ಗುಜರಾತಿನಲ್ಲಿ ಚುನಾವಣೆ (Gujarat Election 2022) ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಎಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿವೆ. ಆ ಪೈಕಿ ರಾಜ್ಯದಲ್ಲಿ ಎಲ್ಲರ ಕಣ್ಣು ನೆಟ್ಟಿರುವ ಕ್ಷೇತ್ರವೆಂದರೆ ಜಾಮ್‌ನಗರ ಉತ್ತರ ಕ್ಷೇತ್ರ(Jamnagar North). ಈ ಕ್ಷೇತ್ರದಲ್ಲಿ ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ (Ravindra Jadeja) ಕುಟುಂಬದ ನಡುವೆ ರಾಜಕೀಯ ಪೈಪೋಟಿ ನಡೆಯಲಿದೆ. ಒಂದೆಡೆ ಅವರ ಪತ್ನಿ ರಿವಾಬಾ ಜಡೇಜಾ ಬಿಜೆಪಿ ಟಿಕೆಟಿನಲ್ಲಿ ಸ್ಪರ್ಧಿಸುವ ಸೂಚನೆಗಳೂ ಇವೆ. ಮತ್ತೊಂದೆಡೆ, ಅವರ ಸಹೋದರಿ ನೈನಾ ಜಡೇಜಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸೂಚನೆ ಇದೆ. ಇದರಿಂದ ಸಹಜವಾಗಿಯೇ ಈಗ ರಾಜಕೀಯ ಪಕ್ಷಗಳ ಹಾಗೂ ಜನರ ಗಮನ ಈ ಕ್ಷೇತ್ರದತ್ತ ನೆಟ್ಟಿದೆ. ರಿವಾಬಾ 2019 ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡರು. ಆ ನಂತರ ಅವರ ಸಹೋದರಿ ನೈನಾ ಕಾಂಗ್ರೆಸ್ ಸೇರಿದ್ದರು. ಜಡೇಜಾ ಅವರ ಸಹೋದರಿ ನೈನಾ ಜಾಮ್‌ನಗರದಲ್ಲಿ ಚಿರಪರಿಚಿತರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಅತ್ಯಂತ ಕ್ರಿಯಾಶೀಲ ನಾಯಕಿ. ಧರ್ಮೇಂದ್ರ ಸಿಂಗ್ ಜಡೇಜಾ ಪ್ರಸ್ತುತ ಜಾಮ್‌ನಗರ ಉತ್ತರದಿಂದ ಬಿಜೆಪಿ ಶಾಸಕರಾಗಿದ್ದಾರೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ರಿಬಾಬಾಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಧರ್ಮೇಂದ್ರ ಸಿಂಗ್ ಜಡೇಜಾ ಅವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಮತ್ತೆ ಟಿಕೆಟ್ ಸಿಗದಿರುವ ಸಾಧ್ಯತೆ ಹೆಚ್ಚಿದೆ. ಇದೀಗ ಈ ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ರೇಸ್‌ನಲ್ಲಿ ರಿವಾಬಾ ಮುಂದಿದ್ದಾರೆ. ಯಾಕೆಂದರೆ ಸೆಲೆಬ್ರಿಟಿಗಳ ಪತ್ನಿ ಎಂಬುದಲ್ಲದೆ ಮಹಿಳಾ ನಾಯಕಿ ಎಂಬ ಖ್ಯಾತಿಯೂ ಆಕೆಗಿದೆ.
ಬಿಜೆಪಿ ಮೂಲಗಳ ಪ್ರಕಾರ, ರಿವಾಬಾ ಅವರ ಚಟುವಟಿಕೆಯು ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಾರೆ ಎಂದು ತೋರಿಸುತ್ತದೆ. ರಿವಾಬಾ ರಾಜ್‌ಕೋಟ್ ನಿವಾಸಿ. ಆಕೆಯ ತಂದೆ ದೊಡ್ಡ ಕೈಗಾರಿಕೋದ್ಯಮಿ. ಅವರು ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ವೇಳೆ ಬಿಜೆಪಿಯ ಚುನಾವಣಾ ತಂತ್ರದ ಮೇಲೆ ಕಾಂಗ್ರೆಸ್ ಕೂಡ ಕಣ್ಣಿಟ್ಟಿದೆ. ಬಿಜೆಪಿ ರಿವಾಬಾ ಅವರನ್ನು ನಾಮನಿರ್ದೇಶನ ಮಾಡಿದರೆ, ಕಾಂಗ್ರೆಸ್ ಅವರ ವಿರುದ್ಧ ನೈನಾ ಅವರನ್ನು ಕಣಕ್ಕಿಳಿಸಬಹುದು ಎಂದು ರಾಜಕೀಯ ವಲಯಗಳು ನಂಬುತ್ತವೆ. ನೈನಾಗೆ ಒಳ್ಳೆಯ ಹೆಸರು ಕೂಡ ಇದೆ. ನೈನಾಗೆ ಹೋಟೆಲ್ ಇದೆ. ಒಂದು ವೇಳೆ ಜಡೇಜಾ ಕುಟುಂಬದ ಸದಸ್ಯರು ಜಾಮ್‌ನಗರ ಉತ್ತರ ಕ್ಷೇತ್ರದಲ್ಲಿ ಕಣಕ್ಕಿಳಿದರೆ ಜಡೇಜಾ ಮತ ಯಾರಿಗೆ ಹಾಕ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯೇ ಹೌದು.