ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಲಿಂಗಾಯತ ಲಡಾಯಿ ಜೋರಾಗಿದೆ. ಇದರ ಮಧ್ಯೆ ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagadish Shettar ) ಮತ್ತು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಸೆಳೆದಿರುವ ಕಾಂಗ್ರೆಸ್ ಇವರ ಮೂಲಕ ಬಿಜೆಪಿ ವಿರುದ್ಧ ಲಿಂಗಾಯತ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತಿದೆ. ಇದರಿಂದ ಬಿಜೆಪಿ ಹೈಕಮಾಂಡ್ ಎಚ್ಚೆತ್ತುಕೊಂಡಿದ್ದು, ಇದಕ್ಕೆ ಪ್ರತಿತಂತ್ರ ಹೆಣೆದಿದೆ. ಕಳೆದ 2 ದಿನಗಳಿಂದ ಹುಬ್ಬಳ್ಳಿಯಲ್ಲಿ ಬೀಡುಬಿಟ್ಟು ಜಗದೀಶ್ ಶೆಟ್ಟರ್ ಅವರನ್ನು ಕಟ್ಟಿಹಾಕಲು ಚುನಾವಣಾ ಚಾಣಕ್ಯ ಅಮಿತ್ ಶಾ ರಣತಂತ್ರ ರೂಪಿಸಿದ್ದಾರೆ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಡ್ಯಾಮೇಜ್ ಕಂಟ್ರೋಲ್ಗೂ ಸಹ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲೇಬೇಕೆಂದು ರಾಜ್ಯ ನಾಯಕರಿಗೆ ಅಮಿತ್ ಶಾ ಟಾಸ್ಕ್ ಕೊಟ್ಟು ತೆರಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(BS Yediyurappa )ಹುಬ್ಬಳ್ಳಿಗೆ ದಿಢೀರ್ ಎಂಟ್ರಿ ಕೊಟ್ಟಿದ್ದು, ಕದನ ಕಣ ಮತ್ತಷ್ಟು ರಂಗೇರಿದೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲೇಬೇಕೆಂದು ಅಮಿತ್ ಶಾ ಸೂಚನೆ ಮೇರೆಗೆ ಅಖಾಡಕ್ಕೆ ಇಳಿದಿರುವ ಯಡಿಯೂರಪ್ಪ, ಲಿಂಗಾಯತ ಮುಖಂಡರ ಜೊತೆ ಹೈವೋಲ್ಟೇಜ್ ಸಭೆ ನಡೆಸಿ ಗೇಮ್ ಪ್ಲ್ಯಾನ್ ರೂಪಿಸಿದ್ದಾರೆ.
ಯಡಿಯೂರಪ್ಪನವರ ನಿನ್ನೆ ಸಂಜೆ ಹುಬ್ಬಳ್ಳಿ ನಗರದಲ್ಲಿ ಖಾಸಗಿ ಹೋಟೆಲ್ನಲ್ಲಿ ಲಿಂಗಾಯತ ಮುಖಂಡರ ಮೀಟಿಂಗ್ ನಡೆಸಿದ್ದು, , ಜಗದೀಶ್ ಶೆಟ್ಟರ್ ಸೋಲಿಸಲು ಕರೆ ನೀಡಿದ್ದಾರೆ. ಸಭೆಯಲ್ಲಿ ವೀರಶೈವ ಲಿಂಗಾಯತ ಮುಖಂಡರಿಗೆ ಯಡಿಯೂರಪ್ಪ ಏನೆಲ್ಲಾ ಹೇಳಿದ್ದಾರೆ? ಜಗದೀಶ್ ಶೆಟ್ಟರ್ ಬಗ್ಗೆ ಏನು ಹೇಳಿದ್ರು ಎನ್ನುವ ಇನ್ಸೈಡ್ ಮಾಹಿತಿ ಈ ಕೆಳಗಿನಂತಿದೆ.
ಅಭ್ಯರ್ಥಿಗಳೂ ನಿಶ್ಚಯವಾಗಿದ್ದಾರೆ. ಜಗದೀಶ್ ಶೆಟ್ಟರ್ ಬಗ್ಗೆ ಸತ್ಯ ಸಂಗತಿ ಹೇಳಲು ವೀರಶೈವ ಸಭೆ ಕರೆದಿದ್ದೇನೆ. ಅವರಿಗೆ ಏನು ಅನ್ಯಾಯ ಮಾಡಿದ್ದೆವು. ಶೆಟ್ಟರ್ ಅವರನ್ನು ಸಿಎಂ, ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದೇವೆ. ಬಿ.ಬಿ.ಶಿವಪ್ಪ ಅವರನ್ನು ಬಿಟ್ಟು ಶೆಟ್ಟರ್ ಪರವಾಗಿ ನಿಂತು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದೆವು. ಸ್ವತಹ ಪ್ರಧಾನಿಗಳೇ ಮಾತನಾಡಿದ್ದರು.
ನಿಮ್ಮ ಶ್ರೀಮತಿಯವರನ್ನು ನಿಲ್ಲಿಸಿ, ಅವರಿಗೆ ಕೊಡುತ್ತೇವೆ. ಜೊತೆಗೆ ಅವರಿಗೆ ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಮಂತ್ರಿ ಆಗುವಂತೆ ಆಫರ್ ನೀಡಲಾಯಿತು. ಇಷ್ಟೆಲ್ಲ ಆದಮೇಲೂ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಗೆ ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಶೆಟ್ಟರ್ ಪರವಾಗಿ ನಿಲ್ಲಬೇಡಿ. ಚುನಾವಣೆಯಲ್ಲಿ ದಯನೀಯ ಸೋಲಾಗುವಂತೆ ಮಾಡಬೇಕು. ಅದೇ ಅವರಿಗೆ ಪಾಠವಾಗಲಿದೆ ಎಂದು ವೀರಶೈವ ಲಿಂಗಾಯತರ ಸಭೆಯಲ್ಲಿ ಯಡಿಯೂರಪ್ಪ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನನ್ನ ಬಗ್ಗೆ ಸಿಂಪಥಿ ಕ್ರಿಯೇಟ್ ಮಾಡುತ್ತಿದ್ದಾರೆ. ಬೇರೆಯವರಿಗೆ ಸಿಎಂ ಮಾಡಲು ನಾನು ಸ್ವತಃ ರಾಜೀನಾಮೆ ನೀಡಿದ್ದೇನೆ. ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ ಎನ್ನುವ ಮಾತನ್ನ ಪ್ರಧಾನಿಗೆ ಹೇಳಿದ್ದೆ. ಅದರಂತೆಯೇ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕೆ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಯಾವುದೇ ಸಮೀಕ್ಷೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಯಾವ ಕಾರಣಕ್ಕೂ ಶೆಟ್ಟರ್ ಇಲ್ಲಿಂದ ಗೆಲ್ಲಲು ಸಾಧ್ಯವಿಲ್ಲ. ನಾಳೆ ರಾಲಿ ಏರ್ಪಡಿಸಲಾಗಿದೆ. ಹತ್ತಾರು ಸಾವಿರ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ. ರಾಜಕೀಯ ದೊಂಬರಾಟ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು. ಬೃಹತ್ ಮೆರವಣಿಗೆ ಆಯೋಜಿಸಬೇಕು. ಮನೆಯಲ್ಲಿ ಕುಳಿತ ಶೆಟ್ಟರ್ಗೆ ನಡುಕ ಉಂಟಾಗಬೇಕು ಎಂದು ಸಭೆಯಲ್ಲಿ ವೀರಶೈವ ಲಿಂಗಾಯತ ಮುಖಂಡರಿಗೆ ಕರೆ ನೀಡಿದ್ದಾರೆ.
ಇವತ್ತಿನಿಂದ ಜಗದೀಶ್ ಶೆಟ್ಟರ್ ಹೆಸರನ್ನು ಹೇಳಲ್ಲ. ನಂಬಿಕೆ ದ್ರೋಹಿ, ವಿಶ್ವಾಸ ದ್ರೋಹಿ ಪಕ್ಷಾಂತರಿಗಳಿಗೆ ಕ್ಷಮಿಸುವುದಿಲ್ಲ ಎನ್ನುವ ಸುದ್ದಿ ಎಲ್ಲೆಡೆ ಹೋಗಬೇಕು. ಪ್ರಹ್ಲಾದ್ ಜೋಶಿ ಮತ್ತು ಇತರೆ ನಾಯಕರು ಕೆಲಸ ಬದಿಗೊತ್ತಿ ಎಲ್ಲ ಮುಖಂಡರು ಅಭ್ಯರ್ಥಿ ಗೆಲುವಿಗೆ ಶ್ರಮಿಸಿ. ಜಗದೀಶ್ ಶೆಟ್ಟರ್ ಕಂಪನಿಗೆ ಪಾಠ ಕಲಿಸಬೇಕು. ಶೆಟ್ಟರ್ ಸೋಲಿಸುವುದೇ ನಮ್ಮ ಒಂದೇ ಒಂದು ಕಾರ್ಯಕ್ರಮ, ಲೋಕಸಭೆ ಚುನಾವಣೆ ಮುಗಿಯುವವರೆಗೂ ಓಡಾಡುತ್ತೇನೆ ಎಂದಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Wed, 26 April 23