Bangalore, Karnataka News Highlights: ನಾಳೆ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
Karnataka Assembly Elections 2023 Highlights News Updates: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಟಿಕೆಟ್ಗಾಗಿ ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಆಯಾ ಕ್ಷೇತ್ರದಲ್ಲಿನ ನಾಯಕರ ಪ್ರಾಬಲ್ಯದ ಲೆಕ್ಕಾಚಾರ ನಡೆಯುತ್ತಿದೆ.

ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಟಿಕೆಟ್ಗಾಗಿ ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಕಾಂಗ್ರೆಸ್ನ ಕೇತ್ರವಾರು ಬಸ್ಯಾತ್ರೆ ಜನರ ಮತವನ್ನು ತಮ್ಮತ್ತ ಸೆಳೆಯಲು ವೇಗವಾಗಿಯೇ ಸಾಗುತ್ತಿದ್ದೆ. ಇತ್ತ ಜೆಡಿಎಸ್ನಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಕುಟುಂಬದಲ್ಲೇ ಬಿರುಕು ಮೂಡಿದ್ದು, ಟಿಕೆಟ್ ಯಾರ ಪಾಲಾಗಲಿದೆ ಕಾದು ನೋಡಬೇಕಿದೆ. ಇನ್ನು ಬಿಜೆಪಿ ವಿಜಯ ಸಂಕಲ್ಪ ಅಭಿಯಾನದ ಮೂಲಕ ಕಾರ್ಯಕರ್ತರ ಬಲವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ. ರಾಜ್ಯ ಬಿಜೆಪಿ ಘಟಕ ಕೇಂದ್ರ ನಾಯಕರತ್ತ ಮುಖಮಾಡಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸದ ಮೂಲಕ ರಾಜ್ಯದ ಎಲ್ಲ ಮತಗಳ ಕ್ರೋಢೀಕರಣಕ್ಕೆ ಬಲೆ ಬೀಸುತ್ತಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಮತ್ತು ಡಿ ಕೆ ಶಿವಕುಮಾರ್ ನಡುವಿನ ಸಿಡಿ ಜಗಳ ಕೇಂದ್ರದ ಅಂಗಳ ತಲುಪಿದ್ದು ಜಾರಕಿಹೊಳಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಿಬಿಐ ತನಿಕೆಗೆ ಒತ್ತಾಯಿಸಿದ್ದಾರೆ. ಇದರೊಂದಿಗೆ ಇಂದಿನ ಅಪ್ಡೇಟ್ಸ್
LIVE NEWS & UPDATES
-
Bangalore, Karnataka News Live: ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಹೆಚ್.ಎಸ್.ಸಚಿದಾನಂದಮೂರ್ತಿ ತಿರುಗೇಟು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರು ಬಿಜೆಪಿ ನಾಯಕರ ಬಗ್ಗೆ ಟೀಕೆ ಮಾಡುವ ಭರಾಟೆಯಲ್ಲಿ ಸರಳ, ಸಜ್ಜನ ರಾಜಕಾರಣಿ, ಇದುವರೆಗೂ ಯಾವುದೇ ರೀತಿಯ ಆಪಾದನೆ ಅಥವಾ ಕಪ್ಪು ಚುಕ್ಕೆ ಇಲ್ಲದ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಿಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಯವರ ಬಗ್ಗೆ ಲಘುವಾಗಿ ಮತ್ತು ಸತ್ಯಕ್ಕೆ ದೂರವಾದ ಹೇಳಿಕೆ ನೀಡಿರುವ ಕುರಿತು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದಮೂರ್ತಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
-
Bangalore, Karnataka News Live: ಹೆಚ್.ಡಿ.ಕುಮಾರಸ್ವಾಮಿರನ್ನು ಮತ್ತೆ ಸಿಎಂ ಮಾಡಬೇಕು: ಜಿ.ಟಿ.ದೇವೇಗೌಡ
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜನ ಏನೆಂದು ಹಿಂದೆಯೇ ತೋರಿಸಿದ್ದೀರಿ ಎಂದು ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು. 1 ಲಕ್ಷ ಜನ ಸೇರಿದ್ದೀರಿ, ನೀವೆಲ್ಲಾ ನೆರೆದಿದ್ದು ಟೀಕಿಸಿದವರಿಗೆ ಉತ್ತರ ನೀಡಿದರು. ಎರಡು ಬಾರಿ ನೀವು ಗೆಲ್ಲಿಸಿದ್ದೀರಿ, 3ನೇ ಬಾರಿಗೆ ನನಗೆ ಮತ ನೀಡಿ ಮೈಸೂರು ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲೂ JDS ಅಭ್ಯರ್ಥಿಗಳನ್ನು ಗೆಲ್ಲಿಸಿ. ಹೆಚ್.ಡಿ.ಕುಮಾರಸ್ವಾಮಿರನ್ನು ಮತ್ತೆ ಸಿಎಂ ಮಾಡಬೇಕು ಎಂದು ಹೇಳಿದರು.
-
-
Bangalore, Karnataka News Live: ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ
ಮೈಸೂರು: ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಹೇಳಿದರು. ಟಿಕೆಟ್ ವಿಚಾರದಲ್ಲಿ ನಮ್ಮ ಕುಟುಂಬದಲ್ಲಿ ಯಾವುದೇ ಗೊಂದಲವಿಲ್ಲ. ಟಿಕೆಟ್ ಹಂಚಿಕೆಯಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ. ಮಂಡ್ಯ ಜಿಲ್ಲೆಯಲ್ಲಿ H.D.ರೇವಣ್ಣ ಸ್ಪರ್ಧೆ ಬಗ್ಗೆಯೂ ನನಗೆ ಗೊತ್ತಿಲ್ಲ. ವರಿಷ್ಠರು, ರಾಜ್ಯಾಧ್ಯಕ್ಷರು ಚರ್ಚಿಸಿ ನಿರ್ಧಾರ ಕೈಗೊಳ್ತಾರೆ ಎಂದು ಹೇಳಿದರು.
-
Bangalore, Karnataka News Live: ಜೆಡಿಎಸ್ ತೊರೆದು 500ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಸೇರ್ಪಡೆ
ನೆಲಮಂಗಲ: ಜೆಡಿಎಸ್ಗೆ ಟಕ್ಕರ್ ಕೊಡಲು ಭಾರತೀಯ ಜನತಾ ಪಕ್ಷ ಮುಂದಾಗಿದ್ದು, JDS ಪಂಚರತ್ನ ರಥಯಾತ್ರೆ ನಡೆದ ಸ್ಥಳದಲ್ಲೇ ಬಿಜೆಪಿ ಕಾರ್ಯಕ್ರಮ ಮಾಡಲಾಗುತ್ತಿದೆ. ಜೆಡಿಎಸ್ ತೊರೆದು 500ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ. ಮಾಜಿ ಸಿಎಂ ಡಿ.ವಿ.ಸದಾನಂದಗೌಡ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ.
-
Bangalore, Karnataka News Live: ನಾಳೆ ಬಿಐಇಸಿಗೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ
ಬೆಂಗಳೂರು: ನಾಳೆ ಬೆಳಗ್ಗೆ 11ಕ್ಕೆ ಬಿಐಇಸಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ದಿ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ಸಾಧ್ಯತೆಯಿದೆ. 650ಕ್ಕೂ ಹೆಚ್ಚು ಪ್ರಾಯೋಜಕರು, 8 ಸಾವಿರ ವಿದೇಶಿ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಆಯೋಜಕರಿಂದ ಪಾಸ್ ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
-
-
Bangalore, Karnataka News Live: ನಿಖಿಲ್ ಕುಮಾರಸ್ವಾಮಿ ಮುಂದೆ ರಾಜ್ಯದ ಸಿಎಂ ಆಗುತ್ತಾರೆ
ಮೈಸೂರು: ನಿಖಿಲ್ ಕುಮಾರಸ್ವಾಮಿ ಮುಂದೆ ರಾಜ್ಯದ ಸಿಎಂ ಆಗುತ್ತಾರೆ. ಸಿಎಂ ಆಗುವ ಎಲ್ಲಾ ಲಕ್ಷಣ ನಿಖಿಲ್ ಕುಮಾರಸ್ವಾಮಿರವರಿಗಿದೆ ಎಂದು ಜೆಡಿಎಸ್ ಸಮಾವೇಶದಲ್ಲಿ ಜಿಟಿಡಿ ಪುತ್ರ ಹರೀಶ್ ಗೌಡ ಹೇಳಿದರು.
-
Bangalore, Karnataka News Live: ವಿಜಯಪುರ ಬಸವಣ್ಣನವರಿಗೆ ಜನ್ಮ ನೀಡಿದ ಭೂಮಿ: ಎಂ.ಬಿ.ಪಾಟೀಲ್
ವಿಜಯಪುರ: ಜಿಲ್ಲೆಯ ಬಸವಣ್ಣನವರಿಗೆ ಜನ್ಮ ನೀಡಿದ ಭೂಮಿ ಎಂದು ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ವಿಜಯಪುರ ಜಿಲ್ಲೆ ಕಾಯಕ ಮತ್ತು ದಾಸೋಹದ ತತ್ವಗಳನ್ನು ಹೊಂದಿದೆ. ವಿಜಯಪುರ ಜಿಲ್ಲೆಗೆ ತನ್ನದೇ ಆದ ಇತಿಹಾಸ ಇದೆ ಎಂದು ಹೇಳಿದರು.
-
Bangalore, Karnataka News Live: ಹೆಚ್.ಡಿ.ಕುಮಾರಸ್ವಾಮಿ ಅವರ ಪಕ್ಷವನ್ನು ಸರಿಮಾಡಿಕೊಳ್ಳಲಿ: ಸಿಎಂ ಬೊಮ್ಮಾಯಿ
ದೆಹಲಿ: ಬಿಜೆಪಿ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಚಿಂತಿಸುವ ಅಗತ್ಯವಿಲ್ಲ ಎಂದು ದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಬೊಮ್ಮಾಯಿ ಹೇಳದರು. H.D.ಕುಮಾರಸ್ವಾಮಿ ಕಷ್ಟಪಟ್ಟು ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರ ಪಕ್ಷವನ್ನು ಸರಿಮಾಡಿಕೊಳ್ಳಲಿ. ಸರ್ಕಾರದ ಪ್ರಸ್ತುತ ಕಾರ್ಯಕ್ರಮಗಳ ಬಗ್ಗೆ ಹೆಚ್ಡಿಕೆ ಮಾತಾಡಲಿ. ವೈಯಕ್ತಿಕ ಆರೋಪ ಮಾಡಿದರೆ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಕುಮಾರಣ್ಣನಿಗೆ ಎಲ್ಲಿಂದ ಮಾಹಿತಿ ಬರುತ್ತೋ ಗೊತ್ತಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
-
Bangalore, Karnataka News Live: ಜೆಡಿಎಸ್ ಬಗ್ಗೆ ನಾವು ಯಾವತ್ತೂ ಸಾಫ್ಟ್ ಇರಲಿಲ್ಲ: ಎನ್.ರವಿಕುಮಾರ್
ಬೆಂಗಳೂರು: ಕರ್ನಾಟಕದಲ್ಲಿ ಪೇಶ್ವೆ ಬ್ರಾಹ್ಮಣ, ಸ್ಮಾರ್ತ ಬ್ರಾಹ್ಮಣ ಅಂತಾ ಏನಿಲ್ಲ. ಬ್ರಾಹ್ಮಣರ ಬಗ್ಗೆ H.D.ಕುಮಾರಸ್ವಾಮಿ ಏನೂ ಪಿಹೆಚ್ಡಿ ಮಾಡಿದ್ದಾರಾ ಎಂದು ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಪ್ರಶ್ನಿಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಹಳ ಒಳ್ಳೆಯ ರಾಜಕಾರಣಿ. ಜೆಡಿಎಸ್ನಲ್ಲಿದ್ದ ಒಬ್ಬ ಬ್ರಾಹ್ಮಣ YSV ದತ್ತ ಯಾಕೆ ಬಿಟ್ಟು ಹೋದರು? ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ಭಯದಿಂದ HDK ಮಾತಾಡ್ತಿದ್ದಾರೆ. ಜೆಡಿಎಸ್ ಬಗ್ಗೆ ನಾವು ಯಾವತ್ತೂ ಸಾಫ್ಟ್ ಇರಲಿಲ್ಲ ಎಂದು ರವಿಕುಮಾರ್ ಹೇಳಿದರು.
-
Bangalore, Karnataka News Live: ಕೂಪ ಮಂಡೂಕ ನಾಯಕ ಯಾರಾದ್ರು ಇದ್ದರೆ ಅದು ಕುಮಾರಸ್ವಾಮಿ
ಬೆಂಗಳೂರು: H.D.ಕುಮಾರಸ್ವಾಮಿ ಸ್ವಜಾತಿ ಬಿಟ್ಟು ಹೊರಬರದ ಕೂಪ ಮಂಡೂಕ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ವಾಗ್ದಾಳಿ ಮಾಡಿದರು. ಕೂಪ ಮಂಡೂಕ ನಾಯಕ ಯಾರಾದ್ರು ಇದ್ದರೆ ಅದು ಕುಮಾರಸ್ವಾಮಿ. ನಿಮ್ಮ ಕುಟುಂಬ ಬಿಟ್ಟು ಜೆಡಿಎಸ್ ಸಿಎಂ ಅಭ್ಯರ್ಥಿ ಯಾರೆಂದು ಹೇಳಿ. ಬ್ರಾಹ್ಮಣ ಸಮಾಜದ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಬಿಜೆಪಿ ಖಂಡಿಸುತ್ತೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಹೇಳಿದರು.
-
Bangalore, Karnataka News Live: ಸಿಎಂ ಬೊಮ್ಮಾಯಿ ವಿರುದ್ಧ ಸಿದ್ಧರಾಮಯ್ಯ ಕಿಡಿ
ವಿಜಯನಗರ: ಕುರುಬರನ್ನು ಎಸ್ಟಿಗೆ ಸೇರಿಸ್ತೇನೆ ಎಂದು ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದನ್ನು ಮಾಡೋರು ಇವರಲ್ಲ, ಕೇಂದ್ರ ಸರ್ಕಾರದವರು. ಡಬಲ್ ಇಂಜಿನ್ ಸರ್ಕಾರ ಅಂತಾರೆ ಮಾಡ್ರಪ್ಪ, ಎಸ್ಟಿಗೆ ಸೇರಿಸಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದರು.
-
Bangalore, Karnataka News Live: ಬಿಜೆಪಿಯವರು ಮೂಗಿಗೆ ತುಪ್ಪ ಹಚ್ಚೋರಲ್ಲ, ಹಣೆಗೆ ಹಚ್ಚೋರು
ವಿಜಯನಗರ: ಬಿಜೆಪಿಯವರು ಮೂಗಿಗೆ ತುಪ್ಪ ಹಚ್ಚೋರಲ್ಲ, ಹಣೆಗೆ ಹಚ್ಚೋರು. ಕುರುಬರನ್ನು ಎಸ್ಟಿಗೆ ಸೇರಿಸುವಂತೆ ನೀವೆಲ್ಲರೂ ಧ್ವನಿ ಎತ್ತಬೇಕು. ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಮೀಸಲಾತಿ ವಿಚಾರಕ್ಕೆ ಮೀಸಲಾತಿ ಕೊಡಬೇಕೆಂದು ಸಂವಿಧಾನದಲ್ಲಿ ಎಲ್ಲಿ ಬರೆದಿದ್ದಾರೆ ತೋರಿಸಿ. ಸಂವಿಧಾನದಲ್ಲಿ ಉಲ್ಲೇಖಿಸಿದ್ದರೆ ರಾಜಕೀಯದಿಂದ ನಿವೃತ್ತಿಯಾಗುವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
-
Bangalore, Karnataka News Live: ಟೀಕೆ ಮಾಡುವವರಿಗೆ ನಾನು ಹೆದರುವವನಲ್ಲ
ಹಾವೇರಿ: ಸಿದ್ದರಾಮಯ್ಯ ಏನು ಮಾಡಿದ್ರು ಎಂದು ಕೆಲವರು ಟೀಕೆ ಮಾಡ್ತಾರೆ. ಟೀಕೆ ಮಾಡುವವರಿಗೆ ನಾನು ಹೆದರುವವನಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಮಾಡುವ ಕೆಲಸ ನ್ಯಾಯಯುತವಾಗಿದ್ದರೆ ಯಾರೇ ಹೇಳಿದ್ರೂ ನಿಲ್ಲಿಸಲ್ಲ. ಅಧಿಕಾರ ಬರುತ್ತೆ ಹೋಗುತ್ತೆ, ನಾವು ಮಾಡಿದ ಕೆಲಸ ಮಾತ್ರ ಶಾಶ್ವತ.
-
Bangalore, Karnataka News Live: ಹಾಲುಮತ ಸಮುದಾಯಕ್ಕೆ ಯಾವುದೇ ಗುರುಪೀಠ ಇರಲಿಲ್ಲ
ವಿಜಯನಗರ: ಹಾಲುಮತ ಸಮುದಾಯಕ್ಕೆ ಯಾವುದೇ ಗುರುಪೀಠ ಇರಲಿಲ್ಲ. ಗುರುಪೀಠ ಸ್ಥಾಪನೆಗಾಗಿ ನಾವೆಲ್ಲರೂ ಸೇರಿ ಹಣ ಸಂಗ್ರಹಿಸಿದ್ದೆವು ಎಂದು ಮೈಲಾರ ಗ್ರಾಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಹಣ ಸಂಗ್ರಹ ವೇಳೆ ನನ್ನ ಜತೆ ಕಾರಿನಲ್ಲಿ ಬಂದಿದ್ದ ಹೆಚ್.ವಿಶ್ವನಾಥ್. ಅಂದು ಮೊದಲ ಮೀಟಿಂಗ್ಗೆ ಕೆ.ಎಸ್.ಈಶ್ವರಪ್ಪ ಆಬ್ಸೆಂಟ್ ಆಗಿದ್ದ. ಸ್ವಾಮೀಜಿ ಇದು ನಿಮ್ಮ ಗಮನದಲ್ಲಿ ಇರಲಿ ಎಂದು ಹೇಳಿದರು.
-
Bangalore, Karnataka News Live: ಸೀತಾ ಮಾತೆ ಕೂಡ ಅಗ್ನಿಪರೀಕ್ಷೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ
ಚಿಕ್ಕಮಗಳೂರು: ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಬೆಳೆಯುವುದು ಬಹಳ ಕಷ್ಟ. ಪ್ರತಿ ಹಂತದಲ್ಲೂ ಮಹಿಳೆಯರು ಅಗ್ನಿಪರೀಕ್ಷೆ ಎದುರಿಸಬೇಕು ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ಮಾತನಾಡಿ, ಆ ಸೀತಾ ಮಾತೆ ಕೂಡ ಅಗ್ನಿಪರೀಕ್ಷೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಇನ್ನು ನಾನು ಯಾವ ಲೆಕ್ಕವೆಂದು ಭಾವುಕರಾದರು.
-
Bangalore, Karnataka News Live: ನನಗೆ ಬಿಜೆಪಿ ಬಗ್ಗೆ ಗೊತ್ತಿಲ್ಲ, ಕಾಂಗ್ರೆಸ್ ಬಗ್ಗೆ ಮಾತ್ರ ಗೊತ್ತು
ರಾಮನಗರ: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ಬ್ರಾಹ್ಮಣರು ಸಿಎಂ ಆಗ್ತಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಈ ಕುರಿತಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರೆಯೆ ನೀಡಿದ್ದು, ಕುಮಾರಸ್ವಾಮಿ ನುಡಿದಿರುವ ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಬಿಜೆಪಿ ಬಗ್ಗೆ ಗೊತ್ತಿಲ್ಲ, ಕಾಂಗ್ರೆಸ್ ಬಗ್ಗೆ ಮಾತ್ರ ಗೊತ್ತಿರುವುದು. ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ನಮ್ಮ ಕಾಲಿನ ಮೇಲೆ ನಾವು ನಿಲ್ತೀವಿ, ಉತ್ತಮ ಆಡಳಿತ ನೀಡುತ್ತೇವೆ ಎಂದು ಹೇಳಿದರು.
-
Bangalore, Karnataka News Live: ಮುತಾಲಿಕ ಸ್ಪರ್ಧೆಯಿಂದ ಹಿಂದು ಪರ ರಾಜಕೀಯ ಪಕ್ಷಕ್ಕೆ ಹಿನ್ನೆಡೆ: ಸುನಿಲ್ ಕುಮಾರ್
ಕೊಪ್ಪಳ: ಕಾರ್ಕಳದಿಂದ ಪ್ರಮೋದ್ ಮುತಾಲಿಕ್ ಸ್ಪರ್ಧೆ ವಿಚಾರವಾಗಿ ಗಂಗಾವತಿಯಲ್ಲಿ ಮಾತನಾಡಿದ ಸಚಿವ ಸುನಿಲ್ ಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರ ಬೇಕಾದರೂ ಸ್ಪರ್ಧಿಸಬಹುದು. ಪ್ರಮೋದ ಮುತಾಲಿಕ್ ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಲಿ. ಬಿಜೆಪಿ ರಾಜ್ಯದ 224 ಕ್ಷೇತ್ರ ಇದೆ. ಚುನಾವಣೆಯ ಹತ್ತಿರ ಬರಲಿ ಎಲ್ಲವೂ ಗೊತ್ತಾಗಲಿದೆ ಎಂದರು. ಅಲ್ಲದೆ, ಮುತಾಲಿಕ ಸ್ಪರ್ಧೆಯಿಂದ ಹಿಂದು ಪರ ರಾಜಕೀಯ ಪಕ್ಷಕ್ಕೆ ಹಿನ್ನೆಡೆಯಾಗಲಿದೆ. ಇದನ್ನು ಅವರು ತಿಳಿದುಕೊಳ್ಳಬೇಕು. ಬಿಜೆಪಿ ಸರಕಾರ ಬಂದ ನಂತರ ಕೇವಲ ಒಬ್ಬ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಒಟ್ಟು 18 ಹಿಂದು ಕಾರ್ಯಕರ್ತರ ಹತ್ಯೆಯಾಗಿತ್ತು. ಬಿಜೆಪಿ ಸರಕಾರ ಬಂದ ನಂತರ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಹಿಜಾಬ ಕುರಿತು ಕಾಯ್ದೆ ರೂಪಿಸಿದೆ ಎಂದರು. ರಾಜ್ಯಕ್ಕೆ ಪದೇ ಪದೇ ಮೋದಿ ಆಗಮನ ವಿಚಾರವಾಗಿ ಮಾತನಾಡಿ, ರಾಜ್ಯಕ್ಕೆ ಮುಂದಿನ ದಿನಗಳಲ್ಲಿ 10 ಬಾರಿ ಬರುತ್ತಾರೆ. ಚುನಾವಣೆಯ ಮುನ್ನ ಹತ್ತು ಬಾರಿ ಬರುತ್ತಾರೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು. ಮೋದಿ ನಮ್ಮ ಪರಮೋಚ್ಛ ನಾಯಕರು. ನಾವು ಚುನಾವಣೆ ಗೆಲ್ಲಲೇಬೇಕು. ಸಿದ್ದರಾಮಯ್ಯ ಮೊದಲು ಕ್ಷೇತ್ರ ಯಾವುದು ಎಂದು ಖಚಿತ ಪಡಿಸಿಕೊಳ್ಳಲಿ. ಆಮೇಲೆ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.
-
Bangalore, Karnataka News Live: ಬಿಜೆಪಿಯವರು ನೀಚರು, ಯಾವ ಹಂತಕ್ಕೆ ಬೇಕಾದರೂ ಹೋಗ್ತಾರೆ: ಡಿಕೆ ಸುರೇಶ್
ಬೆಂಗಳೂರು: ನಾಯಕರನ್ನು ನಿಯಂತ್ರಿಸಲು ಆಗದವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತಾಡುತ್ತಾರೆ. ಬಿಜೆಪಿ ನಾಯಕರಿಗೆ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವ ಹಕ್ಕಿಲ್ಲ. ಪಾಕಿಸ್ತಾನದ ಹೆಸರಿಟ್ಟುಕೊಂಡು ರಾಜಕಾರಣ ಮಾಡುವುದು ಬಿಜೆಪಿ ಪದ್ಧತಿ. ರಾಜಕಾರಣಕ್ಕಾಗಿ ಬಿಜೆಪಿಯವರು ಕೊಲೆಗಳನ್ನು ಸಹ ಮಾಡಿಸುತ್ತಾರೆ. ಯಾರನ್ನು ಬೇಕಾದರೂ ಹೊಡೀತಾರೆ, ಆಪರೇಷನ್ ಬೇಕಾದರೂ ಮಾಡುತ್ತಾರೆ. ಬಿಜೆಪಿಯವರು ನೀಚರು, ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ಕೋಮುಗಲಭೆ ಮಾಡಿಸಲು ಸಿದ್ಧವಾದಂತೆ ಕಾಣುತ್ತಿದ್ದೆ. ಬೆಂಗಳೂರು, ಕರಾವಳಿ ಕಡೆ ಕೋಮುಗಲಭೆ ಮಾಡಿಸಲು ತಯಾರಿ ನಡೆಸಿದ್ದಾರೆ. ರಾಜ್ಯದಲ್ಲಿ ಅಶಾಂತಿ ಮೂಡಿಸಲು ಪಾಕಿಸ್ತಾನ ವಿಚಾರ ಪ್ರಸ್ತಾಪಿಸಿದ್ದಾರೆ. ಪದೇಪದೆ ಪಾಕ್ ವಿಚಾರ ಪ್ರಸ್ತಾಪಿಸುವ ಸಿಟಿ ರವಿ ವಿರುದ್ಧ ಕ್ರಮ ಆಗಬೇಕು. ರಾಜ್ಯದ ಅಭಿವೃದ್ಧಿ ಬಗ್ಗೆ ಬಿಜೆಪಿ ನಾಯಕರಿಗೆ ಗಮನವಿಲ್ಲ ಎಂದು ವಾಗ್ದಾಳಿ ಮಾಡಿದರು.
-
Bangalore, Karnataka News Live: ಸ್ವ ಪಕ್ಷದ ನಾಯಕರ ವಿರುದ್ಧ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ
ಹಾಸನ: ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರ್ಪಡೆ ವಿಚಾರವಾಗಿ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ನಿರೀಕ್ಷಿತವಾದಂತಹ ಮಾತುಗಳು. ನಾನು ಇದನ್ನು ಬಹಳ ಹಿಂದೆಯೇ ನಿರೀಕ್ಷೆ ಮಾಡಿದ್ದೆ. ಒಟ್ಟಾರೆ ರಾಜಕಾರಣ ರಾಜ್ಯದಲ್ಲಿ ತುಂಬ ಕೆಟ್ಟೋಗಿದೆ. ನಾನು ರಾಜಕಾರಣ ಮಾಡಿಕೊಂಡು ಬಂದಿರುವುದು ನನಗಾಗಿ ಅಲ್ಲ, ಜನರಿಗಾಗಿ. ರಾಜಕೀಯ ಕೆಟ್ಟಿದೆ, ನಾನು ಅನೇಕ ಸಂದರ್ಭಗಳಲ್ಲಿ ಹೇಳಿದ್ದೀನಿ ಎಂದು ಹೇಳಿದರು.
ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ಮಾತನಾಡಿದ ಅವರು ಆಡಳಿತ ಚೆನ್ನಾಗಿಲ್ಲ, ರಾಜಕೀಯ ಚೆನ್ನಾಗಿಲ್ಲ, ಶಾಸಕಾಂಗನು ಕೂಡ ಚೆನ್ನಾಗಿಲ್ಲ. ನಾನು ಸದನದಲ್ಲಿ ಮಾತನಾಡುವಾಗ ಹೇಳಿದೆ ನಮ್ಮ ನಾಯಕರಗಳ ಸಮಯ, ಶಕ್ತಿ ಎಲ್ಲಾ ವ್ಯರ್ಥವಾಗುತ್ತಿದೆ. ಅನವಶ್ಯಕವಾದಂತಹ ವಿಷಯಗಳಿಗೆ ಒಬ್ಬರ ಮೇಲೆ ಒಬ್ಬರು ಕೆಸರೆರೆಚಾಡುತ್ತಿದ್ದಾರೆ. ಇವತ್ತು ಅರಕಲಗೂಡು ಕ್ಷೇತ್ರದಲ್ಲಿ ಅಪವಿತ್ರ ಮೈತ್ರಿ ಮಾಡ್ಕಂಡು, ಸ್ವಾರ್ಥಕ್ಕಾಗಿ ರಾಜಕಾರಣ ಮಾಡಲಿಕ್ಕೆ ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಗೆದ್ದಂತಹ ಅಭ್ಯರ್ಥಿ ಮೇಲೆ ಕೋರ್ಟ್‌ನಲ್ಲಿ ಪ್ರಕರಣ ಹಾಕಿದ್ದರು. ವಿಚಾರಣೆ ತೀವ್ರಗತಿಯಲ್ಲಿ ನಡಿತಿದೆ. ಆ ವಿಚಾರಣೆಯನ್ನು ತಣ್ಣಗೆ ಮಾಡಬೇಕೆಂದು ದೂರುದಾರರೇ ಸುಮ್ಮನಾದರೇ? ತಾಯಿಯೇ ತನ್ನ ಮಗುವಿಗೆ ಹಾಲು ಕೊಡದೆ ವಿಷ ಕೊಟ್ಟರೆ ಮಗು ಹೇಗೆ ಬದುಕುತ್ತೆ. ಸತ್ಯ, ನ್ಯಾಯ, ಧರ್ಮ, ಎಲ್ಲಿ ಉಳಿಯುತ್ತೆ. ಅಪವಿತ್ರ ಮೈತ್ರಿಗಾಗಿ, ಸ್ವಾರ್ಥಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಜನ ಇದನ್ನು ನೋಡುತ್ತಿದ್ದಾರೆ. ಬಹಳ ಕಾಲ ಅದು ಬಾಳಿಕೆಗೆ ಬರುವುದಿಲ್ಲ. ನೀವೇನಾದರು ಕಂಡ ಹಾಗೆ, ನೀವು ಕೇಳಿದ ಹಾಗೇ, ಯಾರನ್ನು ಬೇಕಾದರು ಕೇಳಿ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದ ಶಾಸಕನಾಗಿ, ಎರಡು ಕೊರೊನಾ ಸಂಕಷ್ಟ ಸಂದರ್ಭದಲ್ಲೂ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ. ಅನವಶ್ಯಕವಾಗಿ ಕಾಲ ಕಳೆಯಲಿಲ್ಲ. ಜನಸೇವೆಯೇ ಜನಾರ್ಧನ ಸೇವೆ ಅಂದುಕೊಂಡು ಬಂದವನು ನಾನು ಎಂದರು.
ನನ್ನ ಕ್ಷೇತ್ರವೇ ದೇವಾಲಯ, ಜನರ ಸೇವೆ ಮಾಡೋದು ದೇವರ ಪೂಜೆ ಅಂದುಕೊಂಡು ಬಂದವನು ನಾನು. ಯಾರಾದರು ಒಬ್ಬರು ಮೋಸ, ಅನ್ಯಾಯ, ಭ್ರಷ್ಟಾಚಾರ ಮಾಡಿದರು ಅಂತ ಮಾತು ಹೇಳಿದ್ರೆ ನಾನು ಅವರ ಮುಂದೆ ಕ್ಷಮೆ ಕೇಳುತ್ತೇನೆ. ನನಗೆ ಆತ್ಮತೃಪ್ತಿ ಇದೆ, ಅತ್ಯಂತ ನ್ಯಾಯಯುತವಾಗಿ, ಪ್ರಾಮಾಣಿಕವಾಗಿ ಜನರ ಸೇವೆ ಮಾಡ್ಕಂಡು ಬಂದಿದ್ದೀನಿ. ಅವರ ವಿಶ್ವಾಸಕ್ಕೆ ಎಂದು ಕೂಡ ಎರಡು ಬಗೆಯಲಿಲ್ಲ. ಜನರಿಗಾಗು ನಾನೇ ಹೊರತು, ನನಗಾಗಿ ಜನ ಅಲ್ಲ ಅಂತ ತಿಳ್ಕಂಡು ಬಂದವನು ನಾನು. ನೇರವಾಗಿ ಮಾತನಾಡಿದ್ದೀನಿ ಅದು ಆಡಳಿತ ಪಕ್ಷ ಇರಲಿ, ವಿರೋಧ ಪಕ್ಷದಲ್ಲಿ ಕೂತಿರಲಿ ತಪ್ಪನ್ನು ತಪ್ಪು ಎಂದು ಕಂಡಿಸಿಕೊಂಡು ಬಂದಿದ್ದೀನಿ. ತಪ್ಪನ್ನ ಎತ್ತಿ ಹೇಳೋದೆ ನನ್ನ ತಪ್ಪು ಎನ್ನೋದಾದರೇ ಜನರ ತೀರ್ಮಾನಕ್ಕೆ ಬಿಡುತ್ತೇನೆ. ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ, ಅವರ ಅಭಿಪ್ರಾಯ ಕೇಳದೆ ಯಾವುದೇ ತೀರ್ಮಾನ ತೆಗೆದುಕೊಳ್ಳಲ್ಲ ಎಂದು ಮಾತನಾಡಿದರು.
ಇದು ಒಂದು, ಒಂದುವರೆ ವರ್ಷದ ಹಿಂದೆ ನಡೆದುಕೊಂಡು ಬಂದಿರುವ ಒಳಸಂಚು. ಕೊಡಗು ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿ ಹಾಕಿದರು. ವಾಪಾಸ್ ತಗಿಸಿದರು ಯಾರ ಹಿತವನ್ನು ಕಾಪಾಡಲಿಕ್ಕೆ. ಕಾಂಗ್ರೆಸ್ ಪಾರ್ಟಿಯ ಅಭ್ಯರ್ಥಿಯ ಹಿತವನ್ನು ಕಾಪಾಡಲಿಕ್ಕೆ. ಅದಕ್ಕಾಗಿ ನಾನು ಪಕ್ಷದ ಚಟುವಟಿಕೆಗಳಿಂದ ದೂರ ಇದ್ದದ್ದು ನಿಜ. ಆದರೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರಲಿಲ್ಲ. ಈ ಒಳಸಂಚುಗಳು ನನ್ನ ಗಮನಕ್ಕೆ ಮೊದಲೇ ಬಂದಿತ್ತು ಎಂದು ನುಡಿದರು.
-
Bangalore, Karnataka News Live: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಸಿಎಂ ಆಗುವರು ಅನೇಕರಿದ್ದಾರೆ: ಎಂ ಬಿ ಪಾಟೀಲ್
ಕಲಬುರಗಿ: ಕಾಂಗ್ರೆಸ್ನ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಸಿಗಬಹುದು. ಬಿಜೆಪಿಯ ಅನೇಕ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ. ಬಿಜೆಪಿಯ 7-8 ಶಾಸಕರು ಕಾಂಗ್ರೆಸ್ಗೆ ಬರುವ ಸಾಧ್ಯತೆ ಇದೆ. ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಅನೇಕರಿಗೆ ಇದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕರಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಸಿಎಂ ಯಾರೆಂದು ನಿರ್ಧಾರ ಮಾಡುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಸುಳ್ಳುಗಳು ರಾಜ್ಯದ ಜನರಿಗೆ ಅರ್ಥವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಮನೆ ಕಟ್ಟಿಲ್ಲ. ಬಿಬಿಎಂಪಿಯಲ್ಲಿ 50% ಕಮಿಷನ್ ಪಡೆದಿದ್ದಾರೆ. ರಾಜ್ಯದ ಮರ್ಯಾದೆಯನ್ನು ಬಿಜೆಪಿ ನಾಯಕರು ಹಾಳು ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದರು. ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನೇ ಬಿಜೆಪಿ ಪಂಚರ್ ಮಾಡಿದೆ. ಬರುವ ಚುನಾವಣೆಯಲ್ಲಿ ಬಿಜೆಪಿ 60 ಸ್ಥಾನ ಗೆದ್ದರೇ ಅದೇ ದೊಡ್ಡದು. ನಾವು ಹಗಲುಗನಸು ಕಾಣುತ್ತಿಲ್ಲ, ನಿಜವಾದ ಕನಸು ಕಾಣುತ್ತಿದ್ದೇವೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಐಸಿಯುನಲ್ಲಿದೆ. ಹೀಗಾಗಿ ಮೋದಿ, ಅಮಿತ್ ಶಾ ಅವರನ್ನು ರಾಜ್ಯಕ್ಕೆ ಕರೆಸುತ್ತಿದ್ದಾರೆ. ಮೋದಿ ಕಾರ್ಯಕ್ರಮಕ್ಕಿಂತ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಜನ ಬರುತ್ತಾರೆ. ಮೋದಿ ಕಾರ್ಯಕ್ರಮಕ್ಕಿಂತ ನೂರು ಪಟ್ಟು ಹೆಚ್ಚು ಜನರು ಬಂದಿದ್ದರು ಎಂದು ಹೇಳಿದರು.
-
Bangalore, Karnataka News Live: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಡುಪ್ಲಿಕೇಟ್ ಶೆಟ್ಟಿ: ಸಿಎಂ ಇಬ್ರಾಹಿಂ
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಡುಪ್ಲಿಕೇಟ್ ಶೆಟ್ಟಿ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಶೆಟ್ಟರ್ ಎಷ್ಟ ಎಕರೇ ಜಮೀನು ಮಾಡಿದ್ದಾರೆ? ನಮ್ಮ ಸರ್ಕಾರ ಬರಲಿ, ಇವರದು ಎಲ್ಲ ಹೊರಗೆ ಬರತ್ತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಾಗ್ದಾಳಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಕಾಂಗ್ರೆಸ್ ನಲ್ಲಿದ್ದರು, ದೇವೆಗೌಡರ ವಿರುದ್ದ ನಾನು ಮತ ಕೇಳಿಲ್ಲ. ಸಿದ್ದರಾಮಯ್ಯ ನಿನಗೆ ಎರಡು ಸಲ ರಾಜಕೀಯ ಕೊಟ್ಟೆ. ಜಮೀರನ್ನ ಕರೆದುಕೊಂಡು ಹೋಗಿ ಹಾಲಲ್ಲಿ ವಿಷ ಹಾಕಿದ್ದಾರೆ ಎಂದರು.
ಹುಮನಾಬಾದ್ ಅಲ್ಲಿ ನನ್ನ ಮಗನಿಗೂ ಬಿಜೆಪಿಗೂ ಫೈಟ್ ಇದೆ. ಅಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಇಂಟಲಿಜೆನ್ಸ್ ರಿಪೋರ್ಟ್ ಇದೆ, ಬೊಮ್ಮಾಯಿಗೂ ಗೊತ್ತಾಗಿದೆ. ಜಮೀರ್ ಇಲ್ಲೂ ನನ್ನ ಮಗ ಗೆಲ್ಲುತ್ತಾನೆ. ಜನತಾದಳ ಅಧಿಕಾರಕ್ಕೆ ಬರೋದು ನಿಶ್ವಿತ ಎಂದು ಹೇಳಿದರು.
ವರುಣಾ ಕ್ಷೇತ್ರದಲ್ಲಿ BSY ಇಲ್ಲದೇ ಸಿದ್ದರಾಮಯ್ಯ ಗೆಲ್ಲಲು ಆಗಲ್ಲ
ವರುಣಾ ಕ್ಷೇತ್ರದಲ್ಲಿ ಬಿಎಸ್ ಯಡಿಯೂರಪ್ಪ ಇಲ್ಲದೆ ಸಿದ್ದರಾಮಯ್ಯ ಗೆಲ್ಲಲು ಆಗಲ್ಲ. ಹೀಗಾಗಿ ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲುವುದಿಲ್ಲ ಎಂದು ಯಡಿಯೂರಪ್ಪ ಅವರು ಅಂದಿದ್ದಾರೆ. ನಾನು ಕೂಡ ಕೋಲಾರ ಬೇಡ ಎಂದಿದ್ದೇನೆ. ಸಿದ್ದರಾಮಯ್ಯ ಹಾಗೂ ಬಿ.ಎಸ್.ಯಡಿಯೂರಪ್ಪ ಇಬ್ಬರೂ ಒಂದೇ ಎಂದು ಹೇಳಿದರು.
ಭವಾನಿ ರೇವಣ್ಣಗೆ ಟಿಕೆಟ್ ನೀಡುವ ವಿಚಾರವಾಗಿ ಮಾತನಾಡಿದ ಅವರು ಭವಾನಿ ರೇವಣ್ಣಗೆ ಟಿಕೆಟ್ ಡುವ ಬಗ್ಗೆ ಪಕ್ಷ ತೀರ್ಮಾನಿಸಲಿದೆ. ಬಿಜೆಪಿ ದೊಡ್ಡ ಪಕ್ಷ, ವಾಜಪೇಯಿಯಂತಹ ಮಹಾನುಭಾವರಿದ್ದ ಪಕ್ಷ. ಬಿಜೆಪಿ ಹಾಗೂ ನಮ್ಮ ಜೆಡಿಎಸ್ ನಡುವೆ ಭಿನ್ನಾಭಿಪ್ರಾಯ ಇದೆ. ಬಿಜೆಪಿಯವರು ಕೊಲೆ ಮಾಡುತ್ತಾರೆ ಅನ್ನೋ ಶಬ್ದ ನಾನು ಬಳಸಲ್ಲ ಎಂದು ಪರೋಕ್ಷವಾಗಿ ಸಂಸದ ಡಿ.ಕೆ.ಸುರೇಶ್ಗೆ ಸಿ.ಎಂ.ಇಬ್ರಾಹಿಂ ಟಾಂಗ್ ನೀಡಿದರು. ಅದರೆ ಇತ್ತೀಚೆಗೆ ಬಿಜೆಪಿ ಯಾಕೋ ದಾರಿ ತಪ್ಪಿದೆ ಎಂದು ಹೇಳಿದ್ದಾರೆ.
-
Bangalore, Karnataka News Live: ಬಜೆಟ್ ಸೇಷನ್ ಮುಗಿದ ನಂತರ, ನಾಲ್ಕು ತಂಡಗಳಲ್ಲಿ ರಾಜ್ಯ ಪ್ರವಾಸ
ಬಾಗಲಕೋಟೆ: ಡಬಲ್ ಎಂಜಿನ್ ಸರಕಾರ ಅಂತ ನಮ್ಮ ಸರಕಾರಕ್ಕೆ ಹೆಸರಿದೆ. ಕೇಂದ್ರದಲ್ಲಿ ಪ್ರಧಾನಿ ಆಗಿರುವ ಮೋದಿ ಜಗತ್ತಿನ ನಾಯಕರು. ಉಳಿದ ಪಕ್ಷದವರು ಅವರ ಹತ್ತಿರವೂ ಇಲ್ಲ. ಕಳೆದ 2019 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷ ಸ್ಥಾನ ಕೂಡ ಪಡೆಯಲಿಲ್ಲ ಎಂದು ಸಚಿವ ಮುರಗೇಶ್ ನೀರಾಣಿ ಹೇಳಿದ್ದಾರೆ
ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಬಜೆಟ್ ಸೇಷನ್ ಮುಗಿದ ನಂತರ, ನಾಲ್ಕು ತಂಡಗಳಲ್ಲಿ ನಾವು ಪ್ರವಾಸ ಮಾಡುತ್ತೇವೆ. 4 ತಂಡಗಳ ಮೂಲಕ ಎಲ್ಲ ವಿಧಾನಸಭಾ ಕ್ಷೇತ್ರಗಳ ಮುಟ್ಟುವಂತದ್ದಿದೆ. ನಮ್ಮ ನೆಚ್ಚಿನ ಪ್ರಧಾನಿ, ಗೃಹ ಮಂತ್ರಿಗಳು ಮತ್ತು ರಾಷ್ಟ್ರೀಯ ಅಧ್ಯಕ್ಷರು ಈಗಾಗಲೇ ಪ್ರವಾಸವನ್ನ ಪ್ರಾರಂಭಮಾಡಿದ್ದಾರೆ. ಕಳೆದ ತಿಂಗಳು ಮೂರು ರಾಜ್ಯಕ್ಕೆ ಭೇಟಿ ಕೊಟ್ಟಿದ್ದಾರೆ. ನಾಳೆ 6 ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ರೀತಿ ಮೇಲಿಂದ ಮೇಲೆ ಕೇಂದ್ರದ ಸಚಿವ್ರು, ಮತ್ತು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು, ಹೆಚ್ವಿನ ಸಂಖ್ಯೆಯಲ್ಲಿ ಬಂದು, 140 ಕ್ಕೂ ಹೆಚ್ಚು ಸ್ಥಾನಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಸಲಿಕ್ಕೆ, ಅವರ ಮಾರ್ಗದರ್ಶನದಿಂದ ನಾವು ನಿಶ್ಚಿತವಾಗಿ ಸರ್ಕಾರವನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.
-
ಫೆ.6 ರಂದು ತುಮಕೂರಿಗೆ ಪ್ರಧಾನಿ ಮೋದಿ: HAL ಹೆಲಿಕಾಪ್ಟರ್ ಕಾರ್ಖಾನೆ ಲೋಕಾರ್ಪಣೆ
ತುಮಕೂರು: ನಾಳೆ (ಫೆ.6) ಕಲ್ಪತರು ನಾಡು ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಗುಬ್ಬಿ ತಾಲೂಕಿನ, ನಿಟ್ಟೂರು ಬಳಿಯ ಹೆಚ್ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿ MI17 ಹೆಲಿಕಾಪ್ಟರ್ನಲ್ಲಿ ಬರಲಿದ್ದು, ಮಧ್ಯಾಹ್ನ 3.20ಕ್ಕೆ ಹೆಚ್ ಎಎಲ್ ಹೆಲಿಪ್ಯಾಡ್ನಲ್ಲಿ ಇಳಿಯಲಿದ್ದಾರೆ. ಪ್ರಧಾನಿ 3.30ಕ್ಕೆ ತುಮಕೂರಿನ HAL ಹೆಲಿಕಾಪ್ಟರ್ ಕಾರ್ಖಾನೆಯ ಲೋಕಾರ್ಪಣೆ ಮತ್ತು ಜಲ ಜೀವನ್ ಮಿಷನ್ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ 1 ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 4.40ಕ್ಕೆ ಹೆಚ್ಎಎಲ್ ಹೆಲಿಪ್ಯಾಡ್ಗೆ ಆಗಮಿಸಿ, 4.45ಕ್ಕೆ ಬೆಂಗಳೂರಿನತ್ತ ಪ್ರಯಾಣ ಬೆಳಸಲಿದ್ದಾರೆ.
ಜೊತೆಗೆ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಜ್ಜು
ಕಾರ್ಯಕ್ರಮದಲ್ಲಿ ಸುಮಾರು 80 ಸಾವಿರ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ. ಸರ್ಕಾರಿ ಕಾರ್ಯಕ್ರಮ ಉದ್ವಾಟನೆ ನೆಪದಲ್ಲಿ ತುಮಕೂರು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ. ಈಗಾಗಲೇ ಜಿಲ್ಲಾಡಳಿತ ಕಡೆಯಿಂದ ಸಕಲ ಸಿದ್ದತೆ ಮಾಡಿಕೊಂಡಿದೆ. ಸುಮಾರು 5 ಸಾವಿರ ಕೋಟಿಗೂ ಅಧಿಕ ವೆಚ್ಚದಲ್ಲಿ ಒಟ್ಟು 616 ಎಕರೆಯಲ್ಲಿ ನೂತನ ಹೆಚ್ ಎಎಲ್ ಘಟಕ ನಿರ್ಮಾಣವಾಗಿದೆ.
-
Bangalore, Karnataka News Live: ದೇವನಹಳ್ಳಿ ಕ್ಷೇತ್ರದ ಜೆಡಿಎಸ್ನಲ್ಲಿ ಭಿನ್ನಮತ: ಹಾಲಿ ಶಾಕರ ವಿರುದ್ಧ ತಿರುಗಿಬಿದ್ದ ಕಾರ್ಯಕರ್ತರು
ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ನಲ್ಲಿ ಭಿನ್ನಮತ ಮೂಡಿದೆ. ಹಾಲಿ ಶಾಸಕ ನಿಸರ್ಗ ನಾರಾಯಣಸ್ವಾಮಿಗೆ ಟಿಕೆಟ್ ಘೋಷಣೆಗೆ ಸ್ವಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರ ವಿರೋಧ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಹಾಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಗ ಟಿಕೆಟ್ ನೀಡದಂತೆ ಕುಮಾರಸ್ವಾಮಿ ಗೆ ಮನವಿ. ನಿಸರ್ಗ ನಾರಾಯಣಸ್ವಾಮಿಗೆ ಟಿಕೆಟ್ ನೀಡಿದರೇ ಕ್ಷೇತ್ರದಲ್ಲಿ ಈ ಭಾರಿ ಜೆಡಿಎಸ್ ಗೆಲ್ಲೋದಿಲ್ಲ ಎಂದಿದ್ದಾರೆ. ಹೊಸ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಶಾಸಕ ನಿಸರ್ಗ ವಿರೋಧಿ ಬಣ ಆಗ್ರಹಿಸಿದೆ.
-
Bangalore, Karnataka News Live: ಫೆ.26ಕ್ಕೆ ದಾವಣಗೆರೆಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್
ದಾವಣಗೆರೆ: ರಾಷ್ಟ್ರೀಯ ಪಕ್ಷಗಳು ಮಧ್ಯ ಕರ್ನಾಟಕವನ್ನು ಟಾರ್ಗೆಟ್ ಮಾಡಿಕೊಂಡು ಸಮಾವೇಶಗಳನ್ನು ಮಾಡುತ್ತಿವೆ. ಈ ಹಿಂದೆ ಸಿದ್ದರಾಮೋತ್ಸವ ದಾವಣಗೆರೆಯಲ್ಲಿ ನಡೆದಿದೆ. ಈಗ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ಸಮಾರೋಪ ಸಮಾರಂಭವನ್ನು ದಾವಣಗೆರೆಯಲ್ಲೇ ನಡೆಸಲು ಚಿಂತಿಸಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಪಕ್ಷವಾಗಿ ಹೊಮ್ಮುತ್ತಿರುವ ಆಮ್ ಆದ್ಮಿ ಪಾರ್ಟಿ ಕೂಡ ದಾವಣಗೆರೆಯಲ್ಲೇ ಸಮಾವೇಶ ನಡೆಸಲು ನಿರ್ಧರಿಸಿದೆ. ಈ ಸಂಬಂಧ ಫೆ.26 ರಂದು ಆಮ್ ಆದ್ಮಿ ಪಕ್ಷದ ವರಿಷ್ಠ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದಾವಣಗೆರೆಗೆ ಆಗಮಿಸಲಿದ್ದಾರೆ.
ವಿಧಾನ ಸಭೆ ಚುನಾವಣೆ ಹಿನ್ನೆಲೆ ಪ್ರಚಾರ ಆರಂಭಿಸಲು ದಾವಣಗೆರೆ ಆಯ್ದು ಕೊಂಡಿದ್ದು, ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಇನ್ನು ಸ್ಥಳ ನಿಗದಿಯಾಗಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ. ವಿಶ್ವನಾಥ ಮಾಹಿತಿ ನೀಡಿದ್ದಾರೆ.
ದೇಶವನ್ನ ಭ್ರಷ್ಟಾಚಾರ ಮುಕ್ತ ಮಾಡುವ ಸಂಕಲ್ಪ ಆಮ್ ಆದ್ಮಿ ಪಕ್ಷದ್ದು. ಈಗ ರಾಜ್ಯದ ಜನ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ಗೆ ಬೇಸತ್ತಿದ್ದಾರೆ. ಬದಲಾವಣೆ ಮೂಡ್ನಲ್ಲಿ ಕರ್ನಾಟಕದ ಜನ ಇದ್ದಾರೆ. ಇದೇ ಕಾರಣಕ್ಕೆ ರಾಜ್ಯದ ನಿಜವಾದ ಕೇಂದ್ರ ಸ್ಥಳವಾದ ದಾವಣಗೆರೆ ಆಯ್ಕೆ ಮಾಡಲಾಗಿದೆ. ಅರವಿಂದ್ ಕೇಜ್ರಿವಾಲ್ ಅವರು ಪಾಲ್ಗೊಳ್ಳುವ ಸಮಾವೇಶದ ಸ್ಥಳ ಹಾಗೂ ದಿನಾಂಕದ ಬಗ್ಗೆ ಇಷ್ಟರಲ್ಲಿಯೇ ಮಾಹಿತಿ ನೀಡಲಾಗುವುದು ಎಂದರು.a
-
Bangalore, Karnataka News Live: ದಾವಣಗೆರೆಯಲ್ಲಿ ಬಿಜೆಪಿ ಮಹಾಸಂಗಮ, 2 ತಿಂಗಳಲ್ಲಿ 200 ರೋಡ್ ಶೋ, 4 ದಿಕ್ಕಲ್ಲೂ ರಥಯಾತ್ರೆ
ಬೆಂಗಳೂರು: ರಾಜ್ಯದಲ್ಲಿ ಯಾತ್ರೆಗಳದ್ದೇ ಸದ್ದು ಕೇಳುತ್ತಿದೆ. ಕಾಂಗ್ರೆಸ್ ಬಸ್ ಯಾತ್ರೆ ಮತ್ತು ಜೆಡಿಎಸ್ ಪಂಚರತ್ನ ಯಾತ್ರೆ ಮೂಲಕ ಭಾರಿ ಸದ್ದು ಮಾಡಿವೆ. ಈಗ ಬಿಜೆಪಿ ಕೂಡ ರಥಯಾತ್ರೆ ಮಾಡಲು ಮುಂದಾಗಿದ್ದು ರಾಜ್ಯದ ನಾಲ್ಕು ಭಾಗಗಳಲ್ಲಿ ವಿಜಯ ಸಂಕಲ್ಪ ರಥಯಾತ್ರೆ ನಡೆಸಲಿದೆ. ಒಟ್ಟು 4 ತಂಡಗಳಿಂದ ರಥಯಾತ್ರೆ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಯಾತ್ರೆ ನಡೆಯಲಿದೆ.
ಈ ರಥ ಯಾತ್ರೆಯ ಕೆಲವು ಕಡೆ ರಾಷ್ಟ್ರೀಯ ನಾಯಕರು ಮತ್ತು ಕೇಂದ್ರ ಸಚಿವರು ಭಾಗಿಯಾಗುವ ಸಾಧ್ಯತೆ ಇದೆ. ಫೆಬ್ರವರಿ 26 ರಿಂದ ಆರಂಭವಾಗಿ ಮಾರ್ಚ್ 23 ರಂದು ಅಂತ್ಯವಾಗು ಸಾಧ್ಯತೆ ಇದೆ. ಬೆಂಗಳೂರಿನ ಕೆಂಪೇಗೌಡ ಪ್ರತಿಮೆ, ಚಾಮರಾಜನಗರದ ಮಲೈ ಮಹದೇಶ್ವರ ಬೆಟ್ಟ, ಬೆಳಗಾವಿಯ ಬೈಲಹೊಂಗಲದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮತ್ತು ಬೀದರ್ನ ಬಸವ ಕಲ್ಯಾಣದ ಅನುಭವದ ಮಂಟಪದಿಂದ ರಥಯಾತ್ರೆ ಆರಂಭವಾಗಲಿದೆ.
ನಾಲ್ಕು ಭಾಗಗಳಿಂದ ಶುರುವಾದ ರಥಯಾತ್ರೆ ಬೃಹತ್ ಸಮಾವೇಶದ ಮೂಲಕ ದಾವಣಗೆರೆಯಲ್ಲಿ ಅಂತ್ಯವಾಗಲಿದೆ. ಮುಂದಿನ ಎರಡು ತಿಂಗಳಲ್ಲಿ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಂದ 200 ರೋಡ್ ಶೋ ನಡೆಯಲಿದೆ. ಬಿಜೆಪಿಯ ಎಲ್ಲ ಮೋರ್ಚಾಗಳಿಂದ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಸಮಾವೇಶ ನಡೆಯಲಿದೆ.
ದಾವಣಗೆರೆಯಲ್ಲಿ ಕೇಸರಿ ಮಹಾಸಂಗಮ
ದಾವಣಗೆರೆಯಲ್ಲಿ ಕೇಸರಿ ಮಹಾಸಂಗಮ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಮಾರ್ಚ್ ಮೂರನೇ ವಾರದಲ್ಲಿ ಸಮಾವೇಶ ನಡೆಯಲಿದೆ. ರಾಜ್ಯದ ನಾಲ್ಕು ಭಾಗಗಳಿಂದ ಬಂದು ರಥಯಾತ್ರೆ ದಾವಣಗೆರೆಯಲ್ಲಿ ಕೊನೆಯಾಗಲಿದೆ.
Published On - Feb 05,2023 10:12 AM




