ಹಿಮಾಚಲ ಪ್ರದೇಶದ (Himachal Pradesh) 15 ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಮಾಜಿ ರಾಜ್ಯ ಮುಖ್ಯಸ್ಥ ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನದ ನಂತರ ಮಾತನಾಡಿದ ಅವರು ನಾವು 10 ಭರವಸೆಗಳನ್ನು ನೀಡಿದ್ದೇವೆ, ನಾವು ಅವುಗಳನ್ನು ಕಾರ್ಯಗತಗೊಳಿಸುತ್ತೇವೆ. ಪಾರದರ್ಶಕ ಮತ್ತು ಪ್ರಾಮಾಣಿಕ ಸರ್ಕಾರ ನೀಡುತ್ತೇವೆ. ಮೊದಲ ಕ್ಯಾಬಿನೆಟ್ ಸಭೆಯಲ್ಲಿ ನಾವು ಹಳೆಯ ಪಿಂಚಣಿ ಯೋಜನೆಯನ್ನು (OPS) ಜಾರಿಗೆ ತರುತ್ತೇವೆ ಎಂದು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ಭಾನುವಾರ ಶಿಮ್ಲಾದಲ್ಲಿ ನಡೆದ ಸಮಾರಂಭದಲ್ಲಿ ನಿರ್ಗಮಿತ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿ ಕೂಡ ಹಿಮಾಚಲ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶಿಮ್ಲಾದ ಐತಿಹಾಸಿಕ ರಿಡ್ಜ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ 58ರ ಹರೆಯದ ಸುಖು ಅವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಹಿರಿಯ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಉಪಸ್ಥಿತರಿದ್ದರು. ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ, ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಕಾಂಗ್ರೆಸ್ ಹಿಮಾಚಲ ಪ್ರದೇಶ ಉಸ್ತುವಾರಿ ರಾಜೀವ್ ಶುಕ್ಲಾ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ಮತ್ತು ಹಿರಿಯ ನಾಯಕ ಸಚಿನ್ ಪೈಲಟ್ ಸಮಾರಂಭದಲ್ಲಿ ಭಾಗವಹಿಸಿದ್ದರು.
ಹಿಮಾಚಲ ಪ್ರದೇಶದ ನದೌನ್ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿಯ ಮುಖ್ಯಸ್ಥರಾಗಿರುವ ಸುಖ್ವಿಂದರ್ ಸಿಂಗ್ ಸುಖು ಅವರು ಕಾನೂನು ಪದವೀಧರರಾಗಿದ್ದಾರೆ. ವಿದ್ಯಾರ್ಥಿ ರಾಜಕೀಯದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ರಾಜ್ಯ ನಾಯಕತ್ವಕ್ಕೆ ಏರಿದ್ದರು.ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಶುದ್ಧ ಮತ್ತು ಪ್ರಾಮಾಣಿಕ ಸರ್ಕಾರದ ಭರವಸೆಯನ್ನು ಅವರು ಜನರಿಗೆ ನೀಡಿದ್ದಾರೆ. ಪಕ್ಷವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಜವಾಬ್ದಾರಿ ನನ್ನ ಮೇಲಿದೆ,ನಾವು ಅಧಿಕಾರದಲ್ಲಿರಲು ಮಾತ್ರವಲ್ಲದೆ ಅಧಿಕಾರವನ್ನು ಪಡೆಯಲು ಬಯಸಿದ್ದೇವೆ. ನಾವು ವ್ಯವಸ್ಥೆಯನ್ನು ಬದಲಾಯಿಸಲು ಬಯಸುತ್ತೇವೆ. ನನಗೆ ಸ್ವಲ್ಪ ಸಮಯ ಕೊಡಿ. ಹೊಸ ವ್ಯವಸ್ಥೆ ಮತ್ತು ಹೊಸ ಚಿಂತನೆಯನ್ನು ತರಲು ನಾವು ಶ್ರಮಿಸಬೇಕು, ಹೋರಾಟ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಲು ಹಳೆಯ ಪಿಂಚಣಿ ಯೋಜನೆ ಪ್ರಮುಖ ವಿಷಯವಾಗಿದೆ ಎಂದು ಶುಕ್ರವಾರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೆಹ್ಲೋಟ್, ಒಪಿಎಸ್ ಅನ್ನು ‘ಸಮಾಜಕ್ಕಾಗಿರುವ ಪ್ರಮುಖ ವಿಷಯ’ ಎಂದು ಕರೆದರು. ಪ್ರತಿಯೊಬ್ಬ ವ್ಯಕ್ತಿಗೂ ಬದುಕುವ ಹಕ್ಕಿದೆ, ವೃದ್ಧಾಪ್ಯದಲ್ಲಿ ಸಾಕಷ್ಟು ಪಿಂಚಣಿ ಪಡೆಯಲು ಓಪಿಎಸ್ ಜನರಿಗೆ ಸಹಾಯ ಮಾಡುತ್ತದೆ. ದೇಶಾದ್ಯಂತ ಇಂತಹ ಪ್ರಯೋಜನಕಾರಿ ಯೋಜನೆಗಳನ್ನು ಜಾರಿಗೊಳಿಸಲು ನಾನು ಕೇಂದ್ರವನ್ನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.
ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಗೆ ಪ್ರಧಾನಿ ಅಭಿನಂದನೆ
Congratulations to Shri Sukhwinder Singh Sukhu Ji on taking oath as Himachal Pradesh CM. I assure all possible cooperation from the Centre to further the development of Himachal Pradesh.
— Narendra Modi (@narendramodi) December 11, 2022
ಇಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸುಖ್ವಿಂದರ್ ಸಿಂಗ್ ಸುಖು ಅವರನ್ನು ಅಭಿನಂದಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಸಿಎಂ ಸುಖು ಅವರಿಗೆ ಪ್ರಧಾನಿ ಮೋದಿ ಭರವಸೆ ನೀಡಿದರು. “ಹಿಮಾಚಲ ಪ್ರದೇಶದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಸುಖವಿಂದರ್ ಸಿಂಗ್ ಸುಖು ಜಿ ಅವರಿಗೆ ಅಭಿನಂದನೆಗಳು. ಹಿಮಾಚಲ ಪ್ರದೇಶದ ಅಭಿವೃದ್ಧಿಗೆ ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಕಾರವನ್ನು ನಾನು ಭರವಸೆ ನೀಡುತ್ತೇನೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ