ಕೊವಿಡ್ ಲಸಿಕೆ ಬಗ್ಗೆ ಟೀಕಿಸಿದ್ದ ರಾಹುಲ್ ಗಾಂಧಿ ಗುಟ್ಟಾಗಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ರು; ಅಮಿತ್ ಶಾ ಗಂಭೀರ ಆರೋಪ

| Updated By: ಸುಷ್ಮಾ ಚಕ್ರೆ

Updated on: Nov 30, 2022 | 11:22 AM

Gujarat Elections 2022: ಕೊವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಜನರ ದಾರಿತಪ್ಪಿಸಲು ಕೊವಿಡ್ -19 ಲಸಿಕೆಯನ್ನು 'ಮೋದಿ ಲಸಿಕೆ' ಎಂದು ಹೇಳಿದ್ದ ರಾಹುಲ್ ಗಾಂಧಿಯನ್ನು ಕೇಂದ್ರ ಸಚಿವ ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊವಿಡ್ ಲಸಿಕೆ ಬಗ್ಗೆ ಟೀಕಿಸಿದ್ದ ರಾಹುಲ್ ಗಾಂಧಿ ಗುಟ್ಟಾಗಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ರು; ಅಮಿತ್ ಶಾ ಗಂಭೀರ ಆರೋಪ
ಅಮಿತ್ ಶಾ (ಸಂಗ್ರಹ ಚಿತ್ರ)
Follow us on

ಅಹಮದಾಬಾದ್: 2022ರ ಗುಜರಾತ್ ವಿಧಾನಸಭೆ (Gujarat Assembly Polls 2022) ಚುನಾವಣೆಯ ತೀವ್ರ ಪ್ರಚಾರದ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮತ್ತೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೊರೊನಾ ಅಟ್ಟಹಾಸದ ಸಂದರ್ಭದಲ್ಲಿ ಕೊವಿಡ್ ಲಸಿಕೆಯನ್ನು ಮೋದಿ ಲಸಿಕೆ ಎಂದು ಕಾಂಗ್ರೆಸ್ ಟೀಕಿಸಿತ್ತು. ಕೊರೊನಾ ಲಸಿಕೆಯನ್ನು (Covid Vaccine) ಹಾಕಿಸಿಕೊಳ್ಳಬೇಡಿ ಎಂದು ಜನರಿಗೆ ಎಚ್ಚರಿಕೆ ನೀಡಿದ್ದ ರಾಹುಲ್ ಗಾಂಧಿ (Rahul Gandhi) ಗುಟ್ಟಾಗಿ ಕೊವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದರು ಎಂದು ಅಮಿತ್ ಶಾ ಗಂಭೀರ ಆರೋಪ ಮಾಡಿದ್ದಾರೆ.

ಕೊವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಜನರ ದಾರಿತಪ್ಪಿಸಲು ಕೊವಿಡ್ -19 ಲಸಿಕೆಯನ್ನು ‘ಮೋದಿ ಲಸಿಕೆ’ ಎಂದು ಹೇಳಿದ್ದ ರಾಹುಲ್ ಗಾಂಧಿಯನ್ನು ಕೇಂದ್ರ ಸಚಿವ ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ. ಗುಜರಾತ್‌ನಲ್ಲಿ ಚುನಾವಣೆ ನಡೆಯಲಿರುವ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಮಸೂದೆಯನ್ನು ಸಂಸತ್​ನಲ್ಲಿ ಮಂಡಿಸಿದಾಗ ವಿರೋಧ ಪಕ್ಷದ ನಾಯಕರು ಕಾಗೆಗಳಂತೆ ಕೂಗಿದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗುಜರಾತ್​ನ ಜನ ಈ ಬಾರಿ ಎಲ್ಲ ದಾಖಲೆಯನ್ನೂ ಮುರಿಯುತ್ತಾರೆ; ಸೂರತ್ ರೋಡ್​​ಶೋನಲ್ಲಿ ಪ್ರಧಾನಿ ಮೋದಿ

ಕೊರೊನಾ ಸಮಯದಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ, ಟ್ವೀಟ್ ಮೂಲಕ ಕೊವಿಡ್ ಲಸಿಕೆಯನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಅದು ಮೋದಿ ಲಸಿಕೆ ಮತ್ತು ಅದರಿಂದ ನಿಮಗೆ ಹಾನಿಯಾಗುತ್ತದೆ ಎಂದು ಹೇಳುವ ಮೂಲಕ ಜನರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಅದೃಷ್ಟವಶಾತ್, ಯಾರೂ ರಾಹುಲ್ ಗಾಂಧಿಯ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಕೊರೊನಾ ಸೊಂಕಿನ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಎಲ್ಲರೂ ಕೋವಿಡ್ -19 ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ರಾಹುಲ್ ಗಾಂಧಿ ರಹಸ್ಯವಾಗಿ ಕೊವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದರು ಎಂದು ಅಮಿತ್ ಶಾ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯದಲ್ಲಿ ನಿರತರಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಗುಜರಾತ್​ನ ಜನರನ್ನು ಸುರಕ್ಷಿತವಾಗಿಡಲು ಶ್ರಮಿಸಿದರು ”ಎಂದು ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ: ಗುಜರಾತ್​ನಲ್ಲಿ ಕಾಂಗ್ರೆಸ್ ಚುನಾವಣಾ ರ‍್ಯಾಲಿ ವೇಳೆ ನುಗ್ಗಿದ ಗೂಳಿ; ಬಿಜೆಪಿಯದ್ದೇ ಕೈವಾಡ ಎಂದ ಗೆಹ್ಲೋಟ್

“ಗುಜರಾತ್​ನಲ್ಲಿ ಕಾಂಗ್ರೆಸ್ ನಾಯಕರು ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡಲಿಲ್ಲ. ಬಿಜೆಪಿ ಸರ್ಕಾರವು ಗುಜರಾತ್‌ನಲ್ಲಿ ಗಲಭೆಗಳನ್ನು ನಿರ್ಮೂಲನೆ ಮಾಡಿತು. ಅಂತಹ ಗಲಭೆಗಳು ಹಿಂದೂಗಳಿಗೆ ಅಥವಾ ಮುಸ್ಲಿಮರಿಗೆ ಪ್ರಯೋಜನವಾಗುವುದಿಲ್ಲ. ಅಂತಹ ಹಿಂಸಾಚಾರವು ಅಭಿವೃದ್ಧಿಗೆ ಅಡ್ಡಿಪಡಿಸುತ್ತದೆ. ಗುಜರಾತ್​ನಲ್ಲಿ ಬಿಜೆಪಿ ಶಾಂತಿಯನ್ನು ಸ್ಥಾಪಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ