ಬೆಂಗಳೂರು/ಹುಬ್ಬಳ್ಳಿ: ಈ ಬಾರಿ ವಿಧಾನಸಭೆ ಚುನಾವಣೆಯ ಟಿಕೆಟ್ ನಿರಾಕರಿಸಿದ್ದರಿಂದ ಉತ್ತರ ಕರ್ನಾಟಕ ಭಾಗದ ಲಿಂಗಾಯತ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್(Jagadish Shettar) ಇಂದು (ಏಪ್ರಿಲ್ 17) ಕಾಂಗ್ರೆಸ್ ಸೇರ್ಪಡೆಯಾದರು. ತಮ್ಮ ಸಮುದಾಯದ ದೊಡ್ಡ ನಾಯಕನಿಗೆ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದೆ. ಶೆಟ್ಟರ್ ಅವರನ್ನು ನಡೆಸಿಕೊಂಡು ರೀತಿ ರಾಜ್ಯದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಲಿಂಗಾಯತ ಸಮುದಾಯದ ಮತಗಳು ಹಂಚಿಹೋಗದಂತೆ ತಡೆಯಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಬಿಜೆಪಿ ಮುಂದಾಗಿದೆ. ಹೌದು.. ವೀರಶೈವ ಲಿಂಗಾಯತ ಮುನಿಸಿಗೆ ಮುಲಾಮು ಹಚ್ಚಲು ರಾಜ್ಯ ಬಿಜೆಪಿ ನಾಯಕರು, ರಾಷ್ಟ್ರೀಯ ಅಧ್ಯಕ್ಷರನ್ನೇ ಕರೆತರುತ್ತಿದ್ದಾರೆ.
ಜಗದೀಶ್ ಶೆಟ್ಟರ್ ಪರಿಣಾಮ ಪಕ್ಷದ ಮೇಲೆ ಪರಿಣಾಮ ಬೀರದಂತೆ ಬಿಜೆಪಿ ತೆರೆಮರೆಯಲ್ಲಿ ಯೋಜನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಅಂದ್ರೆ ಏಪ್ರಿಲ್18 ರಂದು ಸಾಯಂಕಾಲ ಜೆ.ಪಿ.ನಡ್ಡಾ(jp nadda) ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಎರಡು ದಿನಗಳ ಕಾಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹುಬ್ಬಳ್ಳಿಯಲ್ಲಿಯೇ ಠಿಕಾಣಿ ಹೂಡಲಿದ್ದು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಡೆಯುವ ಎರಡು ಪ್ರಮುಖ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಕಾರ್ಯಕರ್ತರ ಜೊತೆಗೆ ಸಂವಾದ ನಡೆಸಲಿದ್ದಾರೆ. ಈ ಮೂಲಕ ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಹುಬ್ಬಳ್ಳಿ-ಸೆಂಟ್ರಲ್ ಬಿಜೆಪಿ ಮುಖಂಡರು ಹಾಗೂ ನಾಯಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರ ರೂಪಿಸಿದ್ದಾರೆ.
ಇನ್ನು ನಾಡಿದ್ದು(ಏಪ್ರಿಲ್ 19)ರಂದಯ ಹುಬ್ಬಳ್ಳಿಯ ಮೂರು ಸಾವಿರ ಮಠ, ಸಿದ್ದಾರೂಡರ ಮಠ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ನಡ್ಡಾ ಹುಬ್ಬಳ್ಳಿಂದ ಶಿಗ್ಗಾಂವಿಗೆ ತೆರಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.
ಒಟ್ಟಿನಲ್ಲಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮರು ದಿನವೇ ಹುಬ್ಬಳ್ಳಿಗೆ ಜೆಪಿ ನಡ್ಡಾ ಎಂಟ್ರಿ ಕೊಡುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲೇ ಬಿಜೆಪಿ ಕಾರ್ಯಕರ್ತರ ಸಭೆ ಮಾಡುತ್ತಿರುವುದು ಗಮನಿಸಿದರೆ ಶೆಟ್ಟರ್ ಅವರನ್ನು ಟಾರ್ಗೆಟ್ ಮಾಡಿದಂತಿದೆ.
ಇನ್ನಷ್ಟು ಕರ್ನಾಟಕ ವಿಧಾನಸಭಾ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ