ಬಿಜೆಪಿಯಲ್ಲಿದ್ದಾಗಲೇ ಜಗದೀಶ್ ಶೆಟ್ಟರ್ ಆರೋಪ ಮಾಡಬೇಕಿತ್ತು: ಅರುಣ್ ಸಿಂಗ್
ಟಿಕೆಟ್ ತಪ್ಪಿದ ಹಿನ್ನೆಲೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ತಿರುಗೇಟು ನೀಡಿದ ಅರುಣ್ ಸಿಂಗ್, ಪಕ್ಷ ತೊರೆದಾಗ ಸ್ವಾಭಾವಿಕವಾಗಿ ಹೀಗೆ ಆರೋಪ ಮಾಡುತ್ತಾರೆ ಎಂದರು.
ಬೆಳಗಾವಿ: ಟಿಕೆಟ್ ತಪ್ಪಿದ ಹಿನ್ನೆಲೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar), ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santhosh) ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ತಿರುಗೇಟು ನೀಡಿದ ಅರುಣ್ ಸಿಂಗ್ (Arun Singh), ಪಕ್ಷ ತೊರೆದಾಗ ಸ್ವಾಭಾವಿಕವಾಗಿ ಹೀಗೆ ಆರೋಪ ಮಾಡುತ್ತಾರೆ ಎಂದರು. ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷ ಬಿಟ್ಟು ಹೋದ ಮೇಲೆ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಒಂದು ವೇಳೆ ಆ ರೀತಿ ಇದ್ದರೇ ಪಕ್ಷದಲ್ಲಿ ಇದ್ದಾಗಲೇ ಹೇಳಬೇಕಿತ್ತು. ಬಿಎಲ್ ಸಂತೋಷ್ ಅವರು ಮನೆ, ಮಠ ಬಿಟ್ಟು ಪಕ್ಷ ಹಾಗೂ ರಾಷ್ಟ್ರಸೇವೆ ಮಾಡುತ್ತಿದ್ದಾರೆ. ಅವರ ಬಗ್ಗೆ ಈ ರೀತಿ ಮಾತಾಡುತ್ತಿರುವುದು ಪಾಪದ ಕೆಲಸ ಎಂದರು.
ಬಿಜೆಪಿಯಲ್ಲಿ ಲಿಂಗಾಯತ ನಾಯಕರ ಕಡೆಗಣನೆ ಆರೋಪ ವಿಚಾರವಾಗಿ ಮಾತನಾಡಿದ ಅರುಣ್ ಸಿಂಗ್, ಜಗದೀಶ್ ಶೆಟ್ಟರ್ ಹಲವು ವರ್ಷಗಳ ಕಾಲ ಪಕ್ಷದಲ್ಲಿ ಇದ್ದವರು. ಹೀಗಾಗಿ ಶೆಟ್ಟರ್ ಬಗ್ಗೆ ನಾನು ಏನೂ ಮಾತಾಡಲ್ಲ. ಕಾಂಗ್ರೆಸ್ ಕೇವಲ 9 ತಿಂಗಳು ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿತ್ತು. ವೀರೇಂದ್ರ ಪಾಟೀಲ್ ಅವರಿಗೆ ಕಾಂಗ್ರೆಸ್ ಯಾವ ರೀತಿ ಅಪಮಾನ ಮಾಡಿತ್ತು? ಕಾಂಗ್ರೆಸ್ ಜಾತಿ, ಧರ್ಮ ಒಡೆದು ಜಗಳ ಹಚ್ಚಿ ರಾಜಕಾರಣ ಮಾಡುತ್ತಿದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ತುಕಡೇ ತುಕಡೇ ಗ್ಯಾಂಗ್: ಅರುಣ್ ಸಿಂಗ್ ವಾಗ್ದಾಳಿ
ಬಿಜೆಪಿ ಮಾಸ್ ಲೀಡರ್ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗಲೇ ಅಧಿಕಾರದಿಂದ ಕಳೆಗಳಿದು ಬಸವರಾಜ ಬೊಮ್ಮಾಯಿಗೆ ಸ್ಥಾನ ನೀಡಿದರು. ನಂತರ ಚುನಾವಣಾ ರಾಜಕೀಯದಿಂದ ದೂರ ಸರಿದರು. ಸದ್ಯ ಟಿಕೆಟ್ ಘೋಷಣೆ ನಂತರ ಕೆಲವು ಲಿಂಗಾಯದ ಸಮುದಾಯದ ನಾಯಕರಿಗೆ ಟಿಕೆಟ್ ಕೈತಪ್ಪಿದ್ದು, ಜಗದೀಶ್ ಶೆಟ್ಟರ್ ಮತ್ತಿತರರು ಪಕ್ಷದಿಂದ ಹೊರನಡೆದಿದ್ದಾರೆ. ಚುನಾವಣೆ ಸಮಯದಲ್ಲಿ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಕಾಂಗ್ರೆಸ್, ಬಿಜೆಪಿ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸುತ್ತಿದೆ.
ಯಾವುದೇ ವ್ಯಕ್ತಿ ಪಕ್ಷ ಬಿಟ್ಟು ಹೋದ ಮೇಲೆ ಬಿಜೆಪಿ ಹೊಗಳಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹೋದ ಮೇಲೆ ಬಿಜೆಪಿಯನ್ನು ಹೊಗಳುತ್ತಾರಾ ಎಂದು ಪ್ರಶ್ನಿಸಿದ ಅರುಣ್ ಸಿಂಗ್, ಬಿಜೆಪಿ ಆಂತರಿಕ ಪ್ರಜಾಪ್ರಭುತ್ವದ ಆಧಾರದಲ್ಲಿ ಕೆಲಸ ಮಾಡುತ್ತದೆ. ಬಿಜೆಪಿ ಚುನಾವಣಾ ಸಮಿತಿ ಟಿಕೆಟ್ ಬಗ್ಗೆ ನಿರ್ಣಯ ಕೈಗೊಳ್ಳುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರು ಚುನಾವಣೆಗೆ ನಿಲ್ಲಬಾರದಾ? ಚುನಾವಣೆ ಎದುರಿಸುವ ಅಧಿಕಾರ ಇಲ್ಲವಾ? ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಟಾಂಗ್ ನೀಡಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:16 pm, Thu, 20 April 23