ರಾಂಚಿ: ಜಾರ್ಖಂಡ್ ರಾಜ್ಯದಲ್ಲಿ ಮೊದಲ ಹಂತದ ರಾಜಕೀಯ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಬುಧವಾರ) ಜಾರ್ಖಂಡ್‌ನಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳ ನಡುವೆ ನೇರಾನೇರ ಸ್ಪರ್ಧೆ ನಡೆಯಲಿದೆ. ಇಂದು ಜಾರ್ಖಂಡ್‌ನ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, 24 ಜಿಲ್ಲೆಗಳ ಒಟ್ಟು 81 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಮೊದಲ ಹಂತದ ಮತದಾನದ ಕ್ಷೇತ್ರಗಳಲ್ಲಿ 685 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವೆಂಬರ್ 20ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, 38 ಕ್ಷೇತ್ರಗಳಲ್ಲಿ ಉಳಿದ 528 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಂಡಿಯಾ ಮೈತ್ರಿಕೂಟದಲ್ಲಿ ಜೆಎಂಎಂ, ಕಾಂಗ್ರೆಸ್, ಆರ್ ಜೆಡಿ ಇದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಜೆಡಿಯು, ಎಲ್‌ಜೆಪಿ ಮತ್ತು ಎಜೆಎಸ್‌ಯು ಒಂದಾಗಿ ಸ್ಪರ್ಧಿಸಲಿವೆ.
ಜಾರ್ಖಂಡ್ ಚುನಾವಣೆಯ ಮೊದಲ ಹಂತದ ಪ್ರಮುಖ ಅಭ್ಯರ್ಥಿಗಳೆಂದರೆ, ಚಂಪೈ ಸೊರೆನ್, ಮಹುವಾ ಮಜಿ, ಗೀತಾ ಕೋಡಾ, ಅಜೋಯ್ ಕುಮಾರ್, ಬನ್ನಾ ಗುಪ್ತಾ ಮತ್ತು ಸುಖರಾಮ್ ಓರಾನ್. ಮೊದಲ ಹಂತದ ಮತದಾನದಲ್ಲಿ ಜೆಮ್‌ಶೆಡ್‌ಪುರ ಪಶ್ಚಿಮದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಜಗನ್ನಾಥಪುರದಲ್ಲಿ ಅತಿ ಕಡಿಮೆ ಅಭ್ಯರ್ಥಿಗಳು ಅಂದರೆ, 8 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಎನ್‌ಡಿಎ ಇತಿಹಾಸದಲ್ಲೇ ಹೆಚ್ಚು ಸ್ಥಾನಗಳೊಂದಿಗೆ ಜಾರ್ಖಂಡ್‌ನಲ್ಲಿ ಸರ್ಕಾರ ರಚನೆ; ಮೋದಿ ವಿಶ್ವಾಸ
ಚುನಾವಣೆಗಾಗಿ ಚುನಾವಣಾ ಆಯೋಗವು ಸಕಲ ತಯಾರಿ ನಡೆಸಿದೆ. ಜಾರ್ಖಂಡ್ ರಾಜ್ಯಾದ್ಯಂತ ಒಟ್ಟು 15,344 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 225 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಿಸಲಾಗಿದೆ. ಭದ್ರತಾ ಸುವ್ಯವಸ್ಥೆ ಕಾಪಾಡಲು 200 ಕಂಪನಿಗಳ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಮೊದಲ ಹಂತದಲ್ಲಿ 1 ಕೋಟಿ 37 ಲಕ್ಷ ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ.
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಜೆಎಂಎಂ ಪಕ್ಷದಿಂದ ಸಿಎಂ ಪಟ್ಟಕ್ಕೇರಿದ್ದ ಚಂಪೈ ಸೊರೆನ್ ಮುನಿಸಿಕೊಂಡು ಪಕ್ಷ ತೊರೆದು ಬಿಜೆಪಿ ಸೇರಿ ಸರೈಕಲಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.
ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಬರ್ಹೈತ್ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. 2019ರಲ್ಲಿ ಅವರು ಬರ್ಹೈತ್ ಮತ್ತು ದುಮ್ಕಾ ಎಂಬ 2 ಸ್ಥಾನಗಳಿಂದ ಸ್ಪರ್ಧಿಸಿದ್ದರು ಮತ್ತು ಎರಡರಲ್ಲೂ ವಿಜಯಶಾಲಿಯಾಗಿದ್ದರು.
ಇದನ್ನೂ ಓದಿ: ಚುನಾವಣೆಗೆ ಸಜ್ಜಾದ ಜಾರ್ಖಂಡ್‌ನಲ್ಲಿ ಪ್ರಧಾನಿ ಮೊದಲ ರ್ಯಾಲಿ; ಮೋದಿ ನೋಡಲು ಜನಸಾಗರ
ರಾಜ್ಯಸಭಾ ಸಂಸದರಾಗಿರುವ ಮಹುವಾ ಮಜಿ ರಾಂಚಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಜಿ ಅವರು ಬಿಜೆಪಿಯ ಸಿಪಿ ಸಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ. ಜಾರ್ಖಂಡ್‌ನಿಂದ ರಾಜ್ಯಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಮಹುವಾ ಮಜಿ ಇತಿಹಾಸ ಬರೆದಿದ್ದಾರೆ.
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಅವರನ್ನು ಬಿಜೆಪಿ ಧನ್ವಾರ್ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಜೆಎಂಎಂನ ನಿಯಾಜಾಮುದ್ದೀನ್ ಅನ್ಸಾರಿ ವಿರುದ್ಧ ಸ್ಪರ್ಧಿಸಲಿದ್ದಾರೆ. 2019 ರಲ್ಲಿ, ಮರಾಂಡಿ ಅವರು ಜಾರ್ಖಂಡ್ ವಿಕಾಸ್ ಮೋರ್ಚಾ (ಡೆಮಾಕ್ರಟಿಕ್) ಟಿಕೆಟ್‌ನಲ್ಲಿ ಸ್ಪರ್ಧಿಸಿದರು. ಬಿಜೆಪಿಯ ಲಕ್ಷ್ಮಣ್ ಪ್ರಸಾದ್ ಸಿಂಗ್ ಅವರನ್ನು 17,550 ಮತಗಳ ಅಂತರದಿಂದ ಸೋಲಿಸಿದ್ದರು.
ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಗಂಡೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಬಿಜೆಪಿಯ ಮುನಿಯಾ ದೇವಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಕಲ್ಪನಾ ಸೊರೆನ್ ತನ್ನ ಪತಿ ಜೈಲಿನಲ್ಲಿದ್ದಾಗ ಅವರ ಪರವಾಗಿ ಜೆಎಂಎಂನ ಪ್ರಚಾರವನ್ನು ವಹಿಸಿಕೊಂಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:04 am, Wed, 13 November 24