ ಅವರ ಪುತ್ರ ಬೆಂಗಳೂರು ಜಲ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ ಮಾಡಾಳ್ ಜೈಲಿನಲ್ಲಿದ್ದಾರೆ. ತಂದೆ ನಿರೀಕ್ಷಣಾ ಜಾಮೀನಿನ ಮೇಲೆ ಹೊರಗಿದ್ದರು. ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹಿನ್ನೆಲೆ ಶಾಸಕರನ್ನ ಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ಶುರು ಮಾಡಿದ್ದಾರೆ. ಇದರ ನಡುವೆ ಮಾಡಾಳ್ ಅವರಿಗೆ ಇನ್ನೊಂದು ಸಂಕಷ್ಟ ಸುರುವಾಗಿದೆ. ಈಗಾಗಲೇ ಇವರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪವಿದೆ. ಶಿವಮೊಗ್ಗ. ದಾವಣಗೆರೆ, ಚಿತ್ರದುರ್ಗ ಹಾಗೂ ಬೆಂಗಳೂರು ಸೇರಿದಂತೆ ಹತ್ತಾರು ಕಡೆ ಆಸ್ತಿ ಇರುವುದು ಪತ್ತೆಯಾಗಿದೆ. ಹೀಗಾಗಿ ಇನ್ನೊಂದು ಕೇಸ್ ಆಗುವುದು ಬಹುತೇಕ ಖಚಿತ ಎನ್ನುತ್ತಿವೆ ಮೂಲಗಳು. ಅಂದರೆ ಡಿಎ ಕೇಸ್ ಬುಕ್ ಆದರೆ ಮತ್ತೊಮ್ಮೆ ಲೋಕಾಯುಕ್ತ ದಾಳಿ ಆಗುವುದು ಖಚಿತ. ಮೇಲಾಗಿ ಈಗ ಚುನಾವಣೆ ಘೋಷಣೆ ಆಗಿದ್ದು, ರಾಜಕೀಯವಾಗಿ ಮಾಡಾಳ್ಗೆ ತೀವ್ರ ಹಿನ್ನಡೆಯಾಗಿದೆ. ಜೊತೆಗೆ ರಾಜಕೀಯ ಎದುರಾಳಿಗಳಿಗೆ ಆಹಾರ ಆಗಿದ್ದಾರೆ ಶಾಸಕ ಮಾಡಾಳ್.
ಬಿಜೆಪಿ ಶಾಸಕ ಹೊನ್ನಾಳಿಯ ಎಂಪಿ ರೇಣುಕಾಚಾರ್ಯ
ಇನ್ನು ಸದಾ ಸುದ್ದಿಯಲ್ಲಿ ಇರುವ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ನಿತ್ಯ ಸುತ್ತಾಡುವ ಶಾಸಕ ಅಂದರೆ ಹೊನ್ನಾಳಿಯ ಎಂಪಿ ರೇಣುಕಾಚಾರ್ಯ. ಹೌದು ಇನ್ನೇನು ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ತಯಾರಿಯಲ್ಲಿದ್ದಾರೆ. ಆದರೆ ಇವರ ಮೇಲೆ ಇರುವ ಕೇಸ್ಗಳ ಬಗ್ಗೆ ವಿವರವನ್ನ ಚುನಾವಣಾ ಆಯೋಗಕ್ಕೆ ನೀಡಬೇಕು. ಇದನ್ನ ತಪ್ಪಿಸಲು ಒಂದು ಕೇಸ್ ವಿಚಾರವಾಗಿ ಹೈಕೋರ್ಟ ಮೊರೆ ಹೋಗಿ ಕೇಸ್ ರದ್ದು ಪಡಿಸುವಂತೆ ವಿನಂತಿಸಿದ್ದರು. ಆದರೆ ಕೋರ್ಟ್ ಕೇಸ್ ವಜಾಗೊಳಿಸಲು ನಿರಾಕರಿಸಿದೆ. ಹೌದು ಸದ್ಯ ಲೋಕಾಯುಕ್ತ ದಾಳಿ ಸಹ ಆಗ ರೇಣುಕಾಚಾರ್ಯ ಅವರ ಮನೆಯ ಮೇಲೆ ನಡೆದಿತ್ತು. ಇದೇ ಎಫ್.ಐ.ಆರ್ ವಜಾ ಕೇಳಿ ಕೋರ್ಟ್ಗೆ ಹೋಗಿದ್ದ ರೇಣುಕಾಚಾರ್ಯಗೆ ಹೈಕೋರ್ಟ್ ನಿರಾಕರಿಸಿದೆ.
ಇದನ್ನೂ ಓದಿ:ರಾಜಕೀಯ ಹಾಗೂ ಧರ್ಮ ಬೇರ್ಪಟ್ಟಾಗ ದ್ವೇಷಪೂರಿತ ಭಾಷಣಗಳು ನಿಲ್ಲುತ್ತವೆ: ಸುಪ್ರೀಂಕೋರ್ಟ್
ಇದೀಗ ಆಡಳಿತ ಪಕ್ಷದ ಇಬ್ಬರು ಶಾಸಕರು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಕೇಸ್ಗಳನ್ನ ಎದುರಿಸುತ್ತಿದ್ದಾರೆ. ಜೊತೆಗೆ ಓರ್ವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನವಾಗಿದೆ. ಇನ್ನೊಬ್ಬ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಸಿದ ಪ್ರಕರಣವೊಂದು ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಹೀಗಾಗಿ ಆಡಳಿತ ಪಕ್ಷದ ಇಬ್ಬರು ಶಾಸಕರು ಇದೀಗ ಸಂಕಷ್ಟದಲ್ಲಿದ್ದಾರೆ.
ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:19 am, Sat, 1 April 23