ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಐದು ಅಂಶಗಳ ಟಾಸ್ಕ್ ಕೊಟ್ಟಿದ್ದಾರೆ. ಸೂಚನೆಯ ರೀತಿಯಲ್ಲಿ ಈ ವಿಚಾರಗಳನ್ನು ಮುಂಚೂಣಿ ನಾಯಕರಿಗೆ ರವಾನಿಸಿರುವ ಖರ್ಗೆ ಮುಂದಿನ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಹೇಳಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಕಾಂಗ್ರೆಸ್ ಕಡೆಗೆ ಜನರ ಗಮನ ಸೆಳೆದಿರುವುದನ್ನು ಖರ್ಗೆ ಗಮನಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಗ್ಗೂಡಿ ಪ್ರಯತ್ನಿಸಿದರೆ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು ಸುಲಭ ಎಂಬ ಅಭಿಪ್ರಾಯಕ್ಕೆ ಬಂದಂತೆ ಇರುವ ಖರ್ಗೆ ಐದು ಮುಖ್ಯ ಸೂಚನೆಗಳನ್ನು ರವಾನಿಸುವ ಮೂಲಕ ಪಕ್ಷದ ಸಂಘಟನೆಗೆ ಗಮನ ನೀಡುವಂತೆ ಸೂಚಿಸಿದ್ದಾರೆ.
ಖರ್ಗೆ ನೀಡಿರುವ ಐದು ಸಂದೇಶಗಳೆಂದರೆ…
1) ಮುಂದೆ ಸರ್ಕಾರ ರಚನೆ ಆಗುವ ರೀತಿಯಲ್ಲಿ ಚುನಾವಣೆಗೆ ಸಿದ್ಧತೆ ಆರಂಭಿಸಿ. ಪಕ್ಷದ ಸಂಘಟನೆಗೆ ಗಮನ ಹರಿಸಿ.
2) ಮುನಿಸಿಕೊಂಡು ಪಕ್ಷವನ್ನು ಬಿಟ್ಟು ಹೋಗಲು ಸಜ್ಜಾಗಿರುವವರನ್ನು ಸಮಾಧಾನಪಡಿಸಿ ಮತ್ತೆ ಪಕ್ಷದ ತೆಕ್ಕೆಗೆ ಕರೆತನ್ನಿ.
3) ಬಣ ರಾಜಕೀಯದಿಂದ ಯಾರಿಗೂ ಯಾವುದೇ ಲಾಭ ಇಲ್ಲ, ಎಲ್ಲರೂ ಮನಸ್ತಾಪ, ಭಿನ್ನಾಭಿಪ್ರಾಯ ಮರೆತು ಒಂದಾಗಿ ಹೋಗಬೇಕು.
4) ಚುನಾವಣೆಯಲ್ಲಿ ಗೆಲ್ಲುವ ಯುವ ಅಭ್ಯರ್ಥಿಗಳನ್ನು ಹುಡುಕಾಡಿ, ಗುರುತಿಸಿಟ್ಟುಕೊಳ್ಳಿ.
5) ಜನರಿಗೆ ಮನವರಿಕೆ ಆಗುವ ರೀತಿಯಲ್ಲಿ ಸರ್ಕಾರದ ಲೋಪದೋಷಗಳನ್ನು ಪ್ರಚಾರ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಐದು ಅಂಶಗಳ ಟಾಸ್ಕ್ ನೀಡಿರುವ ಖರ್ಗೆ ಮತ್ತಷ್ಟು ವಿಚಾರಗಳ ಬಗ್ಎ ತಮ್ಮ ಆಲೋಚನೆಯನ್ನು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಸಿದ್ದಾಂತ ಮರೆತು ಅಧಿಕಾರಕ್ಕಾಗಿ ಪಕ್ಷ ಬಿಡುವವರು ಬೇಕಿದ್ದರೆ ಹೋಗಲಿ. ಸಿದ್ಧಾಂತ ಮರೆತು ಕೆಲಸ ಮಾಡಿದರೆ ಪ್ರಯೋಜನ ಇಲ್ಲ. ಎಂದು ಎಲ್ಲ ಹಿರಿಯರು ಮತ್ತು ಕಿರಿಯ ನಾಯಕರನ್ನು ಖರ್ಗೆ ಎಚ್ಚರಿಸಿದ್ದಾರೆ.
ಕುರ್ಚಿಗಾಗಿ ಪಕ್ಷ ಸೇರಬೇಡಿ: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಪಕ್ಷಕ್ಕೆ ಬರುವವರು ಯಾರೇ ಇದ್ದರೂ ಸ್ವಾಗತಿಸುತ್ತೇವೆ. ಆದರೆ ಶಾಸಕರಾಗಬೇಕು, ಸಚಿವರಾಗಬೇಕು, ಮುಖ್ಯಮಂತ್ರಿ ಆಗಬೇಕು ಎಂದು ನಮ್ಮ ಪಕ್ಷಕ್ಕೆ ಬರಬೇಡಿ. ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಕಾಂಗ್ರೆಸ್ಗೆ ಬರುವವರಿಗೆ ಸ್ವಾಗತವಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸರ್ವೋದಯ ಸಮಾವೇಶ, ಸನ್ಮಾನ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದರು.
ಬದ್ಧತೆ, ನಂಬಿಕೆ ಇರುವವರು ಎಂದಿಗೂ ಪಕ್ಷ ಬಿಡುವುದಿಲ್ಲ. ಆದರೆ ಹಲವರು ಸಚಿವ ಸ್ಥಾನ, ಅಧ್ಯಕ್ಷಗಿರಿ ಸಿಕ್ಕಿಲ್ಲ ಎಂದು ಪಕ್ಷ ಬಿಡುತ್ತಿದ್ದಾರೆ. ಕಳೆದ 70 ವರ್ಷಗಳಿಂದ ಪಕ್ಷ ದೇಶಕ್ಕಾಗಿ ಏನು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೇಳುತ್ತಿದ್ದಾರೆ. ನಾನು ಏನು ಮಾಡಿದ್ದೇವೆ ಎನ್ನುವುದನ್ನು ಇನ್ನಾದರೂ ಸಾರಿ ಹೇಳಬೇಕಿದೆ. ನಾವು ಕೆಲಸ ಮಾಡಿದ್ದರಿಂದಲೇ ದೇಶ ಈ ಹಂತಕ್ಕೆ ಬೆಳೆದಿದೆ ಎಂದು ರಾಜ್ಯದ ನಾಯಕರಿಗೆ ಸಂದೇಶ ರವಾನಿಸಿದ್ದರು.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಯವರಿಗೆ ನಡುಕ ಹುಟ್ಟಿದೆ. ಈಗ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಕರ್ನಾಟಕದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಕಷ್ಟವಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
Published On - 2:41 pm, Mon, 7 November 22