ನಾನು ಕರ್ನಾಟಕದ ಭೂಮಿ ಪುತ್ರ: ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾವುಕ ನುಡಿ

ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಸಭೆಯ ಅಂತಿಮ ದಿನವಾದ ಇಂದು ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾವುಕ ಭಾಷಣ ಮಾಡಿ ಮತಯಾಚನೆ ನಡೆಸಿದರು.

ನಾನು ಕರ್ನಾಟಕದ ಭೂಮಿ ಪುತ್ರ: ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾವುಕ ನುಡಿ
ಮಲ್ಲಿಕಾರ್ಜುನ ಖರ್ಗೆ
Follow us
Rakesh Nayak Manchi
|

Updated on: May 08, 2023 | 5:01 PM

ಕಲಬುರಗಿ: ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Elections 2023) ಬಹಿರಂಗ ಸಭೆಯ ಅಂತಿಮ ದಿನವಾದ ಇಂದು ಕಲಬುರಗಿಯಲ್ಲಿ (Kalaburagi) ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಭಾವುಕ ಭಾಷಣ ಮಾಡಿ ಮತಯಾಚನೆ ನಡೆಸಿದರು. ಕರ್ನಾಟಕದ ಭೂಮಿ ಪುತ್ರನಾಗಿರುವ ನನ್ನನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ನೀವೆಲ್ಲರೂ ಹೆಮ್ಮೆ ಪಡಬೇಕು. ಯಾರು ಏನೇ ಹೇಳಿದರೂ ನಾನು ನನ್ನ ಕೊನೆಯ ಉಸಿರು ಇರುವವರೆಗೂ ಬಡವರಿಗಾಗಿ ಹೋರಾಟವನ್ನು ಮುಂದುವರೆಸುತ್ತೇನೆ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ನನ್ನನ್ನು ಮುಗಿಸಲೇಬೇಕು ಎಂದು ಬಿಜೆಪಿ ನಾಯಕರ ಮನಸ್ಸಿಗೆ ಬಂದಿರಬಹುದು, ಇಲ್ಲದಿದ್ದರೆ ಖರ್ಗೆ ಮತ್ತು ಕುಟುಂಬವನ್ನು ಮುಗಿಸುತ್ತೇನೆ ಎಂದು ಹೇಳುವ ಧೈರ್ಯ ಯಾರಿಗೆ ಇರುತ್ತದೆ? ಎಂದು ಹೇಳಿದ ಮಲ್ಲಿಕಾರ್ಜುನ ಖರ್ಗೆ, ಯಾರೂ ನನ್ನನ್ನು ಸುಲಭವಾಗಿ ಮುಗಿಸಲು ಸಾಧ್ಯವಿಲ್ಲ. ನನ್ನ ರಕ್ಷಣೆಗೆ ಬಾಬಾಸಾಹೇಬರ ಸಂವಿಧಾನವಿದೆ, ಕಲಬುರಗಿ, ಕರ್ನಾಟಕದ ಜನತೆ ನನ್ನ ಬೆನ್ನಿಗಿದ್ದಾರೆ. ಈಗ ಎಐಸಿಸಿ ಅಧ್ಯಕ್ಷರಾದ ಮೇಲೆ ದೇಶದ ಜನ ನನ್ನ ಬೆನ್ನಿಗಿದ್ದಾರೆ ಎಂದು ಹೇಳಿದರು.

ನಾನು ಸಹ ಬಲಶಾಲಿಯಾಗಿದ್ದೇನೆ. ಒಬ್ಬ ಮನುಷ್ಯ ನೂರು ವರ್ಷ ಅಥವಾ 90 ವರ್ಷಗಳವರೆಗೆ ಬದುಕಬಹುದು, ಆದರೆ ಭಾರತದಲ್ಲಿ ಸರಾಸರಿ ಜೀವನವು 70 ಅಥವಾ 71 ಆಗಿದೆ. ನನಗೆ ಈಗ 81 ವರ್ಷ, ನಾನು ಬದುಕಿದರೆ ಇನ್ನೂ ಎಂಟು ಅಥವಾ ಒಂಬತ್ತು ವರ್ಷ ಬದುಕಬಹುದು. ಚಿಂತಿಸಬೇಡಿ, ನನ್ನ ಕೊನೆಯ ಉಸಿರು ಇರುವವರೆಗೂ ನಾನು ಬಡವರಿಗಾಗಿ ಹೋರಾಡುತ್ತೇನೆ ಮತ್ತು ಅವರನ್ನು ರಕ್ಷಿಸಲು ಪ್ರಯತ್ನಿಸುತ್ತೇನೆ. ಜನರು ನನ್ನೊಂದಿಗೆ ಇರುವವರೆಗೂ ನನಗೆ ಯಾವುದೇ ಭಯವಿಲ್ಲ ಎಂದು ಖರ್ಗೆ ಹೇಳಿದರು.

ಇದನ್ನೂ ಓದಿ: Karnataka Assembly polls; ಕಾಂಗ್ರೆಸ್ ಗೆಲ್ಲೋದು 141 ಸ್ಥಾನ, ಮುಖ್ಯಮಂತ್ರಿಯ ಘೋಷಣೆ ಮೇ 15ರಂದು ಖರ್ಗೆ ಮಾಡಲಿದ್ದಾರೆ: ಡಿಕೆ ಶಿವಕುಮಾರ್

ನನ್ನನ್ನು ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಕಲಬುರಗಿಯ ಜನತೆ ಜಿಲ್ಲೆಯ ಎಲ್ಲಾ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಬೇಕು, ಇಲ್ಲವಾದರೆ ಹಂಗಿಸುತ್ತಾರೆ ಎಂದು ಹೇಳಿದ ಖರ್ಗೆ, ಕಲಬುರಗಿ ಜನತೆಯ ಆಶೀರ್ವಾದದಿಂದಲೇ ನಾನು ಇಂದು ಸಂಸತ್ತಿನಲ್ಲಿದ್ದು, ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇನೆ. ಇದು ನನ್ನದಲ್ಲ, ಕಲಬುರಗಿ ಜನರ ಹೆಮ್ಮೆಯ ವಿಚಾರ ಎಂದರು.

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವಂತೆ ಖರ್ಗೆ ಮನವಿ ಮಾಡಿದರು. “ಕಾಂಗ್ರೆಸ್ ಎಲ್ಲಾ 13 ಸ್ಥಾನಗಳನ್ನು ಗೆಲ್ಲುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಆಗ ನನಗೆ ಹಾಗೂ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದವರಿಗೆ ಗೌರವ ಸಿಗುತ್ತದೆ ಎಂದರು.

ನಾನು ಕರ್ನಾಟಕ ಮತ್ತು ಕಲಬುರಗಿಯ ಭೂಮಿ ಪುತ್ರ ಎಂದು ಮೋದಿಗೆ ಹೇಳಬಯಸುತ್ತೇನೆ. ಗುಜರಾತ್‌ನಲ್ಲಿ ನೀವು ವೋಟ್ ಕೇಳುವ ಹಕ್ಕಿದೆ. ಆದರೆ ಇಲ್ಲಿ ಮತ ಕೇಳಲು ನೀವು ಏನು ಮಾಡಿದ್ದೀರಿ? ನಾನು ಕರ್ನಾಟಕದಲ್ಲಿ ಹಾಗೂ ನನ್ನ ತವರಿನಲ್ಲಿ ಕೆಲಸ ಮಾಡಿದ್ದು, ಅದಕ್ಕಾಗಿ ವೋಟ್ ಕೇಳುತ್ತಿದ್ದೇನೆ ಎಂದು ಖರ್ಗೆ ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ