Gujarat Election Results 2022: ‘ಗುಜರಾತ್‌ ಮಾಡೆಲ್‌’ಗೆ ಜನರಿಂದ ಅಧಿಕೃತ ಮುದ್ರೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅಭಿಮತ

Gujarat Model: ಪ್ರಧಾನಿ ಮೋದಿ ನಾಯಕತ್ವ, ದೇಶದ ಅಭಿವೃದ್ಧಿಗೆ ಬಿಜೆಪಿ ಪ್ರಸ್ತುತಪಡಿಸಿದ 'ಗುಜರಾತ್‌ ಮಾಡೆಲ್‌'ನ್ನು ಜನ ಮೆಚ್ಚಿಕೊಂಡಿದ್ದಾರೆ. ಇದೇ ಕಾರಣಕ್ಕೆ 27 ವರ್ಷಗಳ ಬಳಿಕ ಬಿಜೆಪಿ ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎಂಬ ವಿಶ್ಲೇಷಣೆಗಳೆಲ್ಲಾ ತಲೆ ಕೆಳಗಾಗಿದೆ -ಪ್ರಲ್ಹಾದ್‌ ಜೋಶಿ

Gujarat Election Results 2022: 'ಗುಜರಾತ್‌ ಮಾಡೆಲ್‌'ಗೆ ಜನರಿಂದ ಅಧಿಕೃತ ಮುದ್ರೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅಭಿಮತ
'ಗುಜರಾತ್‌ ಮಾಡೆಲ್‌'ಗೆ ಜನರಿಂದ ಅಧಿಕೃತ ಮುದ್ರೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅಭಿಮತ
Follow us
| Updated By: ಸಾಧು ಶ್ರೀನಾಥ್​

Updated on:Dec 08, 2022 | 3:21 PM

ನವದೆಹಲಿ: ಗುಜರಾತ್‌ನಲ್ಲಿ ಪಕ್ಷದ ಜಯ ಖಚಿತವಾಗುತ್ತಿದ್ದಂತೆ ಬಿಜೆಪಿ ನಾಯಕರು ಈ ಗೆಲುವನ್ನು ಐತಿಹಾಸಿಕ ಎಂದು ಬಣ್ಣಿಸಲಾರಂಭಿಸಿದ್ದಾರೆ. ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi), ಇದು ‘ಗುಜರಾತ್‌ ಮಾಡೆಲ್‌’ಗೆ (Gujarat Model) ಸಂದ ಜಯ ಎಂದು ಬಣ್ಣಿಸಿದ್ಧಾರೆ. ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಲ್ಹಾದ್‌ ಜೋಶಿ, ‘ಗುಜರಾತ್‌ ಮಾಡೆಲ್‌’ಗೆ ಜನರಿಂದ ಅಧಿಕೃತ ಮುದ್ರೆ ದೊರೆತಿದೆ. ಈ ಐತಿಹಾಸಿಕ ಗೆಲುವನ್ನು (Gujarat Assembly Election Results) ನಮಗೆ ವರದಾನವಾಗಿ ನೀಡಿರುವ ಗುಜರಾತ್‌ ಜನರಿಗೆ ನಾನು ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದು ನುಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ, ದೇಶದ ಅಭಿವೃದ್ಧಿಗೆ ಬಿಜೆಪಿ ಪ್ರಸ್ತುತಪಡಿಸಿದ ‘ಗುಜರಾತ್‌ ಮಾಡೆಲ್‌’ನ್ನು ಜನರು ಮೆಚ್ಚಿಕೊಂಡಿದ್ದಾರೆ. ಇದೇ ಕಾರಣಕ್ಕೆ 27 ವರ್ಷಗಳ ಬಳಿಕ ಬಿಜೆಪಿ ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎಂಬ ವಿಶ್ಲೇಷಣೆಗಳೆಲ್ಲಾ ತಲೆ ಕೆಳಗಾಗಿದೆ ಎಂದು ಪ್ರಲ್ಹಾದ್‌ ಜೋಶಿ ಹೇಳಿದರು.

ಅದೇ ರೀತಿ ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಅಲ್ಲಿಯೂ ಪಕ್ಷ ಸ್ಪಷ್ಟ ಬಹುಮತ ಗಳಿಸುವ ನಿರೀಕ್ಷೆ ಇದೆ. ಏನೇ ಆದರೂ ಅಂತಿಮ ಫಲಿತಾಂಶ ಬಂದ ಬಳಿಕಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಪ್ರಲ್ಹಾದ್‌ ಜೋಶಿ ಸ್ಪಷ್ಟಪಡಿಸಿದರು.

ಸದ್ಯದ ಅಂಕಿ ಅಂಶಗಳ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿಯು 158 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಕಳೆದ ಬಾರಿಗಿಂತ 59 ಹೆಚ್ಚಿನ ಕ್ಷೇತ್ರಗಳನ್ನು ಒಳಗೊಂಡಿದೆ ಎಂಬುದು ವಿಶೇಷ.

ಅದೇ ರೀತಿ ಕಾಂಗ್ರೆಸ್‌ ಕೇವಲ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದ್ದು, ಇದು ಕಳೆದ ಬಾರಿಗಿಂತ 59 ಸೀಟು ಕಡಿಮೆ ಎಂಬುದು ಇಲ್ಲಿ ಉಲ್ಲೇಖನೀಯ. ಆದಾಗ್ಯೂ, ಕಾಂಗ್ರೆಸ್‌ ಗುಜರಾತ್‌ನಲ್ಲಿ ಎರಡನೇ ಸ್ಥಾನದಲ್ಲಿದೆ ಎಂಬುದು ಪಕ್ಷದ ಪಾಲಿಗೆ ಸಮಾಧಾನಕರ ಸಂಗತಿಯಾಗಿದೆ.

ಇದನ್ನೂ ಓದಿ: Gujarat Election Results 2022: ಗುಜರಾತ್ ಸಿಎಂ ಭೂಪೇಂದ್ರ ಪಟೇಲ್​ಗೆ 50,000 ಮತಗಳ ಅಂತರದ ಭರ್ಜರಿ ಗೆಲುವು

ಇನ್ನು ಈ ಬಾರಿಯ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಆಮ್‌ ಆದ್ಮಿ ಪಕ್ಷ(ಆಪ್‌) ಸದ್ಯ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಬಾರಿ ಶೂನ್ಯ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಆಪ್‌, ಈ ಬಾರಿ ಗುಜರಾತ್‌ನಲ್ಲಿ ಕೆಲವು ಕ್ಷೇತ್ರಗಳಲ್ಲಿ ಜಯ ಸಾಧಿಸಲಿರುವುದು ಖಚಿತ ಎನ್ನಲಾಗಿದೆ.

ಒಟ್ಟಿನಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಐತಿಹಾಸಿಕ ದಿಗ್ವಿಜಯ ದಾಖಲಿಸುತ್ತಿರುವುದು ಗುಜರಾತ್ ಮಾಡೆಲ್ ಸಿಕ್ಕ ಜನಮನ್ನಣೆ ಅಂತ ಪ್ರಲ್ಹಾದ ಜೋಶಿಯವರು ವ್ಯಾಖ್ಯಾನಿಸಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Thu, 8 December 22