ಬೆಣ್ಣೆ ನಗರಿಯಲ್ಲಿ ಬಿಜೆಪಿ ಛಿದ್ರ ಛಿದ್ರ: ಏಳು ಸ್ಥಾನದಲ್ಲಿ ಆರರಲ್ಲಿ ಗೆದ್ದುಬೀಗಿದ ಕಾಂಗ್ರೆಸ್
ಈ ನಗರಕ್ಕೆ ಅದೃಷ್ಟದ ನೆಲ ಎನ್ನುತ್ತಾರೆ. ಯಾವುದೇ ರಾಜಕೀಯ ಪಕ್ಷಗಳು ಇಲ್ಲಿ ಸಮಾವೇಶ ಮಾಡಿದ್ರೆ, ರಾಜ್ಯದಲ್ಲಿ ಅಧಿಕಾರ ಸಿಗುತ್ತದೆ ಎಂಬ ನಂಬಿಕೆಯಿದೆ. ಇದೇ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಮಹಾ ಸಂಗಮ ಇಲ್ಲಿಯೇ ನಡೆದಿತ್ತು. ಜೊತೆಗೆ ರಾಜ್ಯದ ತುಂಬೆಲ್ಲ ಸಂಚರಿಸಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಇಲ್ಲಿಯೇ ಆಗಿತ್ತು. ಅದೃಷ್ಟ ನೆಲದ ನಂಬಿಕೆ ಕೇಸರಿ ಪಡೆ ನೆಲ ಕಚ್ಚಿದೆ. ಇದೇ ನಗರದಲ್ಲಿ ಸಿದ್ಧರಾಮೋತ್ಸವ ಮಾಡಿದವರ ಕೈಗೆ ರಾಜ್ಯದ ಅಧಿಕಾರದ ಕೀ ಸಿಕ್ಕಿದೆ.
ದಾವಣಗೆರೆ: ಇದು ರಾಜಕೀಯ ಪಕ್ಷಗಳಿಗೆ ಒಂದು ರೀತಿಯಲ್ಲಿ ಅದೃಷ್ಠದ ನೆಲ. ಇಲ್ಲಿ ಸಮಾವೇಶ ಮಾಡಿ ಚುನಾವಣೆಗೆ ಹೋದ್ರೆ, ಅಧಿಕಾರ ಗ್ಯಾರಂಟಿ ಎಂಬ ಮಾತೊಂದಿತ್ತು. ಆದ್ರೆ, ಈ ಸಲ ಅದು ವರ್ಕಔಟ್ ಆಗಿಲ್ಲ. ಹೌದು ಸಾಲು ಸಾಲು ಸಮಾವೇಶ,.ರೋಡ್ ಶೋ, ಒಂದಲ್ಲ ಎರಡಲ್ಲ ಹತ್ತಾರು ಸಲ ಸಿಎಂ ಭೇಟಿ. ಇಷ್ಟಾದ್ರು ದಾವಣಗೆರೆ (Davanagere) ಜಿಲ್ಲೆಯಲ್ಲಿ ಬಿಜೆಪಿ ನೆಲ ಕಚ್ಚಿದೆ. ಇರುವ 7 ಸ್ಥಾನಗಳಲ್ಲಿ 6 ಕಾಂಗ್ರೆಸ್ ಗೆದ್ದಿದೆ. ಹರಿಹರದಲ್ಲಿ ಮಾತ್ರ ಬಿಜೆಪಿಯ ಬಿಪಿ ಹರೀಶ್ ಗೆದ್ದು, ಪಕ್ಷದ ಅಲ್ಪ ಮಾನ ಉಳಿಸಿದ್ದಾರೆ. ವ್ಯಾಪಕ ಭ್ರಷ್ಟಾಚಾರ, ನಾಯಕರ ಅಹಂಕಾರ, ಕಮಿಷನ್ ಧಂದೆ. ಹೀಗೆ ಹತ್ತು ಹಲವಾರು ಕಾರಣಗಳಿಂದ ಜನರಿಗೆ ಬಿಜೆಪಿ ಬೇಸರವಾಗಿತ್ತು. ಆದ್ರೆ, ಮೋದಿ ಬಂದು ಎಲ್ಲ ಮೇಕಪ್ ಮಾಡುತ್ತಾರೆ ಎಂದಿದ್ದ ಕೇಸರಿ ಪಡೆಯ ಲೆಕ್ಕಾಚಾರ ಉಲ್ಟಾ ಆಗಿದೆ. ಕಾಂಗ್ರೆಸ್ಸಿನ ಜಿಲ್ಲೆಯ ಹೈಕಮಾಂಡ್ಗಳಾದ ಶಾಮನೂರು ಶಿವಶಂಕರಪ್ಪ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ ಭರ್ಜರಿ ಅಂತರದಲ್ಲಿಯೇ ಗೆದ್ದಿದ್ದಾರೆ.
ದಾವಣಗೆರೆ ಅದೃಷ್ಟದ ನೆಲ ಅಲ್ಲ ಎನ್ನುವುದು ತಪ್ಪು
ಬಿಜೆಪಿ ಸಮಾವೇಶ ಮಾಡಿದರೂ ಹಿನ್ನೆಡೆ ಆಗಿದ್ದು ಸತ್ಯ. ಆದ್ರೆ, ದಾವಣಗೆರೆ ಅದೃಷ್ಟದ ನೆಲ ಅಲ್ಲ ಎನ್ನುವುದು ಮಾತ್ರ ತಪ್ಪು. ಕೆಲ ತಿಂಗಳ ಹಿಂದೆಯೇ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರ 75 ನೇ ಜನ್ಮದಿನ ನಡೆದಿತ್ತು. ಇದಕ್ಕೆ ಸಿದ್ದರಾಮೋತ್ಸವ ಎಂದು ಹೆಸರಿಡಲಾಗಿತ್ತು. ಜೊತೆಗೆ ಲಕ್ಷಾಂತರ ಜನ ಸೇರಿದ್ದರು. ಹೀಗೆ 2018ರಲ್ಲಿ ಐದು ಶಾಸಕರನ್ನ ಹೊಂದಿದ್ದ ಬಿಜೆಪಿ ಈಗ ಒಂದಕ್ಕೆ ಬಂದು ನಿಂತಿದೆ. ಕಾಂಗ್ರೆಸ್ಸಿಗೆ ಅಸ್ತ್ರವಾಗಿದ್ದ ಚನ್ನಗಿರಿಯ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಚಾರ ಪ್ರಕರಣದಲ್ಲಿ ಭಾಗಿಯಾಗಿ, ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಪುತ್ರ ಪಕ್ಷೇತರ ಆಗಿ ಕಣಕ್ಕೆ ಇಳಿದು, ಹೀನಾಯ ಸೋಲು ಕಂಡಿದ್ದಾರೆ. ಇನ್ನು ಪ್ರಭಾವಿ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸುವ ರೇಣುಕಾಚಾರ್ಯಗೂ ಹೊನ್ನಾಳಿ ಜನ ನೀರು ಕುಡಿಸಿದ್ದಾರೆ. ಕಾರಣ ಅವರ ದರ್ಪ, ಅವರ ಸಹೋದರರ ವ್ಯಾಪಕ ಭ್ರಷ್ಟಾಚಾರಕ್ಕೆ ಹೊನ್ನಾಳಿ ಜನ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ
ಹೀಗೆ ದಾವಣಗೆರೆ ಅದೃಷ್ಠದ ನೆಲ ಎಂಬುದು ಕಾಂಗ್ರೆಸ್ಸಿನ ಪಾಲಿಗೆ ಸತ್ಯವಾಗಿದೆ. ದಾವಣಗೆರೆ ಸಿದ್ದರಾಮಮೋತ್ಸವ ಮಾಡಿ ಜನ ಸಾಗರವೇ ಸೇರಿತ್ತು. ಇಡೀ ದಿನ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಆಗಲೇ ರಾಜ್ಯದ ಕಾಂಗ್ರೆಸ್ ಸರ್ಕಾರ ಬರುವುದು ಖಚಿತವಾಗಿತ್ತು. ಸಿದ್ದರಾಮೋತ್ಸವಕ್ಕೆ ಟಕ್ಕರ್ ಕೊಡಲು ಮೋದಿ ಮಹಾ ಸಂಗಮ ಮಾಡಿತ್ತು ಕೇಸರಿ ಪಡೆ. ಆದ್ರೆ, ಹಾಕಿದ ಶಾಮೀಯಾನ ತುಂಬುವುದು ಕಷ್ಟವಾಗಿತ್ತು. ಒಂದೇ ಅರ್ಥದಲ್ಲಿ ಹೇಳಬೇಕೆಂದರೆ ಸಿದ್ದರಾಮೋತ್ಸವ ಮಾಡಿದ ಫಲವಾಗಿ ಇದೀಗ ಕಾಂಗ್ರೆಸ್ ಅಧಿಕಾರದ ಗದ್ದಿಗೆ ಹಿಡಿದಿದೆ. ದಾವಣಗೆರೆ ಅಂದ್ರೆ, ಅದೃಷ್ಠದ ನೆಲ ಅಂದ್ರೆ ತಪ್ಪಲ್ಲ.
ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ