ಟಗರು ವಿರುದ್ಧ ರಾಜಹುಲಿ ಘರ್ಜನೆ: ವರುಣಾದಲ್ಲಿ ಸಿದ್ದರಾಮಯ್ಯ ಸೋಲಿಸುವ ಜವಾಬ್ದಾರಿ ನನ್ನದು ಎಂದ ಬಿಎಸ್ ಯಡಿಯೂರಪ್ಪ
ಸಿದ್ದರಾಮಯ್ಯ ಅವರ ಹಾಲಿ ಕ್ಷೇತ್ರ ಬಾದಾಮಿಯಲ್ಲಿ ನಿಂತು ಸಿದ್ದರಾಮಯ್ಯ ವಿರುದ್ಧವೇ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ವರುಣಾದಲ್ಲಿ ಅವರನ್ನು ಸೋಲಿಸುವ ಜವಾಬ್ದಾರಿ ನನ್ನದು, ಬಾದಾಮಿಯಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬಾಗಲಕೋಟೆ: ವರುಣಾದಲ್ಲಿ ಸಿದ್ದರಾಮಯ್ಯ (Siddaramaiah) ಅವರನ್ನು ಸೋಲಿಸುವ ಜವಾಬ್ದಾರಿ ನನ್ನದು, ಬಾದಾಮಿಯಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದು ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ಸಿದ್ದರಾಮಯ್ಯ ಅವರು ಹಾಲಿ ಕ್ಷೇತ್ರ ಬಿಟ್ಟು ತನ್ನ ಪುತ್ರ ಶಾಸಕರಾಗಿರುವ ವರುಣಾ (Varuna) ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಬಾದಾಮಿಯಲ್ಲಿ (Badami) ಟಗರು ವಿರುದ್ಧವೇ ರಾಜಹುಲಿ ಘರ್ಜಿಸಿದೆ.
ಬಾದಾಮಿ ಕ್ಷೇತ್ರದ ಕೆರೂರು ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಶಾಂತಗೌಡ ಅವರ ಪರ ಮತಯಾಚನೆ ಮಾಡಿದ ಯಡಿಯೂರಪ್ಪ, ವರುಣಾದಲ್ಲಿ ಸ್ಪರ್ಧಿಸುತ್ತಿರುವ ಸಿದ್ದರಾಮಯ್ಯ ಸೋಲಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ನೀವು ಬಾದಾಮಿಯಲ್ಲಿ ಎಸ್.ಟಿ.ಪಾಟೀಲ್ ಅವರನ್ನು ಗೆಲ್ಲಿಸುವ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಕರೆ ನೀಡಿದರು. ಇಲ್ಲಿ (ಬಾದಾಮಿ) ನಂಬಿಕದ್ರೋಹ ಮಾಡಿದ ಅವರು ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಗೆಲ್ಲುವುದಿಲ್ಲ ಅಂತ ಗೊತ್ತಾಗಿ ಇಲ್ಲಿಂದ ಹೋಗಿದಿಯಾ, ಇಂತವರಿಗೆ ತಕ್ಕ ಪಾಠ ಕಲಿಸಬೇಕೆಂದು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ಅವನ್ಯಾವ ನಾಯಕರೀ?: ರಾಯಚೂರಿನಲ್ಲಿ ಗುಡುಗಿದ ಯಡಿಯೂರಪ್ಪ
ಬಾದಾಮಿ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ, ಕುರುಬ ಸಮಾಜ ಹಾಗೂ ವಾಲ್ಮೀಕಿ ಸಮುದಾಯವ ಪ್ರಬಲವಾಗಿವೆ. ಹೀಗಾಗಿ ತಮ್ಮ ಭಾಷಣದುದ್ದಕ್ಕೂ ಈ ಮೂರು ಸಮುದಾಯಗಳ ಮತಗಳನ್ನು ಗುರಿಯಾಗಿಸಿಕೊಂಡು ಮತಬೇಟೆಗೆ ಇಳಿದ ಯಡಿಯೂರಪ್ಪ ಅವರು, ಕಾಂಗ್ರೆಸ್ ಅಪಪ್ರಚಾರವನ್ನ ವೀರಶೈವ ಲಿಂಗಾಯತರು ನಂಬಬಾರದು. ಏಕೆಂದರೆ ಲಿಂಗಾಯತ ನಾಯಕ ವೀರೇಂದ್ರ ಪಾಟಿಲ್ ಅವರಿಗೆ ಮೋಸ ಮಾಡಿದ್ದು ಕಾಂಗ್ರೆಸ್. ರಾಜೀವ್ ಗಾಂಧಿ ಅವರು ವಿಮಾನ ನಿಲ್ದಾಣದಲ್ಲಿ ನಿಂತು ವೀರೇಂದ್ರ ಪಾಟೀಲರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಈ ರೀತಿಯಾಗಿ ವೀರಶೈವ ಲಿಂಗಾಯತರಿಗೆ ಕಾಂಗ್ರೆಸ್ ನಾಯಕರು ದ್ರೋಹ ಮಾಡಿದ್ದಾರೆ. ಇಂತಹ ಪಕ್ಷಕ್ಕೆ ವೀರಶೈವರ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ಗುಡುಗಿದರು.
ಯಡಿಯೂರಪ್ಪ ಅವರಿಗೆ ಬಿಜೆಪಿಯವರು ಮೋಸ ಮಾಡಿದರು, ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾನು ಸ್ವತಃ ರಾಜೀನಾಮೆ ಕೊಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು. ಎಸ್ಟಿ ಸಮಾಜದ ಮಹಿಳೆಯನ್ನ ನಾವು ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ ಎಂಬುದನ್ನು ಎಸ್ಟಿ ಸಮಾಜದ ಬಂಧುಗಳು ತಿಳಿಯಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗ ಕಾಗಿನೆಲೆ ಹೇಗೆ ಅಭಿವೃದ್ದಿ ಮಾಡಿದ್ದೇನೆ ನೋಡಿಕೊಂಡು ಬರಬೇಕು ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಟಾಂಗ್ ನೀಡಿದ ಯಡಿಯೂರಪ್ಪ, ರಾಹುಲ್ ಗಾಂಧಿ ಅವರು ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಾನಾ ಆಗುತ್ತಾರಾ? ಮೋದಿ ಎಲ್ಲಿ, ರಾಹುಲ್ ಗಾಂಧಿ ಎಲ್ಲಿ ಎಂದು ವ್ಯಂಗ್ಯವಾಡಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ