ಗಾಂಧಿನಗರ: ಬಹುನಿರೀಕ್ಷಿತ ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ (Gujarat Assembly elections Result) ಕ್ಷಣಗಣನೆ ಆರಂಭವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮುಂದಿನ ಹೆಜ್ಜೆಯ ಬಗ್ಗೆ ಚಿಂತನೆ ನಡೆಸುತ್ತಿವೆ. ಫಲಿತಾಂಶ ಘೋಷಣೆಗೆ ಮೊದಲೇ ಬಿಜೆಪಿ ವಿಜಯೋತ್ಸವಕ್ಕೆ ಸಿದ್ಧತೆ ಶುರು ಮಾಡಿದೆ. ಗೆದ್ದ ಶಾಸಕರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆಯಬಹುದು ಎಂಬ ಭೀತಿಯಿಂದ ಕಾಂಗ್ರೆಸ್ ಪಕ್ಷವು ವಿಜೇತರನ್ನು ರಾಜಸ್ಥಾನಕ್ಕೆ ಕಳುಹಿಸಲು ಮುಂದಾಗಿದೆ. ರಾಜಧಾನಿ ಗಾಂಧಿನಗರದಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವಕ್ಕೆ ಚುರುಕಿನ ಸಿದ್ಧತೆ ನಡೆಯುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ನ ಗುಜರಾತ್ ಘಟಕದ ಉಸ್ತುವಾರಿ ನಾಯಕ ರಘು ಶರ್ಮಾ ಗೆದ್ದ ಶಾಸಕರನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎನ್ನುವ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ.
ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚೇನೂ ಪ್ರಗತಿ ಸಾಧ್ಯವಾಗಲಾರದು ಎಂದು ಮನಗಂಡಿರುವ ಆಮ್ ಆದ್ಮಿ ಪಕ್ಷವು ಫಲಿತಾಂಶ ಘೋಷಣೆಗೆ ಮೊದಲೇ ಮತದಾರರಿಗೆ ಕೃತಜ್ಞತೆ ಸಲ್ಲಿಸಿದೆ. ಆಪ್ ಪಕ್ಷದ ಗುಜರಾತ್ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಮಾತನಾಡಿ, ‘ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕುವ ಮೂಲಕ ರಾಷ್ಟ್ರೀಯ ಪಕ್ಷದ ಸ್ಥಾನಮಾನ ತಂದುಕೊಟ್ಟಿದ್ದೀರಿ. ಇದಕ್ಕಾಗಿ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.
ಮತದಾನದ ಪ್ರಮಾಣ ಕಡಿಮೆಯಾಗಿರುವ ಕ್ಷೇತ್ರಗಳ ಉಸ್ತುವಾರಿಗಳ ಸಭೆಗಳನ್ನು ಬಿಜೆಪಿ ನಾಯಕರು ಈಗಾಗಲೇ ನಡೆಸಿದ್ದು, ಮತದಾನದ ಪ್ರಮಾಣ ಕಡಿಮೆಯಾಗಲು ಏನು ಕಾರಣ? ಫಲಿತಾಂಶದ ಮೇಲೆ ಅದರ ಪರಿಣಾಮ ಏನಾಗಬಹುದು ಎಂದು ತಿಳಿಯುವ ಪ್ರಯತ್ನ ಮಾಡಿದ್ದಾರೆ.
ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೀಶ್ ಠಾಕೂರ್ ಮತ್ತು ನಾಯಕರಾದ ರಘು ಶರ್ಮಾ ಅವರು ಪಕ್ಷವು ಸ್ಪರ್ಧಿಸಿದ್ದ ಎಲ್ಲ 179 ಕ್ಷೇತ್ರಗಳ ಸ್ಥಿತಿಗತಿ ಕುರಿತು ಪರಾಮರ್ಶೆ ನಡೆಸಿದರು. ಗೆಲುವು ಸಾಧಿಸಿದ ಶಾಸಕರನ್ನು ಸೆಳೆಯಲು ಬಿಜೆಪಿ ಆಪರೇಷನ್ ಕಮಲ ಮಾಡಬಹುದು ಎಂಬ ಭೀತಿಯನ್ನು ಸಭೆಯಲ್ಲಿ ಕೆಲವರು ತೋಡಿಕೊಂಡ ಹಿನ್ನೆಲೆಯಲ್ಲಿ, ಶಾಸಕರನ್ನು ಪಕ್ಕದ ರಾಜಸ್ಥಾನಕ್ಕೆ ಕಳುಹಿಸುವ ಬಗ್ಗೆಯೂ ಸಭೆಯಲ್ಲಿ ಚಿಂತನೆ ನಡೆಯಿತು.
182 ಸದಸ್ಯ ಬಲದ ಗುಜರಾತ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು 95ರಿಂದ 105 ಸ್ಥಾನ ಗಳಿಸಬಹುದು ಎಂಬ ಕಾಂಗ್ರೆಸ್ ವಕ್ತಾರ ಹೇಮಂಗ್ ರಾವಲ್ ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಯು 80 ಕ್ಷೇತ್ರಗಳಿಗೆ ಸೀಮಿತವಾಗಬಹುದು ಎಂದು ಅವರು ಹೇಳಿದ್ದಾರೆ. ಬಹುತೇಕ ಮತಗಟ್ಟೆ ಸಮೀಕ್ಷೆಗಳು ಗುಜರಾತ್ನಲ್ಲಿ ಬಿಜೆಪಿ ಮುನ್ನಡೆಯ ಭವಿಷ್ಯ ನುಡಿದಿದ್ದು, ಬಿಜೆಪಿ ಈಗಾಗಲೇ ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: Assembly Elections Results 2022 LIVE: ಗುಜರಾತ್ನಲ್ಲಿ ಮತ ಎಣಿಕೆ ಆರಂಭ; ಅಂಚೆ ಮತಗಳಲ್ಲಿ ಬಿಜೆಪಿಗೆ ಮುನ್ನಡೆ
Published On - 8:13 am, Thu, 8 December 22