ಮೂರು ಮಾಸ್ಟರ್ ಪ್ಲ್ಯಾನ್ ಜೊತೆ ವರುಣಾ ಕ್ಷೇತ್ರಕ್ಕೆ ಚುನಾವಣಾ ಚಾಣಕ್ಯ ಅಮಿತ್ ಶಾ ಎಂಟ್ರಿ
ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ಇಂದು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಪರ ವರುಣಾ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಶಾ ಮೂರು ಮೆಗಾ ಪ್ಲ್ಯಾನ್ಗಳನ್ನು ರೂಪಿಸಿದ್ದಾರೆ.
ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ದಿನ ಕಳೆದಂತೆ ವರುಣಾದಲ್ಲಿ ರಾಜಕೀಯ ಪಟ್ಟುಗಳು ಜೋರಾಗುತ್ತಿದ್ದು, ಗೆಲ್ಲುವುದು ಸಿದ್ದರಾಮಯ್ಯನಾ? ಸೋಮಣ್ಣನೋ ಎನ್ನುವ ಚರ್ಚೆ ಆರಂಭವಾಗಿವೆ. ಚುನಾವಣೆಗೆ ಕೇವಲ 9 ದಿನ ಇರುವಂತೆ ಬಿಜೆಪಿ, ಚುನಾವಣಾ ಚಾಣಕ್ಯ ಅಮಿತ್ ಶಾರನ್ನು ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಕರೆಸುತ್ತಿದೆ. ವರುಣಾ ವಿಧಾನಸಭಾ ಕ್ಷೇತ್ರದ ಹೊಸಕೋಟೆ ಗ್ರಾಮದ ಹೊರವಲಯದಲ್ಲಿ ಇಂದು(ಮೇ 02) ಬೆಳಗ್ಗೆ 11ಗಮಟೆಗೆ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಅಮಿತ್ ಶಾ ಜೊತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಸಹ ಭಾಗಿಯಾಗುತ್ತಿದ್ದು, ಅಮಿತ್ ಶಾ ಅವರು ಸಿದ್ದರಾಮಯ್ಯ ವಿರುದ್ಧ ಮೂರು ಮೆಗಾ ಪ್ಲ್ಯಾನ್ ಮಾಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯಗೆ ತಾರಾಬಲ: ವರುಣಾ ಕ್ಷೇತ್ರದಲ್ಲಿ ಶಿವಣ್ಣ, ರಮ್ಯಾ, ದುನಿಯಾ ವಿಜಯ್ ಪ್ರಚಾರ
ಅಮಿತ್ ಶಾ ಮೂರು ಮೆಗಾ ಪ್ಲ್ಯಾನ್
ಅಮಿತ್ ಶಾ ವರುಣ ಕ್ಷೇತ್ರದಲ್ಲಿ ಸಮಾವೇಶದ ಮೂಲಕ ಮೂರು ಮೆಗಾ ಪ್ಲ್ಯಾನ್ ಮಾಡಿದ್ದಾರೆ. ಅಮಿತ್ ಶಾ ಮೊದಲನೇ ಪ್ಲ್ಯಾನ್, ವಿ.ಸೋಮಣ್ಣ ಬಲಿಪಶು ಎಂಬ ಪ್ರತಿ ಪಕ್ಷದವರ ಹೇಳಿಕೆಗೆ ಉತ್ತರ ಕೊಡುವುದು. ಸೋಮಣ್ಣ ಅವರ ಸ್ಪರ್ಧೆ ಕೇವಲ ಸ್ಪರ್ಧೆಗಾಗಿ ಅಲ್ಲ, ಗೆಲ್ಲಲು ಎನ್ನುವ ಸಂದೇಶವನ್ನು ರವಾನೆ ಮಾಡಲು ಅಮಿತ್ ಶಾ ವರುಣ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಸ್ಥಳೀಯ ನಾಯಕರಿಗೆ ವರುಣ ವಿಧಾನಸಭಾ ಕ್ಷೇತ್ರ ಎಷ್ಟು ಮಹತ್ವದ್ದಾಗಿದೆ ಅನ್ನೋ ಸಂದೇಶವನ್ನು ನೀಡಲು ಮುಂದಾಗಿದ್ದಾರೆ.
1. ಯಡಿಯೂರಪ್ಪ-ಸೋಮಣ್ಣ ವೈಮನಸ್ಸು ದೂರ ಮಾಡುವುದು
ಅಮಿತ್ ಶಾ ಅವರ ಎರಡನೇ ಮೆಗಾ ಪ್ಲಾನ್ ಅಂದರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸೋಮಣ್ಣ ನಡುವಿನ ಮುನಿಸನ್ನ ದೂರ ಮಾಡುವುದಾಗಿದೆ. ಹೀಗಾಗಿ ಇಂದಿನ ಕಾರ್ಯಕ್ರಮಕ್ಕೆ ಅಮಿತ್ ಶಾ ಬಿಎಸ್ ಯಡಿಯೂರಪ್ಪ ಅವರನ್ನು ಜೊತೆಯಲ್ಲೇ ಕರೆದುಕೊಂಡು ಬರುತ್ತಿದ್ದಾರೆ. ಈ ಮೂಲಕ ಸೋಮಣ್ಣ ಹಾಗೂ ಯಡಿಯೂರಪ್ಪ ನಡುವೆ ಯಾವುದೇ ವೈಮನುಸ್ಸು ಇಲ್ಲ ಎನ್ನುವುದನ್ನು ವರುಣಾ ವಿಧಾನಸಭಾ ಕ್ಷೇತ್ರದಲ್ಲೇ ಸ್ಪಷ್ಟಪಡಿಸಲಿದ್ದಾರೆ. ಇದರ ಜೊತೆಗೆ ದಲಿತ ಮತಗಳ ಮೇಲೆ ಕಣ್ಣಿಟ್ಟಿರುವ ಅಮಿತ್ ಶಾ ಸಂಸದ ವಿ ಶ್ರೀನಿವಾಸ ಪ್ರಸಾದ್ ಅವರನ್ನ ಜೊತೆಯಲ್ಲೇ ಕರೆದುಕೊಂಡು ಬರುತ್ತಿದ್ದಾರೆ.
2. ವರುಣದಲ್ಲೇ ಸಿದ್ದರಾಮಯ್ಯನವರನ್ನ ಕಟ್ಟಿಹಾಕುವುದು
ಚುನಾವಣಾ ಚಾಣಕ್ಯ ಅಮಿತ್ ಶಾ ಅವರ ಮೂರನೇ ಪ್ಲಾನ್ ಅಂದ್ರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಾನಸಿಕವಾಗಿ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಟ್ಟಿ ಹಾಕುವುದಾಗಿದೆ. ಈಗಾಗಲೇ ರಾಜ್ಯ ಪ್ರವಾಸ ಕೈಗೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟೆನ್ಷನ್ ಕೊಡುವುದು. ಜತೆಗೆ ವರುಣಾದಲ್ಲಿ ಗೆಲುವು ಸುಲಭವಾಗಿಲ್ಲ ಎನ್ನುವ ಸಂದೇಶ ರವಾನಿಸೋದಾಗಿದೆ. ಸಿದ್ದರಾಮಯ್ಯ ರಾಜ್ಯದ ಯಾವ ಮೂಲೆಯಲ್ಲಿದ್ದರೂ ವರುಣ ಕ್ಷೇತ್ರದ ಬಗ್ಗೆ ಒತ್ತಡದಲ್ಲೇ ಇರಬೇಕು ಎನ್ನುವುದು ಅಮಿತ್ ಶಾ ಲೆಕ್ಕಾಚಾರವಾಗಿದೆ.
3. ಸೋಮಣ್ಣ ಬಲಿಪಶು ಎನ್ನುವ ಹೇಳಿಕೆಗೆ ಉತ್ತರ ಕೊಡುವುದು
ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ವಿ ಸೋಮಣ್ಣ ಅವರನ್ನು ವರುಣಾದಿಂದ ಕಣಕ್ಕಿಳಿಸಿ ಬಲಿಪಶು ಮಾಡಲು ಬಿಜೆಪಿ ಹೈಕಮಾಂಡ್ ಹೊರಟಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಸೋಮಣ್ಣ ಅವರನ್ನು ವರುಣಾಕ್ಕೆ ಕಳುಹಿಸಿರುವ ಬಗ್ಗೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಅಂತೆ-ಕಂತೆಗಳಿಗೆ ಇಂದು ಅಮಿತ್ ಶಾ ತೆರೆ ಎಳೆಯಲಿದ್ದಾರೆ. ಸೋಮಣ್ಣ ಅವರ ಸ್ಪರ್ಧೆ ಕೇವಲ ಸ್ಪರ್ಧೆಗಾಗಿ ಅಲ್ಲ, ಗೆಲ್ಲಲು ಎನ್ನುವ ಸಂದೇಶವನ್ನು ರವಾನೆ ಮಾಡಲಿದ್ದಾರೆ. ಈ ಮೂಲಕ ಸ್ಥಳೀಯ ನಾಯಕರಿಗೆ ವರುಣಾ ವಿಧಾನಸಭಾ ಕ್ಷೇತ್ರ ಎಷ್ಟು ಮಹತ್ವದ್ದಾಗಿದೆ ಎನ್ನುವುದನ್ನು ಅಮಿತ್ ಶಾ ಈ ಸಮಾವೇಶದ ಮೂಲಕ ಸಂದೇಶ ರವಾನಿಸಲಿದ್ದಾರೆ.
ಸಿದ್ದರಾಮಯ್ಯ ಪುತ್ರನ ಲಿಂಗಾಯತ ದಾಳ
ಅಮಿತ್ ಶಾ ಅವರದ್ದು ಒಂದು ರೀತಿಯ ಲೆಕ್ಕಾಚಾರವಾದರೆ, ಕಾಂಗ್ರೆಸ್ ಸಹ ಪ್ರತಿ ತಂತ್ರದಲ್ಲಿ ಹಿಂದೆ ಬಿದ್ದಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ಹಾಲಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಸಹಾ ಫೀಲ್ಡಿಗಿಳಿದಿದ್ದಾರೆ. ಅತ್ತ ಬಿಜೆಪಿ ಲಿಂಗಾಯತ ಮತಗಳು ಛಿದ್ರವಾಗದಂತೆ ನೋಡಿಕೊಳ್ಳಲು ಕಸರತ್ತು ನಡೆಸುತ್ತಿದ್ರೆ, ಇತ್ತ ಮೈಸೂರಿನಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ ಲಿಂಗಾಯತ ಮುಖಂಡರ ಸಭೆ ನಡೆಸಿ ಯತೀಂದ್ರ ದಾಳ ಉರುಳಿಸಿದ್ದಾರೆ.
ಒಟ್ಟಿನಲ್ಲಿ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ಚುನಾವಣಾ ಚಾಣಕ್ಯ ಅಮಿತ್ ಶಾ ಏನೆಲ್ಲಾ ಹೇಳಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:47 am, Tue, 2 May 23