ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Election 2023) ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಇಂದು(ಡಿಸೆಂಬರ್ 12) ದೆಹಲಿಯಲ್ಲಿ ನಡೆದ ಸಭೆ ಅಂತ್ಯವಾಗಿದೆ. ಕರ್ನಾಟಕ ಕಾಂಗ್ರೆಸ್ನ 15 ನಾಯಕರೊಂದಿಗೆ ನಡೆದ ಸಭೆಯಲ್ಲಿ 2023ರಲ್ಲಿ ನಡೆಯಲಿರುವ ವಿಧಾನಸಭೆ ಚನಾವಣೆಗೆ ತಯಾರಿ, ಕಾರ್ಯಕ್ರಮಗಳ ರೂಪರೇಷಗಳ ಬಗ್ಗೆ ಚರ್ಚೆಯಾಗಿದೆ. ಅಲ್ಲದೇ ಪ್ರಮುಖವಾಗಿ ಬಿಜೆಪಿ ಸರ್ಕಾರದ ವಿರುದ್ಧದ ಹೋರಾಟದ ಬಗ್ಗೆ ಮಹತ್ವದ ಮಾತುಕತೆಗಳಾಗಿವೆ. ಇನ್ನು ಸಭೆ ಬಳಿಕ ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಏನೆಲ್ಲಾ ಚರ್ಚೆಗಳು ನಡೆದವು? ಯಾವೆಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳಲಾಯ್ತು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುರ್ಜೇವಾಲ, ಖರ್ಗೆ ಅವರ ನೇತೃತ್ವದಲ್ಲಿ ಚುನಾವಣಾ ತಯಾರಿ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಬೊಮ್ಮಾಯಿ ನೇತೃತ್ವದ ಭ್ರಷ್ಟಾಚಾರ ಸರಕಾರದ ವಿರುದ್ಧ, 40% ಕಮೀಷನ್ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರೆಸಲಿದ್ದೇವೆ. ಮುಂದಿನ 75 ದಿನಗಳು ಅಗ್ರೇಸ್ಸಿವ್ ಆಗಿ ನಮ್ಮ ಹೋರಾಟ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯನ್ನು ಆಡಳಿತದಿಂದ ಕಿತ್ತೊಗೆಯಲು ಮಾರ್ಗಸೂಚಿ ರಚಿಸಿದ್ದೇವೆ. ಕೃಷ್ಣಾ, ಮಹಾದಾಯಿ ಕುರಿತು ಹುಬ್ಬಳ್ಳಿಯಲ್ಲಿ ಜನವರಿ 2ರಂದು ಸಮಾವೇಶ ಮಾಡಲಿದ್ದೇವೆ. ಚಿತ್ರದುರ್ಗದಲ್ಲಿ ಜನವರಿ 8 ರಂದು SC,ST ಸಮಾವೇಶ ನಡೆಯಲಿದೆ. ಬಳಿಕ ಹಿಂದುಳಿದ ವರ್ಗಗಳ ಸಮಾವೇಶ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನು ಜನವರಿ ಮೊದಲ ವಾರದಿಂದ ಜಿಲ್ಲಾಕೇಂದ್ರಗಳಲ್ಲಿ ನಾಯಕರ ಒಗ್ಗಟ್ಟಿನ ಜಂಟಿಯಾತ್ರೆ ನಡೆಯಲಿದ್ದು, 224 ಕ್ಷೇತ್ರದಲ್ಲಿ ಯಾತ್ರೆ ಮೂಲಕ ಪ್ರಚಾರ ನಡೆಸಲಿದ್ದೇವೆ. ಪಟ್ಟಕ್ಕಿಂತ ಕಾಂಗ್ರೆಸ್ ಪಕ್ಷ ಮುಖ್ಯ . ಪಕ್ಷದ ನಾಯಕರ ಮೇಲೆ ವಿಶ್ವಾಸವಿದೆ . ಅಧಿಕಾರಕ್ಕಾಗಿ ಯಾವುದೇ ಭಿನ್ನಮತ ಇರುವುದಿಲ್ಲ. ಕೃಷ್ಣ ನದಿ ನೀರಿನ ಬಗ್ಗೆ ವಿಜಾಪುರದಲ್ಲಿ ಡಿಸೆಂಬರ್ 30ಕ್ಕೆ ಸಮಾವೇಶ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:13 pm, Mon, 12 December 22