ಪುಣೆ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಜನರನ್ನು ಲೂಟಿ ಮಾಡುತ್ತಿದೆ. ಜನರ ಹಣವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಪುಣೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಿಎಂ ನರೇಂದ್ರ ಮೋದಿ, ಮಹಾರಾಷ್ಟ್ರ ಮತ್ತು ಪುಣೆಯಲ್ಲಿ “ಡಬಲ್ ಇಂಜಿನ್” ಸರ್ಕಾರವು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು. ಬಿಜೆಪಿ ಯಾವಾಗಲೂ ಮಧ್ಯಮ ವರ್ಗಕ್ಕೆ ಆದ್ಯತೆ ನೀಡುತ್ತದೆ ಎಂದು ಹೇಳಿದರು.
ಮಹಾರಾಷ್ಟ್ರವನ್ನು ಉಳಿಸಲು ಕಾಂಗ್ರೆಸ್ ಅನ್ನು ದೂರ ಇಡಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಸುಳ್ಳು ಹೇಳಿ ಜನರಿಗೆ ಮತ ನೀಡುವಂತೆ ಒತ್ತಾಯಿಸಿತು. ಬಳಿಕ ಗೆದ್ದು ಕಾಂಗ್ರೆಸ್ ಸರ್ಕಾರ ರಚಿಸಿತು. ಆದರೆ, ಕಾಂಗ್ರೆಸ್ಗೆ ತನ್ನ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಅದರ ಬದಲಿಗೆ, ಕಾಂಗ್ರೆಸ್ ಕರ್ನಾಟಕದಲ್ಲಿ ಸುಲಿಗೆ ಪ್ರಚಾರ ನಡೆಸುತ್ತಿದೆ. ಕರ್ನಾಟಕದಲ್ಲಿ ದಿನಕ್ಕೊಂದು ಹಗರಣಗಳು ಬಯಲಾಗುತ್ತಿವೆ. ಕಾಂಗ್ರೆಸ್ ಹಗಲು ಹೊತ್ತಿನಲ್ಲಿ ಜನರನ್ನು ಲೂಟಿ ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ದೂರವಿಡುವ ಜವಾಬ್ದಾರಿ ನಿಮ್ಮದಿ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ರಝಾಕಾರರು ಹಚ್ಚಿದ ಬೆಂಕಿಯಿಂದ ನಿಮ್ಮ ಕುಟುಂಬವೇ ನಾಶವಾಗಿದ್ದನ್ನು ಮರೆಯಬೇಡಿ; ಖರ್ಗೆಗೆ ನೆನಪಿಸಿದ ಯೋಗಿ
“ಪುಣೆಯ ಜನರನ್ನು ಸಬಲೀಕರಣಗೊಳಿಸಲು ಮೂಲಸೌಕರ್ಯ, ಹೂಡಿಕೆ ಮತ್ತು ಕೈಗಾರಿಕೆ ಈ ಮೂರೂ ಅಗತ್ಯವಿದೆ. ನಾವು ಅದರ ಪ್ರತಿಯೊಂದು ಅಂಶದಲ್ಲೂ ಕೆಲಸ ಮಾಡಿದ್ದೇವೆ. ಕಳೆದ 10 ವರ್ಷಗಳಲ್ಲಿ ಎಫ್‌ಡಿಐ ಗಣನೀಯವಾಗಿ ಹೆಚ್ಚಾಗಿದೆ. ಹೂಡಿಕೆ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ಪುಣೆ ಯಾವಾಗಲೂ ಬಿಜೆಪಿಯ ಸಿದ್ಧಾಂತ ಮತ್ತು ದೃಷ್ಟಿಕೋನವನ್ನು ಬೆಂಬಲಿಸುತ್ತದೆ. ಈ ವಿಶ್ವಾಸಕ್ಕಾಗಿ ಪುಣೆಯ ಜನರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಹೊಸ ಮಹಾಯುತಿ ಸರ್ಕಾರವು ಪುಣೆ ಮತ್ತು ಮಹಾರಾಷ್ಟ್ರದ ಅಭಿವೃದ್ಧಿಗೆ ವೇಗವಾಗಿ ಕೆಲಸ ಮಾಡುತ್ತದೆ ಎಂದು ನಿಮಗೆ ಭರವಸೆ ನೀಡಲು ಬಂದಿದ್ದೇನೆ ಎಂದು ಮೋದಿ ಭಾಷಣದಲ್ಲಿ ಹೇಳಿದ್ದಾರೆ.
Coming to Pune is always special! The energy here is unmatched. Addressing a massive rally. https://t.co/SF8UwXJECo
— Narendra Modi (@narendramodi) November 12, 2024
ಪ್ರಧಾನಿ ಮೋದಿ ಇಂದು ಮಹಾರಾಷ್ಟ್ರದಲ್ಲಿ ಮೂರು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ಪುಣೆ ಹೊರತಾಗಿ ಚಿಮೂರ್ ಮತ್ತು ಸೊಲ್ಲಾಪುರದಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 20ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ