ವಿಧಾನಸಭೆ ಚುನಾವಣೆ ಫಲಿತಾಂಶ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ಬಿಜೆಪಿ ತೆಕ್ಕೆಗೆ, ತೆಲಂಗಾಣಕ್ಕೆ ಕಾಂಗ್ರೆಸ್ ‘ಗ್ಯಾರಂಟಿ’

| Updated By: ಗಣಪತಿ ಶರ್ಮ

Updated on: Dec 03, 2023 | 5:21 PM

ರಾಜಸ್ಥಾನ, ಛತ್ತೀಸ್​ಗಢದಲ್ಲಿ ಮ್ಯಾಜಿಕ್ ಸಂಖ್ಯೆ ದಾಟಿರುವ ಬಿಜೆಪಿ ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡಿದೆ. ತೆಲಂಗಾಣದಲ್ಲಿ ‘ಗ್ಯಾರಂಟಿ’ ಯೋಜನೆಗಳ ಮೂಲಕ ಅಬ್ಬರದ ಪ್ರಚಾರ ನಡೆಸಿದ್ದ ಕಾಂಗ್ರೆಸ್​ ಪಕ್ಷವನ್ನು ಮತದಾರ ಬೆಂಬಲಿಸಿದ್ದಾನೆ.

ವಿಧಾನಸಭೆ ಚುನಾವಣೆ ಫಲಿತಾಂಶ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ಬಿಜೆಪಿ ತೆಕ್ಕೆಗೆ, ತೆಲಂಗಾಣಕ್ಕೆ ಕಾಂಗ್ರೆಸ್ ‘ಗ್ಯಾರಂಟಿ’
ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿಯ ಚುನಾವಣಾ ಮುನ್ನಡೆಯನ್ನು ಸಂಭ್ರಮಿಸುತ್ತಿರುವ ಬಿಜೆಪಿ ಕಾರ್ಯಕರ್ತರು
Follow us on

ನವದೆಹಲಿ, ಡಿಸೆಂಬರ್ 3: ಐದು ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯ (Assembly Election Results 2023) ಪೈಕಿ ನಾಲ್ಕರ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ ಬಹುಮತ ಗಳಿಸಿದೆ. ಕಾಂಗ್ರೆಸ್​ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದ್ದ ರಾಜಸ್ಥಾನ, ಛತ್ತೀಸ್​ಗಢದಲ್ಲಿ ಮ್ಯಾಜಿಕ್ ಸಂಖ್ಯೆ ದಾಟಿರುವ ಬಿಜೆಪಿ ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡಿದೆ. ತೆಲಂಗಾಣದಲ್ಲಿ ‘ಗ್ಯಾರಂಟಿ’ ಯೋಜನೆಗಳ ಮೂಲಕ ಅಬ್ಬರದ ಪ್ರಚಾರ ನಡೆಸಿದ್ದ ಕಾಂಗ್ರೆಸ್​ ಪಕ್ಷವನ್ನು ಮತದಾರ ಬೆಂಬಲಿಸಿದ್ದಾನೆ. ಬಿಆರ್​ಎಸ್ ಅಧಿಕಾರ ಕಳೆದುಕೊಂಡಿದೆ. ಮಿಜೋರಾಂ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಳ್ಳಲಿದೆ.

ಕಾಂಗ್ರೆಸ್ ಆಡಳಿತವಿದ್ದ ರಾಜಸ್ಥಾನದಲ್ಲಿ ಈ ಬಾರಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಭಾನುವಾರ ಸಂಜೆ 5.30ರ ವರೆಗಿನ ಮತ ಎಣಿಕೆ ಲೆಕ್ಕಾಚಾರ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 69 ಸ್ಥಾನಗಳಲ್ಲಷ್ಟೇ ಮುನ್ನಡೆಯಲ್ಲಿದೆ. 199 ವಿಧಾನಸಭೆ ಕ್ಷೇತ್ರಗಳಿರುವ ರಾಜಸ್ಥಾನದಲ್ಲಿ ಸರಳ ಬಹುಮತಕ್ಕೆ ಬೇಕಿರುವುದು 100 ಸ್ಥಾನಗಳು. ಉಳಿದಂತೆ, ಇತರರು 14 ಕಡೆ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕಾಂಗ್ರೆಸ್ ಆಡಳಿತವಿದ್ದ ಛತ್ತೀಸ್​ಗಢದಲ್ಲಿ ಕೂಡ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. 90 ಸದಸ್ಯ ಬಲದ ಛತ್ತೀಸ್​ಗಢ ವಿಧಾನಸಭೆಯಲ್ಲಿ ಬಿಜೆಪಿ 56 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ 34 ಕ್ಷೇತ್ರಗಳಲ್ಲಿ ಮುಂದಿದೆ. ಇಲ್ಲಿ ಬಹುಮತಕ್ಕೆ ಬೇಕಿರುವುದು 46 ಸ್ಥಾನಗಳಾಗಿವೆ.

ಮಧ್ಯ ಪ್ರದೇಶದಲ್ಲಿ ಬಿಜೆಪಿ 164 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 65 ಹಾಗೂ ಇತರರು 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. 230 ಸದಸ್ಯಬಲದ ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 116 ಸ್ಥಾನ ಅಗತ್ಯ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದೇಕೆ ಮತದಾರ? ಇಲ್ಲಿದೆ ಕಾರಣ

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 63, ಬಿಆರ್​ಎಸ್ 40, ಬಿಜೆಪಿ 8, ಎಐಎಂಐಎಂ 7, ಸಿಪಿಐ 1 ಸ್ಥಾನ ಗೆದ್ದಿವೆ. ತೆಲಂಗಾಣದಲ್ಲಿ ಬಹುಮತಕ್ಕೆ 60 ಸ್ಥಾನ ಅಗತ್ಯವಿದ್ದು, ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ ದಾಟಿದೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ಐದು ಅಂಶಗಳು ಇಲ್ಲಿವೆ

ರಾಜಸ್ಥಾನ, ಛತ್ತೀಸ್​ಗಢ, ತೆಲಂಗಾಣ ರಾಜ್ಯಗಳಲ್ಲಿ ಆಡಳಿತವಿರೋಧಿ ಅಲೆ ಕೆಲಸ ಮಾಡಿದರೆ, ಮಧ್ಯ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯ ಚುನಾವಣಾ ತಂತ್ರ ಫಲಿಸಿದೆ. ರಾಜಸ್ಥಾನ, ಛತ್ತೀಸ್​ಗಢ, ಮಧ್ಯ ಪ್ರದೇಶಗಳಲ್ಲಿ ಕಮಲ ಅರಳಿಸಿರುವ ಮತದಾರರು, ತೆಲಂಗಾಣದಲ್ಲಿ ಕಾಂಗ್ರೆಸ್​​ ‘ಗ್ಯಾರಂಟಿ’ಗಳ ಮೊರೆ ಹೋಗಿದ್ದಾರೆ.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ