ಗೋವಾ ವಿಧಾನಸಭೆ ಚುನಾವಣೆ: ಬಿಜೆಪಿ ತೊರೆದ ಮನೋಹರ್ ಪರಿಕ್ಕರ್ ಪುತ್ರ, ಪಣಜಿಯಿಂದ ಸ್ಪರ್ಧಿಸುವುದಾಗಿ ಘೋಷಣೆ

ಗೋವಾ ವಿಧಾನಸಭೆ ಚುನಾವಣೆ: ಬಿಜೆಪಿ ತೊರೆದ ಮನೋಹರ್ ಪರಿಕ್ಕರ್ ಪುತ್ರ, ಪಣಜಿಯಿಂದ ಸ್ಪರ್ಧಿಸುವುದಾಗಿ ಘೋಷಣೆ
ಉತ್ಪಾಲ್ ಪರಿಕ್ಕರ್​

Utpal Parrikar: ಮನೋಹರ್​ ಪರಿಕ್ಕರ್ ಅವರು ಎರಡು ದಶಕಗಳ ಕಾಲ ಪಣಜಿ ಕ್ಷೇತ್ರವನ್ನು ಪ್ರತಿನಿಧಿಸಿದರು. ಈ ಅವಧಿಯಲ್ಲಿ ಅಲ್ಲಿನ ಜನರೊಂದಿಗೆ ಒಂದು ಆತ್ಮೀಯ ಸಂಬಂಧ ಬೆಳೆಸಿಕೊಂಡರು. ಅದನ್ನು ನಾನು ಮುಂದುವರಿಸಿಕೊಂಡು ಬಂದೆ ಎಂದು ಉತ್ಪಾಲ್ ಪರಿಕ್ಕರ್​ ತಿಳಿಸಿದ್ದಾರೆ.

TV9kannada Web Team

| Edited By: Lakshmi Hegde

Jan 22, 2022 | 11:36 AM

ಗೋವಾ ಮಾಜಿ ಮುಖ್ಯಮಂತ್ರಿ, ಕೇಂದ್ರ ರಕ್ಷಣಾ ಇಲಾಖೆ ಮಾಜಿ ಸಚಿವರಾಗಿದ್ದ ಮನೋಹರ್ ಪರಿಕ್ಕರ್​ ಪುತ್ರ ಉತ್ಪಾಲ್​ ಪರಿಕ್ಕರ್​ ಬಿಜೆಪಿಯನ್ನು ತೊರೆದಿದ್ದಾರೆ. ಅಷ್ಟೇ ಅಲ್ಲ, ಪಣಜಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಗೋವಾ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ ಅದರಲ್ಲಿ ಉತ್ಪಾಲ್ ಪರಿಕ್ಕರ್​ ಹೆಸರಿಲ್ಲ. ಹಾಗೇ, ಉತ್ಪಾಲ್​ ಪರಿಕ್ಕರ್​ಗೆ ಟಿಕೆಟ್​ ನೀಡಲು ಬಿಜೆಪಿ ನಿರಾಕರಣೆ ಮಾಡಿದ ಬೆನ್ನಲ್ಲೇ ಅವರಿಗೆ ಅರವಿಂದ್ ಕೇಜ್ರಿವಾಲ್​ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ್ದರು. ಆದರೆ ಉತ್ಪಾಲ್​ ಪರಿಕ್ಕರ್​ ಸದ್ಯ ತಾವು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. 

2019ರಲ್ಲಿ ನಡೆದ ಗೋವಾ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ (ಮನೋಹರ್ ಪರಿಕ್ಕರ್​ ನಿಧನದ ನಂತರ ನಡೆದ ಚುನಾವಣೆ)ನಾನು ಕೆಲಸ ಮಾಡಿದ್ದೇನೆ. ಈ ಪಕ್ಷದಲ್ಲಿ ಕಳೆದ 30ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರ ಬೆಂಬಲ ನನಗೆ ಇದೆ ಎಂಬುದನ್ನು ಬಿಜೆಪಿ ವರಿಷ್ಠರಿಗೆ ಮನವರಿಕೆ ಮಾಡಲು ಕೈಲಾದಷ್ಟರ ಮಟ್ಟಿಗೆ ಪ್ರಯತ್ನ ಪಟ್ಟಿದ್ದೇನೆ. ಇಲ್ಲಿನ ಕಾರ್ಯಕರ್ತರು ಅಂದು ಪಕ್ಷ ಕಟ್ಟಲು ನನ್ನ ತಂದೆಯವರೊಂದಿಗೆ ಶ್ರಮಿಸಿದ್ದರು. ಅವರೆಲ್ಲರೂ ಈಗ ನನ್ನ ಜೊತೆ ಇದ್ದು, ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಪಣಜಿಯ ಜನರ ಬೆಂಬಲವೂ ನನಗಿತ್ತು. ಹಾಗಿದ್ದಾಗ್ಯೂ ಪಣಜಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ನನಗೆ ಟಿಕೆಟ್​ ಸಿಗಲಿಲ್ಲ ಎಂದು ಉತ್ಪಾಲ್​ ಪರಿಕ್ಕರ್​ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಬಿಜೆಪಿಗೆ ರಾಜೀನಾಮೆ ನೀಡುವಾಗ ಈ ಹೇಳಿಕೆಗಳನ್ನು ನೀಡಿದ್ದಾರೆ.

ಮನೋಹರ್​ ಪರಿಕ್ಕರ್ ಅವರು ಎರಡು ದಶಕಗಳ ಕಾಲ ಪಣಜಿ ಕ್ಷೇತ್ರವನ್ನು ಪ್ರತಿನಿಧಿಸಿದರು. ಈ ಅವಧಿಯಲ್ಲಿ ಅಲ್ಲಿನ ಜನರೊಂದಿಗೆ ಒಂದು ಆತ್ಮೀಯ ಸಂಬಂಧ ಬೆಳೆಸಿಕೊಂಡರು. ಅದನ್ನು ನಾನು ಮುಂದುವರಿಸಿಕೊಂಡು ಬಂದೆ. ಮನೋಹರ್ ಪರಿಕ್ಕರ್​ ಎಂಬ ಒಂದೇ ಕಾರಣಕ್ಕೆ ಜನರು ಅವರಿಗೆ ಮತ ಹಾಕಲಿಲ್ಲ. ನನ್ನ ತಂದೆ ಒಂದಷ್ಟು ಮೌಲ್ಯಗಳನ್ನು ಅಳವಡಿಸಿಕೊಂಡು, ಅದರಂತೆ ನಡೆದರು. ಹಾಗಾಗಿಯೇ ಜನರ ಪ್ರೀತಿ ಗಳಿಸಿದ್ದರು. ಆ ಮೌಲ್ಯಗಳನ್ನು ಈಗ ನಾನು ಗೌರವಿಸಬೇಕಾಗಿದೆ. ಎರಡೇ ವರ್ಷಗಳ ಹಿಂದೆ ಬಿಜೆಪಿ ಪಕ್ಷಕ್ಕೆ ಬಂದವರಿಗೆ ಈಗ ಪಣಜಿಯಿಂದ ಟಿಕೆಟ್​ ನೀಡಲಾಗಿದೆ. ಇಂಥ ಸಂದರ್ಭದಲ್ಲಿ ನನಗೆ ನನ್ನ ತಂದೆಯ ಮೌಲ್ಯಗಳ ದಾರಿಯಲ್ಲಿ ನಡೆಯಬೇಕು ಎಂದೇ ಅನ್ನಿಸುತ್ತಿದೆ ಎಂದು ಉತ್ಪಾಲ್​ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ

Follow us on

Related Stories

Most Read Stories

Click on your DTH Provider to Add TV9 Kannada