50 ಅಭ್ಯರ್ಥಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಲಿದೆ; ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಕ್ಕೆ ಧ್ವನಿಗೂಡಿಸಿದ ಕುಮಾರಸ್ವಾಮಿ
ಚುನಾವಣಾ ಹೊಸ್ತಿಲಲ್ಲಿ 50 ಅಭ್ಯರ್ಥಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ಬೆಳಗಾವಿಯ ಕುವೆಂಪು ನಗರದಲ್ಲಿರುವ ಗೃಹ ಕಚೇರಿಯಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದು ಚುನಾವಣಾ ಹೊಸ್ತಿಲಲ್ಲಿ 50 ಅಭ್ಯರ್ಥಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಸುದ್ದಿಗೋಷ್ಠಿ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಅವರ ಸಹೋದರ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.
ಕರ್ನಾಟಕ ಸಾರ್ವತ್ರಿಕ ಚುನಾವಣೆಗೆ 10 ದಿನ ಉಳಿದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇರೋದು ಜನರ ಭಾವನೆಯಿಂದ ಗೊತ್ತಾಗುತ್ತಿದೆ. ರಾಜ್ಯದ ಜನ ಕಾಂಗ್ರೆಸ್ ಸರ್ಕಾರ ತರಲು ಬಯಸಿದ್ದಾರೆ ಅನಿಸುತ್ತೆ. ಬೆಳಗಾವಿ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಪರ ಒಳ್ಳೆಯ ವಾತಾವರಣ ಇದೆ. ಜನರು ಬೆಲೆ ಏರಿಕೆಯಿಂದ ತತ್ತರಿಸಿದ ಸಂದರ್ಭದಲ್ಲಿ ಜನರಲ್ಲಿ ನವಚೈತನ್ಯ ತರಬೇಕೆಂದು ಕಾಂಗ್ರೆಸ್ ಗ್ಯಾರಂಟಿ ಸ್ಕೀಮ್ ಮಾಡಿದೆ. ಇವು ಜನಪ್ರಿಯ ಯೋಜನೆಗಳು ಆಗುವ ಎಲ್ಲಾ ಲಕ್ಷಣಗಳಿವೆ. ಬಿಜೆಪಿಯವರು ಹತಾಶರಾಗಿ ಕರ್ನಾಟಕದಲ್ಲಿ ವಾಮಮಾರ್ಗ ಹಿಡಿಯುವ ಸುದ್ದಿ ತಲುಪಿದೆ. 50 ಅಭ್ಯರ್ಥಿಗಳು, ಅವರ ಸಂಬಂಧಿಕರ ಮೇಲೆ ಲೋಕಾಯುಕ್ತ ದಾಳಿ ಸಾಧ್ಯತೆ ಇದೆ. ಚುನಾವಣೆ ಸಂದರ್ಭದಲ್ಲಿ ಇನ್ನು ಒಂದೆರಡು ದಿನಗಳಲ್ಲಿ ದಾಳಿ ಮಾಡುವ ಮುನ್ಸೂಚನೆ ಸಿಕ್ಕಿದೆ. ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ಈ ರೀತಿ ವಿಪಕ್ಷಗಳ ಹೆದರಿಸೋದು ಸರ್ವೇಸಾಮಾನ್ಯ. ಅವರು ಏನು ಮಾಡುತ್ತಿದ್ದಾರೆ ಇದೇ ಅವರಿಗೆ ತಿರುಗು ಬಾಣ ಆಗುತ್ತೆ. ಸಮಯ ಕಡಿಮೆ ಇದೆ, ಇಂತಹ ಸಂದರ್ಭದಲ್ಲಿ ಅವರು ಇದನ್ನ ಬಿಡಬೇಕು.
ಇದನ್ನೂ ಓದಿ: ಐಟಿ ದಾಳಿ ವೇಳೆ ನಿವಾಸದಲ್ಲಿ ವೋಟರ್ ಐಡಿ ಪತ್ತೆ; ಕೆಜಿಎಫ್ ಬಾಬು ವಿರುದ್ಧ ಎಫ್ಐಆರ್ ದಾಖಲು
ರಾಜ್ಯದ ಜನ ಎಲ್ಲ ಗಮನಿಸುತ್ತಿದ್ದಾರೆ. ನಾನು ರಾಜ್ಯ ಕಾಂಗ್ರೆಸ್ ವಕ್ತಾರೆ, ರಾಜ್ಯ ಕಾಂಗ್ರೆಸ್ ಸೂಚನೆ ಮೇರೆಗೆ ಸುದ್ದಿಗೋಷ್ಠಿ ನಡೆಸುತ್ತಿರುವೆ. ಗೆಲ್ಲುವುದನ್ನ ತಡೆಯೋದು ಯಾರ ಕೈಯಲ್ಲಿ ಇಲ್ಲ, ಮತದಾರರ ಕೈಯಲ್ಲಿ ಇದೆ. ನಮ್ಮ ಜಿಲ್ಲೆಯಲ್ಲಿಯೂ ಮೂವರು ಅಭ್ಯರ್ಥಿಗಳ ಟಾರ್ಗೆಟ್ ಮಾಡಿದ್ದಾರೆ. 50 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಎರಡೂ ಪಕ್ಷದವರಿದ್ದಾರೆ. ಯಾರ ಮೇಲೆ ಪ್ರೀತಿ ಜಾಸ್ತಿ ಇದೆ ಅಂತವರು ಮೂರು ಜನ ಇದ್ದಾರೆ. ಜನರ ಭಾವನೆಯನ್ನು ಕಲುಕೋದು, ಈ ರೀತಿ ವಾತಾವರಣ ಸೃಷ್ಟಿ ಮಾಡೋದು, ಬೇರೆ ಎಲ್ಲಾ ಅಸ್ತ್ರಗಳನ್ನು ಈಗ ಅವರು ಬಳಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿರುವುದು ತಪ್ಪಿಲ್ಲ ಎಂದ ಹೆಚ್ಡಿಕೆ
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಹೆಚ್ಡಿ ಕುಮಾರಸ್ವಾಮಿ ಧ್ವನಿಗೂಡಿಸಿದ್ದಾರೆ. JDS, ಕಾಂಗ್ರೆಸ್ಸಿಗರ ಮೇಲೆ ಐಟಿ ದಾಳಿ ಆಗುತ್ತೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿರುವುದು ತಪ್ಪಿಲ್ಲ. ಬಿಜೆಪಿಯಲ್ಲಿ ಇಡಿ ಮೋರ್ಚಾ ಹಾಗೂ ಐಟಿ ಮೋರ್ಚಾ ಇದೆ ಎಂದು ಆದಿಚುಂಚನಗಿರಿ ಮಠದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:07 am, Sun, 30 April 23