
Belur Assembly Election Result 2023: ಹಾಸನದ ಬೇಲೂರು ವಿಧಾನಸಭಾ ಕ್ಷೇತ್ರ (Beluru Assembly constituency) ಜೆಡಿಎಸ್ ಮತ್ತು ಕಾಂಗ್ರೆಸ್ನ ಭದ್ರಕೋಟೆಯಾದರೂ ಇಲ್ಲಿ ಕಮಲದ ಹೂ ಮತ್ತೊಮ್ಮೆ ಅರಳಿದೆ. ತ್ರಿಕೋನ ಹಣಾಹಣಿ ಕಂಡ ಈ ಕ್ಷೇತ್ರದಲ್ಲಿ ಬಿಜೆಪಿಯ ಎಚ್.ಕೆ. ಸುರೇಶ್ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ನಿಂದ ಹಾಲಿ ಶಾಸಕ ಕೆಎಸ್ ಲಿಂಗೇಶ್ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ನಿಂದ ಬಿ ಶಿವರಾಜು ಪೈಪೋಟಿ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಹಳ್ಳಿ ಸುರೇಶ್ ಕಳೆದ ಚುನಾವಣೆಯಲ್ಲಿ ಶೇ. 29ರಷ್ಟು ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿಯನ್ನು ಹಿಂದಿಕ್ಕಿ ರನ್ನರಪ್ ಆಗಿದ್ದರು. ಈ ಬಾರಿ ಅವರು ಗೆಲುವಿನತ್ತ ಮುನ್ನುಗ್ಗುತ್ತಿದ್ದಾರೆ.
ಬೇಲೂರಿನಲ್ಲಿ ಈ ಹಿಂದೆ ಬಿಜೆಪಿ ಒಮ್ಮೆ ಗೆದ್ದಿದೆ. 1999ರ ಚುನಾವಣೆಯಲ್ಲಿ ಬಿಜೆಪಿಯಿಂದ ಎಸ್.ಎಚ್. ಪುಟ್ಟರಂಗನಾಥ್ ಗೆಲುವು ಸಾಧಿಸಿದ್ದರು. ಪುಟ್ಟರಂಗನಾಥ್ ಈ ಕ್ಷೇತ್ರದ ಹಿರಿಯ ರಾಜಕಾರಣಿಯಾಗಿದ್ದವರು. ಕಾಂಗ್ರೆಸ್ನಿಂದ ಮೂರು ಬಾರಿ ಶಾಸಕರಾದವರು. ಪಕ್ಷೇತರರಾಗಿಯೂ ಸ್ಪರ್ಧಿಸಿದ್ದವರು.
ಹಾಸನ ಜಿಲ್ಲೆಯಲ್ಲಿ ಐತಿಹಾಸಿಕ ದೇವಸ್ಥಾನಗಳಿರುವ ಕ್ಷೇತ್ರವಾದ ಬೇಲೂರಿನಲ್ಲಿ 1.86 ಲಕ್ಷ ಮತದಾರರಿದ್ದಾರೆ. 1962ಕ್ಕೆ ಮೊದಲು ಇದು ಬೇಲೂರು–ಸಕಲೇಶಪುರ ಕ್ಷೇತ್ರವಾಗಿತ್ತು. ಬಳಿಕ ವಿಭಜನೆಯಾಗಿ ಸಕಲೇಶಪುರ ಕ್ಷೇತ್ರ ಪ್ರತ್ಯೇಕವಾಯಿತು. ಇನ್ನು ಜಾತಿ ಲೆಕ್ಕಾಚಾರ ತೆಗೆದುಕೊಂಡರೆ ಲಿಂಗಾಯತರೇ ಅಧಿಕ ಸಂಖ್ಯೆಯಲ್ಲಿರುವುದು. 54,000ಕ್ಕೂ ಹೆಚ್ಚು ಲಿಂಗಾಯತ ಮತದಾರರಿದ್ದಾರೆ. 30,000ದಷ್ಟು ಒಕ್ಕಲಿಗ ಮತದಾರರಿದ್ದಾರೆ. ಎಸ್ಸಿ ಎಸ್ಟಿ, ಕುರುಬರು ಸೇರಿದರೆ ಸಂಖ್ಯೆ 60,000 ದಾಟುತ್ತದೆ. ಮುಸ್ಲಿಮರು 10,000ಕ್ಕೂ ಹೆಚ್ಚಿದ್ದಾರೆ. ಹೀಗಾಗಿ, ಬೇಲೂರು ಕ್ಷೇತ್ರ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಮಾನ ಅವಕಾಶ ನೀಡಿದ್ದು ಹೌದು.
Published On - 3:30 am, Sat, 13 May 23