ಲಾರಿ ಚಾಲಕನ ಮಗ ಸುಖವಿಂದರ್ ಸಿಂಗ್ ಸುಖು ಇದೀಗ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ
ಹಿಮಾಚಲ ಪ್ರದೇಶದಲ್ಲಿನ ರಾಜಮನೆತನವನ್ನು ಮುಂದಿಟ್ಟುಕೊಂಡು ಸುಖವಿಂದರ್ ಸಿಂಗ್ ಸುಖು ಅವರನ್ನು ''ಯಾರೊಬ್ಬರ ಮಗ ಅಥವಾ ಮಗಳು" ಅಲ್ಲದ ಕಾರಣ ಅವರಿಗೆ ಸಿಎಂ ಸ್ಥಾನ ಸಿಗುವುದಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಟೀಕಿಸಿದ್ದರು. ಆದರೀಗ ಅವರೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಶಿಮ್ಲಾ/ಹಿಮಾಚಲಪ್ರದೇಶ: ಹಿಮಾಚಲ ಪ್ರದೇಶದ ಹೊಸ ಮುಖ್ಯಮಂತ್ರಿಯಾಗಿ (Himachal Pradesh CM) ಲಾರಿ ಚಾಲಕನ ಮಗನೂ ಆಗಿರುವ ಶಿಮ್ಲಾದಲ್ಲಿ ಹಾಲು ಮಾರುತ್ತಿದ್ದ ಸುಖವಿಂದರ್ ಸಿಂಗ್ ಸುಖು (Sukhvinder Singh Sukhu) ಅವರನ್ನು ಆಯ್ಕೆ ಮಾಡಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ಚುನಾವಣಾ ಪ್ರಚಾರದ ವೇಳೆ ರಾಜಮನೆತನವನ್ನು ಮುಂದಿಟ್ಟುಕೊಂಡು ಸುಖವಿಂದರ್ ಸಿಂಗ್ ಅವರು ಯಾರೊಬ್ಬರ ಮಗ ಅಥವಾ ಮಗಳು ಅಲ್ಲದ ಕಾರಣ ಅವರಿಗೆ ಈ ಹುದ್ದೆ (ಮುಖ್ಯಮಂತ್ರಿ ಸ್ಥಾನ) ಸಿಗುವುದಿಲ್ಲ ಎಂದು ಟೀಕಿಸಿದ್ದರು. ಆದರೆ ಡಿ.10 ರಂದು ಶಿಮ್ಲಾ ನಡೆದ ಸಭೆಯಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್ನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸುಖ್ವಿಂದರ್ ಸಿಂಗ್ ಸುಖು ಅವರನ್ನು ಆಯ್ಕೆ ಮಾಡಲಾಗಿದ್ದು, ಇಂದು (ಡಿ.11) ಶಿಮ್ಲಾದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ (Swearing-in ceremony in Himachal) ಮಾಡಲಿದ್ದಾರೆ.
ಶಕ್ತಿ ಕೇಂದ್ರದಿಂದ ದೂರದಲ್ಲಿರುವ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಬಸ್ ಚಾಲಕನ ಮಗನಾಗಿರುವ ಸುಖವಿಂದರ್ ಸುಖು (58) ಒಂದು ಕಾಲದಲ್ಲಿ ಶಿಮ್ಲಾದಲ್ಲಿ ಹಾಲು ಮಾರುತ್ತಿದ್ದರು. ಅಲ್ಲದೆ, ಶಿಮ್ಲಾ ಬಳಿಯ ಸಂಜೌಲಿಯ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕರಾಗಿ ಆಯ್ಕೆಯಾಗಿದ್ದರು, 1990 ರ ದಶಕದಲ್ಲಿ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ಕ್ಯಾಂಪಸ್ ಚುನಾವಣೆಗಳಿಗೆ ಕಾಲಿಟ್ಟರು. ಹೀಗೆ ಮುಂದೆ ಬಂದ ಸುಖವಿಂದರ್ ಇಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಗದ್ದುಗೆ ಏರುತ್ತಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸುಖವಿಂದರ್ ಅವರನ್ನು ನೇಮಕ ಮಾಡಿದ ಬಗ್ಗೆ ಟ್ವೀಟ್ ಮಾಡಿದ ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, “ನಮ್ಮ ನಾಯಕತ್ವಕ್ಕೆ ಧನ್ಯವಾದಗಳು, ಸಾಮಾನ್ಯ ಕುಟುಂಬದ ಮಗ ನಮ್ಮ ಮುಖ್ಯಮಂತ್ರಿಯಾಗುವುದು ಹೆಮ್ಮೆಯ ವಿಷಯ” ಎಂದು ಟ್ವೀಟ್ ಮಾಡಿ ಗಾಂಧಿ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಹೇಳಿದ್ದಾರೆ.
ಸುಖವಿಂದರ್ ಅವರ ಮುಖ್ಯ ಪ್ರತಿಸ್ಪರ್ಧಿ ಪ್ರತಿಭಾ ಸಿಂಗ್ ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು, ಅವರು ತಮ್ಮ ದಿವಂಗತ ಪತಿ, ಮಾಜಿ ರಾಜಮನೆತನದ ಮತ್ತು ಆರು ಬಾರಿ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಅವರ ಪರಂಪರೆಯಿಂದ ಅಧಿಕಾರವನ್ನು ಪಡೆದಿದ್ದರು. ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರು ಸುಖು ಅವರ ಸಚಿವ ಸಂಪುಟದಲ್ಲಿ ಮಹತ್ವದ ಸ್ಥಾನ ಪಡೆಯುವ ಸಾಧ್ಯತೆಯಿದೆ. ಇನ್ನೊಬ್ಬ ಕೈ ಮುಂಖಂಡ ಮುಖೇಶ್ ಅಗ್ನಿಹೋತ್ರಿ ಕೂಡ ವೀರಭದ್ರ ಸಿಂಗ್ ಅವರ ನೆರಳಿನಲ್ಲಿ ಪತ್ರಕರ್ತರಾಗಿ ರಾಜಕೀಯವನ್ನು ಪ್ರಾರಂಭಿಸಿದ್ದರು. ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಹುಮತ ಬರುವುದಿಲ್ಲ ಎಂದು ಅಮಿತ್ ಶಾ ಅವರು ನಾದೌನ್‌ನಲ್ಲಿ ನಡೆದ ಚುನಾವಣೆ ಪ್ರಚಾರದ ವೇಳೆ ಹೇಳಿದ್ದರು. ಆದರೆ ರಾಜ್ಯದಲ್ಲಿ ಬಿಜೆಪಿ ಲೆಕ್ಕಾಚಾರ ಬುಡಮೇಲು ಮಾಡಿ 68 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆದ್ದು ಬಿಜೆಪಿ ವಿರುದ್ಧ ಪ್ರಚಂಡ ಗೆಲುವು ದಾಖಲಿಸಿತು. ಸುಖು ಅವರು ನಾಲ್ಕನೇ ಬಾರಿ ಚುನಾವಣೆಯನ್ನು ಗೆದ್ದಿದ್ದಾರೆ.
ಇದನ್ನೂ ಓದಿ: ಹಿಮಾಚಲ ಕೈ ಭಿನ್ನಮತ ಸುಖಾಂತ್ಯ: ಸುಖ್ವಿಂದರ್ ಸಿಂಗ್ ಸಿಎಂ, ಮುಕೇಶ್ ಅಗ್ನಿಹೋತ್ರಿಗೆ ಉಪಮುಖ್ಯಮಂತ್ರಿ ಸ್ಥಾನ
ಪ್ರಜಾಪ್ರಭುತ್ವದಲ್ಲಿ ರಾಜ-ರಾಣಿಯರಿಗೆ ಸ್ಥಾನವಿಲ್ಲ. ಪ್ರಜಾಪ್ರಭುತ್ವದಲ್ಲಿ ನೀವು ಜನರಿಗಾಗಿ ಕೆಲಸ ಮಾಡಬೇಕಾಗಿದೆ ಎಂದು ಅಮಿತ್ ಶಾ ಹೇಳಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಜೈರಾಮ್ ಠಾಕೂರ್ ಯಾವುದೇ ರಾಜಕೀಯ ಕುಟುಂಬ ಪರಂಪರೆಯನ್ನು ಹೊಂದಿಲ್ಲ ಎಂದು ಅವರು ಒತ್ತಿ ಹೇಳಿದ್ದರು. ಪ್ರತಿಭಾ ಸಿಂಗ್ ಅವರನ್ನು ಮುಂದಿಟ್ಟುಕೊಂಡು “ರಾಜಾ” ವೀರಭದ್ರ ಸಿಂಗ್ ಅವರ ಪರಂಪರೆಯನ್ನು ಉಲ್ಲೇಖಿಸುತ್ತಾ ಸುಖು ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಆದರೆ ಸುಖು ಅವರ ತಳಮಟ್ಟದ ಚಿತ್ರಣವು ಜನರಿಗೆ ಹಿಡಿಸಿದ್ದರಿಂದ ಜನ ಬೆಂಬಲ ಅಧಿಕವಾಗಿತ್ತು ಎಂದು ಮೂಲಗಳು ತಿಳಿಸಿವೆ. ರಾಜಮನೆತನದ ಉತ್ತರಾಧಿಕಾರಿಗಳಿಗಿಂತ ಸಾಮಾನ್ಯ ವ್ಯಕ್ತಿಯ ಮಗನನ್ನು ಅಥವಾ ನಾಯಕನನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ರಾಜ್ಯದ ಜನತೆಗೆ ಒಂದೊಳ್ಳೆ ಸಂದೇಶವನ್ನು ರವಾನಿಸಿದೆ.
ಚುನಾವಣೆ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯಲ್ಲೇ ತಲ್ಲೀನರಾಗಿದ್ದರು. ಈ ವೇಳೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಿಯಾಂಕಾ ಗಾಂಧಿ ಅವರು ಮುನ್ನನಡೆಸಿದರು. ಅದರಂತೆ 10 ಚುನಾವಣಾ ರ್ಯಾಲಿಗಳನ್ನು ನಡೆಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೇ ಅಲ್ಲದೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಗಾಂಧಿಯೇತರ ನಾಯಕ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಮುಖ್ಯಸ್ಥರಾಗುವುದರೊಂದಿಗೆ ಸಂಬಂಧ ಹೊಂದಿದೆ. ಆದರೂ ಪಕ್ಷದಲ್ಲಿ ಗಾಂಧಿ ಕುಟುಂಬಸ್ಥರೇ “ಹೈಕಮಾಂಡ್” ಆಗಿ ಉಳಿದಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಡಿ
Published On - 7:11 am, Sun, 11 December 22